ಜಿಲ್ಲೆ

ಪರಿಹಾರ ಕೊಡಿಸುವಲ್ಲಿ ಜನಪ್ರತಿನಿಧಿಗಳು ನಿರ್ಲಕ್ಷ್ಯ

ಕಿರಣ್ ಮಾದರಹಳ್ಳಿ

ಗುಂಡ್ಲುಪೇಟೆ: ರೈತರಿಗೆ ಬರ ಹಾಗೂ ಮಳೆಯಿಂದ ಹಾನಿಗೊಳಗಾದ ಬೆಳೆಗೆ ಪರಿಹಾರ ಕೊಡಿಸುವ ಬಗ್ಗೆ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಸಂಪೂರ್ಣ ನಿರ್ಲಕ್ಷ್ಯವಹಿಸಿದ್ದಾರೆ ಎಂದು ಸಾಮೂಹಿಕ ನಾಯಕತ್ವದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ಆರೋಪಿಸಿದರು.

ತಾಲೂಕಿನ ಹೊಸಪುರ ಗ್ರಾಮದಲ್ಲಿ ಶನಿವಾರ ಸಾಮೂಹಿಕ ನಾಯಕತ್ವದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಗ್ರಾಮ ಘಟಕ ಉದ್ಘಾಟಿಸಿ ಅವರು ಮಾತನಾಡಿದರು. ಗಾಳಿ, ಮಳೆಗೆ ಸಾವಿರಾರು ಎಕರೆ ಪ್ರದೇಶಗಳಲ್ಲಿ ಬೆಳೆದಿದ್ದ ಹಲವು ಬೆಳೆಗಳು ನಾಶವಾಗಿವೆ. ಆದರೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಇತ್ತ ಗಮನಹರಿಸದೆ ನಿರ್ಲಕ್ಷ್ಯವಹಿಸಿದ್ದಾರೆ. ಸದ್ಯ ಪ್ರತಿ ಎಕರೆಯಲ್ಲಿ ಬೆಳೆ ಬೆಳೆಯಲು ಲಕ್ಷಾಂತರ ರೂ.ಖರ್ಚಾಗುತ್ತಿದ್ದರೂ ಯಾವುದೋ ಕಾಲದ ಮಾನದಂಡದ ಆಧಾರದ ಮೇಲೆ ಕೇವಲ 6,800 ರೂ.ಪರಿಹಾರ ಕೊಡಲು ಮುಂದಾಗಿದ್ದಾರೆ. ಈ ಬಗ್ಗೆ ಜಿಲ್ಲೆಯ ಎಲ್ಲ ಕಡೆಗಳಲ್ಲೂ ರೈತರು ಪ್ರತಿಭಟನೆ ನಡೆಸುತ್ತಿದ್ದರೂ ಗಮನಿಸದಂತೆ ಮೌನವಾಗಿದ್ದಾರೆ ಎಂದು ದೂರಿದರು.

ನಿಜವಾಗಿಯೂ ರೈತರ ಬಗ್ಗೆ ಕಾಳಜಿಯಿದ್ದರೆ ಪ್ರತಿ ಎಕರೆಗೆ 1 ಲಕ್ಷ ರೂ.ಪರಿಹಾರ ಘೋಷಿಸಬೇಕು. ವನ್ಯಜೀವಿ ದಾಳಿ ಪ್ರಕರಣಗಳಿಗೆ ಮಾರುಕಟ್ಟೆ ಮೌಲ್ಯದ ಮೇಲೆ ಪರಿಹಾರ ನೀಡಬೇಕು. ಸರ್ಕಾರ ಕೂಡಲೇ ಬರ ಪರಿಹಾರ ಹಾಗೂ ಮಳೆಯಿಂದ ಹಾನಿಗೊಳಗಾದ ರೈತರಿಗೆ ಶೀಘ್ರ ಪರಿಹಾರ ನೀಡದಿದ್ದರೆ ಜಿಲ್ಲಾಡಳಿತ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು. ತಾಲೂಕು ಅಧ್ಯಕ್ಷ ನಾಗಪ್ಪ, ಜಿಲ್ಲಾ ಸಮಿತಿಯ ಷಣ್ಮುಖಸ್ವಾಮಿ, ಗಣೇಶ್, ಮಣಿಕಂಠ, ಸಿದ್ದರಾಜು ಇದ್ದರು.