ಜಿಲ್ಲೆ

ಸರ್ಕಾರಿ ಆಸ್ಪತ್ರೆಗೆ ಶಾಸಕ ಮಂಜುನಾಥ್ ಭೇಟಿ

ಕಿರಣ್ ಮಾದರಹಳ್ಳಿ

ಕೊಳ್ಳೇಗಾಲ: ತಾಲೂಕಿನ ಮಧುವನಹಳ್ಳಿ ಗ್ರಾಮದ ಆರವನಪುರ ಬೀದಿಯಲ್ಲಿ ಕಲುಷಿತ ನೀರು ಕುಡಿದ ಪರಿಣಾಮ ವಾಂತಿ, ಭೇದಿಯಾಗಿ ಆಸ್ಪತ್ರೆಗೆ ದಾಖಲಾಗಿದ್ದ ಅಸ್ವಸ್ಥರನ್ನು ಹನೂರು ಶಾಸಕ ಎಂ.ಆರ್.ಮಂಜುನಾಥ್ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.

ಕೊಳ್ಳೇಗಾಲ ಸರ್ಕಾರಿ ಅಸ್ಪತ್ರೆಯಲ್ಲಿ ದಾಖಲಾಗಿದ್ದ ಮಹದೇವಮ್ಮ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪುಟ್ಟರಾಜು ಅವರನ್ನು ಭೇಟಿ ಮಾಡಿ ಧೈರ್ಯ ತುಂಬಿದ ಬಳಿಕ ಸುದ್ದಿಗಾರರೊಂದಿಗೆ ಎಂ.ಆರ್ .ಮಂಜುನಾಥ್ ಮಾತನಾಡಿ, ಕಳೆದ ಎರಡ್ಮೂರು ದಿನ ಹಿಂದೆ ಮಧುವನಹಳ್ಳಿ ಗ್ರಾಮದ ಅವನಪುರದಲ್ಲಿ ಕಲುಷಿತ ನೀರು ಕುಡಿದು ಆರೋಗ್ಯದಲ್ಲಿ ಏರುಪೇರಾಗಿ ಸುಮಾರು 20 ಕ್ಕೂ ಹೆಚ್ಚು ಜನರು ಅಸ್ವಸ್ಥತಗೊಂಡಿದ್ದರು. ಇವೆರೆಲ್ಲರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಇದೀಗ ಇವರ ಆರೋಗ್ಯ ಸುಧಾರಿಸಿದೆ. ಕೆಲವರು ಆಸ್ಪತ್ರೆಯಿಂದ ಮನೆಗೆ ಹಿಂದಿರುಗಿದ್ದಾರೆ. ಕೊಳ್ಳೇಗಾಲದ ಆಸ್ಪತ್ರೆಯಲ್ಲಿ ಇಬ್ಬರು, ಮೈಸೂರಿನ ಆಸ್ಪತ್ರೆಯಲ್ಲಿ ಇಬ್ಬರು, ಚಾಮರಾಜನಗರ ಆಸ್ಪತ್ರೆಯಲ್ಲಿ ಒಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ. ಆತಂಕಪಡುವ ಅಗತ್ಯವಿಲ್ಲ ಯಾರ ಜೀವಕ್ಕೂ ತೊಂದರೆಯಿಲ್ಲ ಎಂದರು.

ಅರವನಪುರದ 2 ಬೋರ್‌ವೆಲ್‌ಗಳಲ್ಲಿ ನೀರು ಕಲುಷಿತ ಆಗಿರುವುದ್ದರಿಂದ ಈ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ಬೋರ್‌ವೆಲ್ ಪೈಪ್‌ಲೈನ್‌ಅನ್ನು ದುರಸ್ಥಿಪಡಿಸಲು ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ. ಜನರ ಕುಡಿಯಲು ಪ್ರತ್ಯೇಕ ನೀರಿನ ವ್ಯವಸ್ಥೆ ಮಾಡಲಾಗಿದೆ. ಈ ಅವಘಡದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಕಾಣುತ್ತಿದೆ. ಇನ್ಮುಂದೆ ಈ ರೀತಿ ಆಗದಂತೆ ಸಂಬಂಧಪಟ್ಟವರಿಗೆ ಸೂಚಿಸುತ್ತೇನೆ ಎಂದರು.

ಈ ವೇಳೆ ತಾಲೂಕಿನ ವಿವಿಧೆಡೆ ಜೆಜೆಎಂ ಕಾಮಗಾರಿ ಸಮರ್ಪಕವಾಗಿ ನಡೆದಿಲ್ಲ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಶಾಸಕರು ಪ್ರತಿಕ್ರಿಯಿಸಿ ಜೆಜೆಎಂ ಕಾಮಗಾರಿ ನಡೆದಿರುವ ಕಡೆ ನಾನೇ ಖುದ್ದು ಪರಿಶೀಲಿಸಿ ಕ್ರಮವಹಿಸುತ್ತೇನೆ ಎಂದು ತಿಳಿಸಿದರು. ಗ್ರಾಮಕ್ಕೆ ಭೇಟಿ: ನಂತರ ಶಾಸಕ ಎಂ. ಆರ್. ಮಂಜುನಾಥ್ ಮಧುವನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಕಲುಷಿತ ಗೊಂಡಿರುವ ಬೋರ್ ವೆಲ್ ಗಳ ವೀಕ್ಷಣೆ ಮಾಡಿದರು. ಈ ವೇಳೆ ಗ್ರಾಮಸ್ಥರಿಗೆ ಧೈರ್ಯ ತುಂಬಿದರು.