ಹನೂರು: ತಾಲೂಕಿನ ಕಾಡಂಚಿನ ಪೊನ್ನಾಚಿ ಗ್ರಾಮದ ಮುಖ್ಯ ರಸ್ತೆಯಲ್ಲಿ ವಿದ್ಯುತ್ ಕಂಬ ಬಾಗಿದ್ದು, ಅವಘಡ ಸಂಭವಿಸುವ ಮುನ್ನ ದುರಸ್ತಿ ಮಾಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ವಿದ್ಯುತ್ ಕಂಬ ಹಾದು ಹೋಗಿರುವ ಸಮೀಪದಲ್ಲೇ ಮನೆಗಳಿವೆ. ಕಂಬ ಬಾಗಿದ್ದು, ತಂತಿಗಳು ಜೋತು ಬಿದ್ದಿವೆ. ತಂತಿಗಳು ಕೈಗೆಟಕುವಂತಿದ್ದು ಅಪಾಯಕ್ಕೆ ಆಹ್ವಾನ ನೀಡುತ್ತಿವೆ. ಸಮೀಪದಲ್ಲೇ ಕೆರೆ ಇರುವುದರಿಂದ ಆನೆಗಳು ನೀರು ಕುಡಿಯಲು ಬರುತ್ತವೆ. ಒಂದು ವೇಳೆ ಕಂಬ ಉರುಳಿ ಬಿದ್ದರೆ ಅನಾಹುತ ಸಂಭವಿಸುವ ಸಾಧ್ಯತೆ ಹೆಚ್ಚಿದೆ. ಮನೆಗಳಲ್ಲಿ ಆಗಾಗ್ಗೆ ಶಾರ್ಟ್ ಸರ್ಕ್ಯೂಟ್ ಸಂಭವಿಸುತ್ತಿದ್ದು, ವಿದ್ಯುತ್ ಉಪಕರಣಗಳು ಹಾಳಾಗುತ್ತಿವೆ. ಈ ಬಗ್ಗೆ ಸೆಸ್ಕ್ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಸಮಸ್ಯೆ ಬಗೆಹರಿಸಬೇಕು ಎಂದು ಮನವಿ ಮಾಡಿದ್ದಾರೆ.