ಚಾಮರಾಜನಗರ: ದೇಶದ ಯುವಶಕ್ತಿ ವಿಧ್ಯಭ್ಯಾಸದ ಜತೆಗೆ ಸೇವಾಗುಣಗಳನ್ನು ಮೈಗೂಡಿಸಿಕೊಂಡರೆ ಸಮಾಜದಲ್ಲಿ ಪರಿವರ್ತನೆ ಸಾಧ್ಯವಾಗುತ್ತದೆ ಎಂದು ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತ ಸುರೇಶ್ ಎನ್.ಋಗ್ವೇದಿ ಸಲಹೆ ನೀಡಿದರು.
ನಗರದ ಸೇವಾಭಾರತಿ ಕಾಲೇಜಿನಲ್ಲಿ ಯೂತ್ ಫಾರ್ ಸೇವಾ ಸಂಸ್ಥೆ ವತಿಯಿಂದ ಭಾನುವಾರ ಆಯೋಜಿಸಿದ್ದ ಸೇವಾ ಸಂಭ್ರಮ-2024 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನಮ್ಮ ದೇಶದ ಯುವಕರು ಜ್ಞಾನಶಕ್ತಿ ಹಾಗು ಸೇವಾ ಧರ್ಮದ ಗುಣಗಳ ಮೂಲಕ ವಿಶ್ವಕ್ಕೆ ಮಾದರಿಯಾಗಿದ್ದಾರೆ. ಇಡೀ ಜಗತ್ತಿನಲ್ಲಿ ಅತಿ ಹೆಚ್ಚು ಯುವಶಕ್ತಿಯನ್ನು ಹೊಂದಿರುವ ಭಾರತಕ್ಕೆ ಭವಿಷ್ಯದಲ್ಲಿ ಮಹತ್ವದ ಸ್ಥಾನ ದೊರೆಯಲಿದೆ. ಯುವಶಕ್ತಿ ಕಲೆ ,ಸಾಹಿತ್ಯ, ವಿಜ್ಞಾನ, ಶಿಕ್ಷಣ , ತಂತ್ರಜ್ಞಾನ ಹಾಗು ಸೇವಾ ಕ್ಷೇತ್ರಗಳಲ್ಲಿ ಅಪಾರ ಸೇವೆ ಸಲ್ಲಿಸುತ್ತಿದ್ದಾರೆ. ಯುವಕರಿಗೆ ಸನ್ಮಾರ್ಗದ ತೆಗೆ ಸಂಸ್ಕಾರ, ಸಂಸ್ಕೃತಿ, ಸಂಘಟನೆಯ ಮಾರ್ಗದರ್ಶನವನ್ನು ನೀಡಬೇಕಿದೆ ಎಂದರು.
ಈ ಕಾರ್ಯಕ್ರಮದ ಮೂಲಕ ಯೂತ್ ಾರ್ ಸೇವಾಸಂಸ್ಥೆ ಗಡಿ ಭಾಗದ ಸಾವಿರಾರು ವಿದ್ಯಾರ್ಥಿಗಳಿಗೆ ವೇದಿಕೆ ಕಲ್ಪಿಸುತ್ತಿದೆ. ವಿದ್ಯಾರ್ಥಿಗಳಿಗೆ ಶಿಕ್ಷಣದ ಪರಿಕರಗಳನ್ನು ನೀಡುವ ಮೂಲಕ ಅವರ ಜವಾಬ್ದಾರಿಯನ್ನು ಹೆಚ್ಚಿಸುತ್ತಿದೆ. ಯುವಕರು ಶಿಕ್ಷಣದ ಸಂದರ್ಭದಲ್ಲಿ ಎಚ್ಚರಿಕೆಯ ಮಾರ್ಗವನ್ನು ಅನುಸರಿಸಬೇಕು ಎಂದು ಸಲಹೆ ನೀಡಿದರು.
ಇನ್ನರ್ ವೀಲ್ ಸಂಸ್ಥೆಯ ಅಧ್ಯಕ್ಷರಾದ ಪೂಜಾ ಸುಭಾಷ್ ಮಾತನಾಡಿ, ಯುವಕರು ಸದಾಕಾಲ ಕ್ರಿಯಾಶೀಲರಾಗಿದ್ದು, ಸಮಾಜ ಸೇವೆಯ ಗುಣವನ್ನು ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳಲಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರೋಟರಿ ಸಿಲ್ಕ್ ಸಿಟಿಯ ಅಧ್ಯಕ್ಷ ಅಜಯ್ ಕುಮಾರ್, ಸಂಜೀವಿನಿ ಟ್ರಸ್ಟ್ ಕಾರ್ಯದರ್ಶಿ ಸತೀಶ್ ಕುಮಾರ್, ಯೂಥ್ ಫಾರ್ ಸೇವಾ ಸಂಸ್ಥೆಯ ವಿಷ್ಣು, ತೇಜ ನಾಯಕ್, ಮನೋಜ್ ಹಾಗೂ ಇತರರು ಹಾಜರಿದ್ದರು.