ಚಾಮರಾಜನಗರ : ಬುದ್ಧ, ಬಸವ, ಅಂಬೇಡ್ಕರ್ ಹಾಗೂ ಬಾಬೂಜಿ ಅವರು ಸಮಸಮಾಜ ನಿರ್ಮಾಣಕ್ಕಾಗಿ ಶ್ರಮಿಸಿದ ಮಹಾಚೇತನರಾಗಿದ್ದು, ಅವರ ಹಾದಿಯಲ್ಲಿ ನಾವೆಲ್ಲರೂ ಸಾಗಬೇಕಿದೆ ಎಂದು ನಿವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಡಾ.ಆರ್.ರಾಜು ಹೇಳಿದರು.
ನಗರದ ಕನ್ನಡ ಸಾಹಿತ್ಯ ಪರಿಷತ್ ಕಚೇರಿಯಲ್ಲಿ ಕರ್ನಾಟಕ ಸೇನಾಪಡೆ ವತಿಯಿಂದ ಶುಕ್ರವಾರ ನಡೆದ ಜಗಜ್ಯೋತಿ ಬಸವೇಶ್ವರ, ಸಂವಿಧಾನ ಶಿಲ್ಪಿ ಡಾ ಬಿ.ಆರ್.ಅಂಬೇಡ್ಕರ್, ಹಸಿರುಕ್ರಾಂತಿ ಹರಿಕಾರ ಡಾ.ಬಾಬುಜಗಜೀವನರಾಂ ಅವರ ಸ್ಮರಣೆ ಹಾಗೂ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕ್ರಿ.ಪೂರ್ವದಲ್ಲಿ ಭಗವಾನ್ ಬುದ್ಧ, 12 ನೇಶತಮಾನದಲ್ಲಿ ಜಗಜ್ಯೋತಿ ಬಸವೇಶ್ವರರು ಸಮಸಮಾಜ ನಿರ್ಮಾಣಕ್ಕಾಗಿ ಶ್ರಮಿಸಿದರು. ಅವರ ಪರಿಕಲ್ಪನೆಯನ್ನು ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನದಲ್ಲಿ ಅಳವಡಿಸಿ ಕಾನೂನಾಗಿ ಜಾರಿ ಮಾಡುವ ಮೂಲಕ ಸರ್ವರಿಗೂ ಸಮಾನತೆ ನೀಡಿದ್ದಾರೆ. ಉಪಪ್ರಧಾನಿ ಬಾಬುಜಗಜೀವನರಾಂ ದೇಶದ ಕೃಷಿ ಸಚಿವರಾಗಿ ಹಸಿರು ಕ್ರಾಂತಿಯ ಮೂಲಕ ದೇಶದಲ್ಲಿ ಹೆಚ್ಚು ಹೆಚ್ಚು ಆಹಾರ ಉತ್ಪಾದನೆ ಮಾಡುವಂತೆ ಮಾಡಿದ ಕೀತಿ ಅವರಿಗೆ ಸಲ್ಲುತ್ತದೆ ಎಂದು ತಿಳಿಸಿದರು.
ಈ ಸಮಾನತೆಯ ಮಹಾಚೇತನರು ಹಾಕಿಕೊಟ್ಟ ಹಾದಿಯಲ್ಲಿ ನಾವೆಲ್ಲರೂ ಫಲ ಅನುಭವಿಸುತ್ತಿದ್ದೇವೆ. ಅವರ ಆದರ್ಶಗಳನ್ನು ವಿದ್ಯಾರ್ಥಿಗಳು ಮೈಗೂಡಿಸಿಗೊಂಡು ಸಾಗಬೇಕಿದೆ ಎಂದರು. ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿ ಪ್ರತಿಭಾ ಪುರಸ್ಕಾರ ಪಡೆದಿರುವ ವಿದ್ಯಾರ್ಥಿಗಳು ಶ್ರಮಪಟ್ಟು ಓದಿದ್ದಾರೆ ಅವರಿಗೆ ಪ್ರತಿಫಲ ದೊರಕಿದೆ ಎಂದರು.
ಹರವೆ ವಿರಕ್ತ ಮಠದ ಪೀಠಾಧ್ಯಕ್ಷ ಸರ್ಪಭೂಷಣಸ್ವಾಮಿ ಮಾತನಾಡಿ, ಬಸವಣ್ಣ, ಅಂಬೇಡ್ಕರ್, ಬಾಬುಜಗಜೀವನರಾಂ ಮೂವರು ಮಹಾಚೇತನರು ನಮ್ಮೆಲ್ಲರನ್ನು ಕತ್ತಲಿನಿಂದ ಬೆಳಕಿನ ಕಡೆಗೆ ಕೊಂಡೊಯ್ಯೂವ ಕೆಲಸ ಮಾಡಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಸರ್ಕಾರಿ ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಮಂಜುನಾಥ್ ಪ್ರಸನ್ನ, ಕನ್ನಡ ಮಹಾಸಭಾ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶೈಲಕುಮಾರ್, ಕನ್ನಡ ಮಹಾಸಭಾದ ಗೌರವಾಧ್ಯಕ್ಷ ಶಾ.ಮುರಳಿ, ಸಹ ಕಾರ್ಯದರ್ಶಿ ಪಣ್ಯದಹುಂಡಿ ರಾಜು, ನಗರಸಭಾ ಮಾಜಿ ಅಧ್ಯಕ್ಷ ಸಿ.ಎಸ್.ಸುರೇಶ್‌ನಾಯಕ, ಮಾಜಿ ಸದಸ್ಯ ಮಹಮ್ಮದ್‌ಅಸ್ಗರ್, ಸಿ.ಕೆ.ಮಂಜುನಾಥ್, ಸಾಮಾಜಿಕ ನ್ಯಾಯ ವೇದಿಕೆ ಕೇಂದ್ರ ಸಮಿತಿ ಸದಸ್ಯ ಕೆ.ಜಗದೀಶ್, ಗು.ಪುರುಷೋತ್ತಮ್, ಕನ್ನಡ ತಾಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷ ಸುರೇಶ್ ಋಗ್ವೇದಿ, ನಿಜಧ್ವನಿ ಗೋವಿಂದರಾಜು ಹಾಜರಿದ್ದರು.