ಜಿಲ್ಲೆ

ವಸತಿ ಶಾಲೆಯಲ್ಲಿ ಶೇ.100 ಫಲಿತಾಂಶಕ್ಕೆ ಶ್ರಮಿಸೋಣ

ಚಾಮರಾಜನಗರ : ಸರ್ಕಾರಿ ವಸತಿ ಶಾಲೆಗಳು ಹಾಗೂ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯಗಳಲ್ಲಿ ವ್ಯಾಸಂಗ ಮಾಡುವ ಎಲ್ಲ ವಿದ್ಯಾರ್ಥಿಗಳು ಉತ್ತೀರ್ಣರಾಗಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಶಿಕ್ಷಕರು, ವಾರ್ಡನ್ ಹಾಗೂ ನಿಲಯ ಪಾಲಕರು ಗುಣಮಟ್ಟದ ಶಿಕ್ಷಣವನ್ನು ನೀಡಬೇಕು ಎಂದು ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಮಲ್ಲಿಕಾರ್ಜುನ್ ಹೇಳಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಕೆಆರ್‌ಇಐಎಸ್ ವಸತಿ ಶಾಲೆಯ ವಿದ್ಯಾರ್ಥಿಗಳು ಹಾಗೂ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‌ಗಳಲ್ಲಿ 2023-24ನೇ ಸಾಲಿನಲ್ಲಿ ವ್ಯಾಸಂಗ ಮಾಡಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಶುಕ್ರವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡಿದ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅತಿ ಹೆಚ್ಚು ಅಂಕಗಳನ್ನು ಪಡೆದು ಪ್ರತಿಭಾ ಪುರಸ್ಕಾರ ಪಡೆದುಕೊಳ್ಳುವುದು ಹೆಮ್ಮೆ ಎನ್ನಿಸಿದೆ. ಆದರೆ, ವಸತಿ ಶಾಲೆಯಲ್ಲಿರುವ ಎಲ್ಲ ವಿದ್ಯಾರ್ಥಿಗಳು ಸಹ ಉತ್ತೀರ್ಣರಾಗುವ ಮಟ್ಟದಲ್ಲಿ ಅಲ್ಲಿನ ಶಿಕ್ಷಕರು, ವಾರ್ಡನ್ ಮತ್ತು ನಿಲಯಪಾಲಕರು ಜವಾಬ್ದಾರಿಯಿಂದ ತಮ್ಮ ಕರ್ತವ್ಯವನ್ನು ನಿರ್ವಹಿಸಬೇಕಾಗುತ್ತದೆ ಎಂದು ಹೇಳಿದರು.

ಎಲ್ಲ ವಿದ್ಯಾರ್ಥಿಗಳು ಬುದ್ಧಿವಂತರಾಗಿರುತ್ತಾರೆ. ಅವರನ್ನು ತಯಾರು ಮಾಡುವ ಶಿಕ್ಷಕರು ಹೆಚ್ಚಿನ ನಿಗಾ ವಹಿಸಬೇಕು. ಮುಂದಿನ ದಿನಗಳಲ್ಲಿ ಶೇ.100 ರಷ್ಟು ವಿದ್ಯಾರ್ಥಿಗಳು ಪಾಸಾಗಬೇಕು. ವಿದ್ಯಾರ್ಥಿಗಳ ಪಾಲಕರು ಬಹಳ ಶ್ರಮಪಟ್ಟು ಹಾಗೂ ವಿಶ್ವಾಸವಿಟ್ಟು ಹಾಸ್ಟೆಲ್‌ಗಳಿಗೆ ಸೇರಿಸುತ್ತಾರೆ. ಈ ವಿದ್ಯಾರ್ಥಿಗಳನ್ನು ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ತಯಾರು ಮಾಡಿ ಅವರನ್ನು ಉತ್ತೀರ್ಣರಾಗುವಂತೆ ಮಾಡಿ, ಭವಿಷ್ಯವನ್ನು ಉಜ್ವಲಗೊಳಿಸಿ ಎಂದರು.

ಸಮಾಜ ಕಲ್ಯಾಣ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕ ಚಿಕ್ಕಬಸವಯ್ಯ ಮಾತನಾಡಿ, ಹಾಸ್ಟೆಲ್ ವಿದ್ಯಾರ್ಥಿಗಳು ಫೇಲ್ ಆಗದಂತೆ ನೋಡಿಕೊಳ್ಳಬೇಕು. ಹಾಸ್ಟೆಲ್‌ಗಳು ಹಾಗೂ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಎಲ್ಲಾ ವಿದ್ಯಾರ್ಥಿಗಳ ಜತೆಗೂಡಿ ಕಾರ್ಯಗಾರವನ್ನು ಮಾಡಿದರೆ ಹೆಚ್ಚಿನ ಫಲಿತಾಂಶ ಬರುತ್ತದೆ. ಮಕ್ಕಳಲ್ಲಿ ಅತ್ಮವಿಶ್ವಾಸ ಹೆಚ್ಚುತ್ತದೆ ಎಂದು ಸಲಹೆ ನೀಡಿದರು.
ಸಮಾಜ ಕಲ್ಯಾಣ ಇಲಾಖೆಯ ಸಹಾಯ ನಿರ್ದೇಶಕ ಮೋಹನ್ ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಲಿಂಗರಾಜೇ ಆರಸ್, ಜಿಲ್ಲಾ ಸಮನ್ವಯಾಧಿಕಾರಿ ಕೆ.ಪಿ.ಚಂದ್ರು, ಪ್ರಾಂಶುಪಾಲ ಗುರುಪ್ರಸಾದ್, ಮಹದೇವಪ್ರಸಾದ್, ಸವಿತಾ, ನಾಗೇಂದ್ರ, ಭವಾನಿಶಂಕರ್ ಇತರರು ಉಪಸ್ಥಿತರಿದ್ದರು.