ಜಿಲ್ಲೆ

ಕಿರು ಸೇತುವೆಗಳ ದುರಸ್ತಿಗೆ ಸಾರ್ವಜನಿಕರ ಆಗ್ರಹ

ಕಿರಣ್ ಮಾದರಹಳ್ಳಿ

ಹನೂರು: ತಾಲೂಕಿನ ಬಹುತೇಕ ಕಡೆಗಳಲ್ಲಿ ರಸ್ತೆ ಮಟ್ಟದ ಕಿರು ಸೇತುವೆ ಶಿಥಿಲಾವಸ್ಥೆಗೊಂಡಿದ್ದು, ಸಂಪೂರ್ಣ ಹಾಳಾಗಿದೆ. ಇದೀಗ ಮಳೆ ಸುರಿಯಲಾರಂಭಿಸಿರುವುದರಿಂದ ಜೋರು ಮಳೆ ಬಂತೆಂದರೆ ಸೇತುವೆ ಮೇಲೆ ನೀರು ಹರಿಯುತ್ತದೆ.ಪರಿಣಾಮ ಸಾರ್ವಜನಿಕರು ಸಂಚರಿಸಲು ತುಂಬ ತೊಂದರೆಪಡುವಂತಾಗಿದ್ದು, ಮೇಲ್ಮಟ್ಟದ ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿದ್ದಾರೆ.

ತಾಲೂಕಿನಲ್ಲಿ ಚಿಂಚಳ್ಳಿ, ಮಣಗಳ್ಳಿ, ಕೆಂಚಯ್ಯನದೊಡ್ಡಿ, ಬೂದುಬಾಳು, ಭೈರನತ್ತ, ಉದ್ದನೂರು, ಬೆಳತ್ತೂರು, ಎಂ.ಟಿ.ದೊಡ್ಡಿ, ಬೂದಿಪಡಗ, ಪಿ.ಜಿ ಪಾಳ್ಯ, ಹುತ್ತೂರು, ಒಡೆಯರಪಾಳ್ಯ, ಮಿಣ್ಯಂ, ಪೊನ್ನಾಚಿ ಹಾಗೂ ಇನ್ನಿತರ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಮಾರ್ಗಗಳಲ್ಲಿ ಹಳ್ಳಗಳಿದ್ದು, ಅಡ್ಡಲಾಗಿ ಕಿರು ಸೇತುವೆಯನ್ನು ನಿರ್ಮಿಸಿ ದಶಕಗಳೇ ಕಳೆದಿದೆ. ಈ ಮಾರ್ಗಗಳು ಹತ್ತಾರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಈ ಮೂಲಕ ತಾಲೂಕು ಕೇಂದ್ರ ಹನೂರು, ಮ.ಬೆಟ್ಟ, ಕೊಳ್ಳೇಗಾಲ ಹಾಗೂ ಇನ್ನಿತರ ಕಡೆಗಳಲ್ಲಿ ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ಆದರೆ ಈ ಕಿರು ಸೇತುವೆಗಳು ಹಾಳಾಗಿ ಹಲವು ವರ್ಷಗಳೇ ಕಳೆದಿದೆ. ಇದರಿಂದ ಪ್ರತಿ ವರ್ಷ ಜೋರು ಮಳೆ ಬಂತೆಂದರೆ ಕೆಲವು ಸೇತುವೆ ಮೇಲೆ ಯಥೇಚ್ಛವಾದ ನೀರು ಹರಿದರೆ ಇನ್ನು ಕೆಲವು ಸೇತುವೆಗಳಲ್ಲಿನ (ಪೈಪ್) ತೂಬುಗಳು ಮುಚ್ಚಿ ಹೋಗಿರುವುದರಿಂದ ಕಸಕಡ್ಡಿಗಳು ಸಿಲುಕಿ ರಸ್ತೆಯ ಮೇಲೆ ನೀರು ಹರಿಯುತ್ತದೆ. ಗುಂಡಿಗಳಲ್ಲಿ ನೀರು ನಿಲ್ಲುವಂತಾಗುತ್ತದೆ. ಇದರಿಂದ ಸಾರ್ವಜನಿಕರು ಸಂಚರಿಸಲು ತೊಂದರೆ ಪಡುತ್ತಲೇ ಇದ್ದಾರೆ. ಸೇತುವೆ ನಿರ್ಮಿಸುವಂತೆ ಸಾರ್ವಜನಿಕರಿಂದ ಆಗಾಗ್ಗೆ ಒತ್ತಾಯ ಕೇಳಿ ಬರುತ್ತಲೇ ಇದೆ. ಆದರೆ ಪಿಡಬ್ಲುೃಡಿ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಗಮನಹರಿಸದಿರುವುದು ನಿಜಕ್ಕೂ ವಿಪರ್ಯಾಸ.

