ಜಿಲ್ಲೆ

ಮಳೆಯಿಂದಾಗಿ ಮನೆಗಳಿಗೆ ನುಗ್ಗಿದ ನೀರು

ಚಾಮರಾಜನಗರ: ತಾಲೂಕಿನ ಉತ್ತುವಳ್ಳಿ ಗ್ರಾಮದಲ್ಲಿ ರಾತ್ರಿಯಿಡೀ ಸುರಿದ ಧಾರಾಕಾರ ಮಳೆಗೆ ಹಲವು ಮನೆಗಳಿಗೆ ನೀರು ನುಗ್ಗಿತು. ಗ್ರಾಮದ ರತ್ನಮ್ಮ ಹಾಗೂ ಚಾಮಲಮ್ಮ ಎಂಬುವವರ ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಈ ಕುಟುಂಬಗಳು ರಾತ್ರಿಯಿಡೀ ಜಾಗರಣೆ ಮಾಡಿದರು.

ಕಳೆದ ಕೆಲ ದಿನಗಳಿಂದಲೂ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ರೈತರು ಬಿತ್ತನೆ ಮಾಡಿರುವ ಫಸಲು ನಾಶವಾಗಿದೆ. ಈಗಾಗಲೇ ರೈತರು ತಮ್ಮ ಜಮೀನುಗಳಲ್ಲಿ ಉದ್ದು, ಹೆಸರು, ಅಲಸಂದೆ ಬಿತ್ತನೆ ಮಾಡಿದ್ದರು. ಈ ಬೆಳೆಗಳು ಮಳೆಗೆ ಕೊಚ್ಚಿಕೊಂಡು ಹೋಗಿವೆ. ಕೆಲವು ಗ್ರಾಮಗಳಲ್ಲಿ ಈಗಾಗಲೇ ಕಟಾವಿಗೆ ಬಂದಿದ್ದ ಹಲವು ಫಸಲು ಕೂಡ ಮಳೆಗೆ ಹಾಳಾಗಿದ್ದು, ರೈತರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಶುಕ್ರವಾರ ಸುರಿದ ಮಳೆಯಿಂದಾಗಿ ರೈತರ ಜಮೀನಿನಲ್ಲಿ ಹೆಚ್ಚಿನ ಮಳೆನೀರು ಸಂಗ್ರಹವಾಗಿತ್ತು. ಜಮೀನಿನ ಸಮೀಪದಲ್ಲೇ ಇದ್ದ ಕಾಲುವೆಗಳು ಮಳೆನೀರಿನಿಂದ ತುಂಬಿ ಹರಿಯಿತು. ಕೆಲವು ಕಡೆಗಳಲ್ಲಿ ಕಾಲುವೆಯಲ್ಲಿ ಹರಿಯುತ್ತಿದ್ದ ಮಳೆ ನೀರು ಸಲು ಇದ್ದ ಜಮೀನಿಗೆ ನುಗ್ಗಿ ಆವಾಂತರ ಸೃಷ್ಟಿಸಿತು. ರೈತರು ಈ ಸಂದರ್ಭದಲ್ಲಿ ಪರದಾಡುವಂತಾಯಿತು. ಹಲವು ಕಡೆಗಳಲ್ಲಿ ರೈತರ ಬೆಳೆ ಮಳೆಗೆ ನಾಶವಾಗಿದ್ದು, ಸೂಕ್ತ ರೀತಿಯ ಪರಿಹಾರ ನೀಡಬೇಕು ಎಂದು ಈ ಸಂದರ್ಭದಲ್ಲಿ ಆಗ್ರಹಿಸಿದ್ದಾರೆ.

ಸುವರ್ಣಾವತಿ ನದಿಗೆ ಜೀವಕಳೆ:
ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲೆಯ ಜೀವನಾಡಿಯಾಗಿರುವ ಸುವರ್ಣಾವತಿ ನದಿಯಲ್ಲಿ ನೀರು ಹರಿಯುತ್ತಿದ್ದು ಜೀವಕಳೆ ಬಂದಂತಾಗಿದೆ. ಸುವರ್ಣಾವತಿ ನದಿ ಪಾತ್ರದಲ್ಲಿ ಕಳೆದ ಒಂದು ವಾರಗಳಿಂದ ಹೆಚ್ಚಾಗಿ ಮಳೆಯಾಗುತ್ತಿರುವ ಪರಿಣಾಮವಾಗಿ ಸುವರ್ಣಾವತಿ ನದಿಯಲ್ಲಿ ನೀರು ಹರಿಯುತ್ತಿದೆ. ಹಿಂದಿನ ವರ್ಷದಲ್ಲಿ ಸೂಕ್ತ ರೀತಿಯಲ್ಲಿ ಮಳೆಯಾಗದ ಪರಿಣಾಮವಾಗಿ ಜಲಾಶಯಗಳು ಭರ್ತಿಯಾಗದೇ ನದಿ ಬತ್ತಿಹೋಗಿತ್ತು. ಸತತ ಮಳೆ ಸುವರ್ಣಾವತಿ ಮತ್ತು ಚಿಕ್ಕಹೊಳೆ ಜಲಾಶಯ ಹಾಗೂ ನದಿಗೂ ಜೀವಕಳೆಯನ್ನು ತಂದಿದ್ದು, ಈ ಭಾಗದ ರೈತರಿಗೆ ವರದಾನವಾಗಲಿದೆ ಎಂದು ಹೇಳಲಾಗುತ್ತಿದೆ. ಗ್ರಾಮೀಣ ಭಾಗದಲ್ಲಿರುವ ಸಣ್ಣ-ಪುಟ್ಟ ಕೆರೆಗಳು ಭರ್ತಿಯಾಗುತ್ತಿದ್ದು, ಅಂತರ್ಜಲ ಮಟ್ಟ ವೃದ್ಧಿಗೂ ಸಹಕಾರಿಯಾಗಲಿದೆ.