ಜಿಲ್ಲೆ

ವಿಷಮುಕ್ತ ಆಹಾರಕ್ಕೆ ಸಾವಯವ ಕೃಷಿ ಸಹಕಾರಿ

ಎ.ಎಸ್.ಮಣಿಕಂಠ

ಚಾಮರಾಜನಗರ: ರೈತರು ತಮ್ಮ ಜೀವನವನ್ನು ಸುಖಮಯ ಮಾಡಿಕೊಳ್ಳಲು ವಿಷಮುಕ್ತ ಬೇಸಾಯ ಅಥವಾ ಸಾಯವಯ ಕೃಷಿ ಪದ್ಧತಿ ಸಹಕಾರಿಯಾಗಿದೆ ಎಂದು ರಾಜಸ್ಥಾನದ ಮೌಂಟ್‌ಅಬು ಗ್ರಾಮೀಣ ಸೇವಾ ವಿಭಾಗದ ಅಂತರಾಷ್ಟ್ರೀಯ ಅಧ್ಯಕ್ಷ ರಾಜಯೋಗಿ ಬ್ರಹ್ಮಾಕುಮಾರ ರಾಜುಭಾಯೀ ಜೀ ಸಲಹೆ ನೀಡಿದರು.

ನಗರದ ಬಿ.ರಾಚಯ್ಯ ಜೋಡಿರಸ್ತೆಯಲ್ಲಿರುವ ಆಧ್ಯಾತ್ಮಿಕ ಸಂಸ್ಥೆ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಪ್ರಕಾಶ ಭವನದಲ್ಲಿ ಶನಿವಾರ ಆಯೋಜಿಸಿದ್ದ ಶಾಶ್ವತ ಯೋಗಿಕ ಬೇಸಾಯದ ಕುರಿತ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದರು.

ಅನ್ನ ದಾತ ಸುಖೀ ಭವ ಎಂದು ಹೇಳುತ್ತಾರೆ, ಆದರೆ ಇಂದಿನ ಕೆಲವು ರೈತರು ಒತ್ತಡಕ್ಕೆ ಸಿಲುಕಿ ದುರಭ್ಯಾಸ, ದುಶ್ಚಟಗಳಿಂದ ತಮ್ಮಜೀವನ ಮೌಲ್ಯವನ್ನು ಕಳೆದುಕೊಳ್ಳುತ್ತಿದ್ದಾರೆ. ವಿಷಮುಕ್ತ ಆಹಾರಕ್ಕಾಗಿ ಸಾವಯವ ಕೃಷಿಯನ್ನು ಅಳವಡಿಸಿಕೊಳ್ಳಬೇಕು ಎಂದರು.

ಕೃಷಿ ವಿಜ್ಣಾನ ಕೇಂದ್ರದ ಹಿರಿಯ ತಾಂತ್ರಿಕ ಅಧಿಕಾರಿ ಡಾ.ಪುಂಪನಗೌಡ ಮಾತನಾಡಿ, ಮಣ್ಣಿನ ಸತ್ವ ಮತ್ತು ಬೆಳೆಯ ಸತ್ವವನ್ನು ಹೆಚ್ಚಿಸಲು ಹಾಗೂ ಬಳಕೆದಾರರ ಆರೋಗ್ಯವನ್ನು ಹೆಚ್ಚಿಸಲು ರೈತರು ಕೊಟ್ಟಿಗೆ ಗೊಬ್ಬರವನ್ನು ಹೆಚ್ಚು ಉಪಯೋಗಿಸಬೇಕು. ಕೀಟ ನಾಶಕ ಸಿಂಪಡಣೆ ದವಸದಾನ್ಯದಲ್ಲಿರುವ ಪೌಷ್ಟಿಕಾಂಶ ಮಣ್ಣಿನಲ್ಲಿರುವ ಪೌಷ್ಟಿಕಾಂಶ ಕಡಿಮೆಯಾಗುತ್ತದೆ. ಇದರಿಂದ ಹೃದಯಾಘಾತದಂತಹ ಕಾಯಿಲೆಗಳಿಗೆ ಎಡೆ ಮಾಡಿಕೊಡುತ್ತದೆ ಎಂದರು.

ರಾಜಯೋಗ ರಿಟ್ರೀಟ್ ಸೆಂಟರ್ ಪ್ರಾಂಶುಪಾಲ ಬಿ.ಕೆ.ರಂಗನಾಥ ಶಾಸ್ತ್ರೀಜೀ ಮಾತನಾಡಿ, ಬೀಜದಂತೆ ವೃಕ್ಷ ಎಂದು ಹೇಳುತ್ತಾರೆ. ಹಾಗೇ ಬೀಜಕ್ಕೆ ಪರಮಾತ್ಮನ ನೆನಪಿನ ಕಿರಣಗಳನ್ನು ತುಂಬಿ ಬಿತ್ತನೆ ಮಾಡಿದ್ದೇ ಆದರೆ ಆರೋಗ್ಯಕರ ಇಳುವರಿಯನ್ನು ಪಡೆಯಬಹುದು ಎಂದರು.

ಕಾರ್ಯಕ್ರಮದಲ್ಲಿ ರೈತ ಹೋರಾಟಗಾರ ಹೊನ್ನೂರು ಪ್ರಕಾಶ್, ರಾಜಯೋಗ ಶಿಕ್ಷಣ ತಜ್ಞ ಬ್ರಹ್ಮಾಕುಮಾರ ಪ್ರಾಣೇಶ್, ರಾಜಯೋಗಿನಿ ಬ್ರಹ್ಮಾಕುಮಾರಿ ದಾನೇಶ್ವರೀಜೀ, ಓಂ ಶಾಂತಿ ಬಿ.ಕೆ.ಆರಾಧ್ಯ, ರೈತ ಮಹಿಳೆ ಜಯಶ್ರೀ, ಸತೀಶ್, ಗೀತಾ, ಶ್ರೀನಿವಾಸ್, ವೀಣಾ, ರಮಾ, ಶಾಂಭವಿ, ಬಿಂದು, ಪುಷ್ಪ, ಇಂದುಮತಿ, ಭಾರತಿ, ನಿರ್ಮಲ, ಶಿವಕುಮಾರ್ ಹಾಗೂ ಇತರು ಉಪಸ್ಥಿತರಿದ್ದರು.