ಪ್ರತಿ ವರ್ಷವೂ ತೊಂದರೆ ತಪ್ಪಿದ್ದಲ್ಲ:
ತಾಲೂಕಿನಿಂದ ಮ.ಬೆಟ್ಟಕ್ಕೆ ತೆರಳುವ ಎಲ್ಲೇಮಾಳ ಗ್ರಾಮ ಸಮೀದಲ್ಲಿನ ಕಿರು ಸೇತುವೆ, ಹನೂರಿನಿಂದ ಮಣಗಳ್ಳಿ, ಚಿಂಚಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿನ ಕಿರು ಸೇತುವೆ, ಭೈರನತ್ತದಲ್ಲಿನ ಕಿರು ಸೇತುವೆ, ಲೊಕ್ಕನಹಳ್ಳಿ ಗ್ರಾಮದಿಂದ ಒಡೆಯರಪಾಳ್ಯ ಕಡೆಗಳಲ್ಲಿನ ಮಾರ್ಗದಲ್ಲಿ 5ಕ್ಕೂ ಹೆಚ್ಚು ಕಿರು ಸೇತುವೆಗಳಿದ್ದು, ಸಂಪೂರ್ಣ ಹಾಳಾಗಿವೆ. ಹಾಗಾಗಿ ಪ್ರತಿ ವರ್ಷವೂ ಜೋರು ಮಳೆ ಬಂದಾಗ ರಸ್ತೆ ಮೇಲೆ ಯಥೇಚ್ಛವಾದ ನೀರು ಹರಿಯುತ್ತದೆ. ಇದರಿಂದ ಈ ಭಾಗದ ರೈತರು ಜಾನುವಾರುಗಳನ್ನು ಕರೆದೊಯ್ಯಲು ತೊಂದರೆ ಅನುಭವಿಸುವಂತಾದರೆ ವಾಹನಗಳು ಸಂಚರಿಸಲು ಸಾಧ್ಯವಾಗದೇ ವಿದ್ಯಾರ್ಥಿಗಳು ಶಾಲಾ, ಕಾಲೇಜಿಗೆ ತೆರಳದೇ ವಾಪಸ್ಸಾಗಿರುವ ಘಟನೆಗಳು ಜರುಗಿದೆ. ಹಾಗೆಯೇ ಹುಯಿಲನತ್ತ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಹಳ್ಳದಲ್ಲಿ ಜಾನುವಾರುಗಳು ಕೊಚ್ಚಿ ಹೋಗಿರುವ ಘಟನೆಗಳು ನಡೆದಿದೆ. ಇನ್ನು ಕಳೆದ ವರ್ಷ ಭೈರನತ್ತದ ಸೇತುವೆ ಮೇಲೆ ಆಯತಪ್ಪಿ ಬಿದ್ದು 10ಕ್ಕೂ ಹೆಚ್ಚು ಜನರು ಗಾಯಗೊಂಡು ಆಸ್ಪತ್ರೆಗೆ ಸೇರಿರುವ ಘಟನೆಯೂ ಜರುಗಿದೆ. ಆದ್ದರಿಂದ ಜೋರು ಮಳೆ ಬಂತೆಂದರೆ ಈ ಮಾರ್ಗದ ಗ್ರಾಮಗಳಲ್ಲಿನ ಜನರಿಗೆ ಸಂಚರಿಸುವುದೇ ಒಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.

ಪೂರ್ಣವಾಗದ ಸೇತುವೆ ಕಾಮಗಾರಿ:
ಮಾಜಿ ಶಾಸಕ ಆರ್.ನರೇಂದ್ರ ಅವರು ಕಳೆದ ವಿಧಾನಸಭೆ ಅವಧಿಯಲ್ಲಿ ಸಂಪೂರ್ಣ ಹಾಳಾಗಿದ್ದ ನಾಲ್‌ರೋಡ್ ಹೂಗ್ಯಂ ಮಾರ್ಗ, ಹನೂರು - ಲೊಕ್ಕನಹಳ್ಳಿ, ವೈಶಂಪಾಳ್ಯ, ತೊಮಿಯಾರ್‌ಪಾಳ್ಯ ಹಾಗೂ ಇನ್ನಿತರ ಕಡೆಗಳಲ್ಲಿ ಕಿರು ಸೇತುವೆಯನ್ನು ಮೇಲ್ಮಟ್ಟದ ಸೇತುವೆಯಾಗಿ ನಿರ್ಮಿಸಲಾಗಿದೆ. ಇದೇ ಅವಧಿಯಲ್ಲಿ ಹನೂರಿನ ತಟ್ಟೆಹಳ್ಳ ಹಾಗೂ ಸ್ವಾಮಿ ಹಳ್ಳದ ಸೇತುವೆ ಕಾಮಗಾರಿಯನ್ನು ಕೈಗೊಂಡು 3 ವರ್ಷ ಕಳೆದಿದೆ. ಆದರೆ ಕಾಮಗಾರಿ ಪೂರ್ಣಗೊಂಡಿಲ್ಲ. ಇದರಿಂದ ಸಾರ್ವಜನಿಕರು ಸಂಚರಿಸಲು ತುಂಬ ತೊಂದರೆ ಪಡುವಂತಾಗಿದ್ದು, ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸೇತುವೆ ನಿರ್ಮಾಣ ಅನಿವಾರ್ಯ:
ಇದೀಗ ಮಳೆಯಾಗುತ್ತಿದೆ. ದುಸ್ಥಿತಿಯಲ್ಲಿರುವ ಕಿರು ಸೇತುವೆಗಳು ಮತ್ತಷ್ಟು ಹದಗೆಡುತ್ತಿದೆ. ಜತೆಗೆ ಈ ಬಾರಿ ಮಳೆಗಾಲದ ವೇಳೆ ಉತ್ತಮ ಮಳೆಯಾಗುವ ಸಾಧ್ಯತೆ ಇದೆ. ಆದ್ದರಿಂದ ಸಂಪೂರ್ಣ ಹಾಳಾಗಿರುವ ಕಿರು ಸೇತುವೆಗಳನ್ನು ಮೇಲ್ಮಟ್ಟದ ಸೇತುವೆಯಾಗಿ ಅಭಿವೃದ್ಧಿಪಡಿಸುವುದು ಸಾರ್ವಜನಿಕರ ಸುಗಮ ಸಂಚಾರದ ದೃಷ್ಟಿಯಿಂದ ಒಳ್ಳೆಯದು. ಇಲ್ಲವಾದಲ್ಲಿ ಮಳೆಗಾಲದ ವೇಳೆ ಸಾರ್ವಜನಿಕರ ಸಂಚಾರಕ್ಕೆ ತುಂಬ ತೊಂದರೆಯಾಗಲಿದೆ. ಆದ್ದರಿಂದ ಪಿಡಬ್ಲುೃಡಿ ಇಲಾಖೆ ಅಧಿಕಾರಿಗಳು ಇನ್ನಾದರೂ ಇತ್ತ ಗಮನಹರಿಸಿ ಮಳೆಗಾಲಕ್ಕೂ ಮುನ್ನ ಸೇತುವೆಗಳನ್ನು ಅಭಿವೃದ್ಧಿಪಡಿಸುವುದರ ಮೂಲಕ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಕಳೆದ ವರ್ಷ ಮಳೆಗಾಲದ ವೇಳೆ ಗ್ರಾಮದ ಹಾಳಾಗಿರುವ ಕಿರು ಸೇತುವೆ ಮೇಲೆ ಒಂದು ತಿಂಗಳ ಕಾಲ ನೀರು ಹರಿಯಿತು. ಈ ವೇಳೆ ಸುಮಾರು 10ಕ್ಕೂ ಹೆಚ್ಚು ಜನರು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಮೇಲ್ಮಟ್ಟದ ಸೇತುವೆಯನ್ನು ನಿರ್ಮಿಸುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೂ ಮನವಿ ಸಲ್ಲಿಸಲಾಗಿದೆ. ಆದರೆ ಈವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಸಂಬಂಧಪಟ್ಟವರು ಈ ಬಗ್ಗೆ ಗಮನಹರಿಸಬೇಕು.ರಾಜು, ಭೈರನತ್ತ ಗ್ರಾಮ ಹನೂರು. ತಾಲೂಕು ಹಾಳಾಗಿರುವ ಕಿರು ಸೇತುವೆಗಳ ನಿರ್ವಹಣೆ ಸಂಬಂಧ ಜೂನ್ ಅಥವಾ ಜುಲೈ ತಿಂಗಳಲ್ಲಿ ಸರ್ಕಾರಕ್ಕೆ ವರದಿ ಕಳುಹಿಸಲಾಗುವುದು. ಅನುದಾನ ದೊರೆತ ಬಳಿಕ ರಿಪೇರಿ ಪಡಿಸಲಾಗುವುದು. ಜತೆಗೆ ತೀವ್ರ ಹಾಳಾಗಿರುವ ಸೇತುವೆಗಳ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಸೇತುವೆ ನಿರ್ಮಾಣಕ್ಕೆ ಅಗತ್ಯ ಕ್ರಮವಹಿಸಲಾಗುವುದು.ಪುರುಷೋತ್ತಮ್, ಪಿಡಬ್ಲುೃಡಿ ಎಇಇ ಕೊಳ್ಳೇಗಾಲ ಉಪ ವಿಭಾಗ.