ಜಿಲ್ಲೆ

ಸಮಾನತೆಯ ಹರಿಕಾರರನ್ನು ಸ್ಮರಿಸೋಣ

ಎ.ಎಸ್.ಮಣಿಕಂಠ

ಚಾಮರಾಜನಗರ: ಬುದ್ದ, ಬಸವ, ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಬಾಬೂಜಿ ಅವರು ಸಮಸಮಾಜ ನಿರ್ಮಾಣಕ್ಕಾಗಿ ಶ್ರಮಿಸಿದ ಮಹಾಚೇತನರಾಗಿದ್ದು, ಅವರ ಹಾದಿಯಲ್ಲಿ ನಾವೆಲ್ಲರೂ ಸಾಗಬೇಕಿದೆ ಎಂದು ನಿವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಡಾ.ಆರ್.ರಾಜು ಹೇಳಿದರು.

ನಗರದ ಕನ್ನಡ ಸಾಹಿತ್ಯ ಪರಿಷತ್ ಕಚೇರಿಯಲ್ಲಿ ಕರ್ನಾಟಕ ಸೇನಾಪಡೆ ವತಿಯಿಂದ ಶುಕ್ರವಾರ ನಡೆದ ವಿಶ್ವಗುರು ಜಗಜ್ಯೋತಿ ಬಸವೇಶ್ವರ, ವಿಶ್ವರತ್ನ ಸಂವಿಧಾನ ಶಿಲ್ಪಿ ಡಾ ಬಿ.ಆರ್.ಅಂಬೇಡ್ಕರ್ ಹಾಗೂ ಹಸಿರುಕ್ರಾಂತಿ ಹರಿಕಾರ ಡಾ.ಬಾಬುಜಗಜೀವನರಾಂ ಸ್ಮರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕ್ರಿ.ಪೂರ್ವದಲ್ಲಿ ಭಗವಾನ್ ಬುದ್ದರು, 12 ನೇಶತಮಾನದಲ್ಲಿ ಜಗಜ್ಯೋತಿ ಬಸವೇಶ್ವರರು ಸಮಸಮಾಜ ನಿರ್ಮಾಣಕ್ಕಾಗಿ ಶ್ರಮಿಸಿದರು. ಅವರ ಪರಿಕಲ್ಪನೆಯನ್ನು ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನದಲ್ಲಿ ಅಳವಡಿಸಿ ಕಾನೂನು ಆಗಿ ಜಾರಿ ಮಾಡುವ ಮೂಲಕ ಸರ್ವರಿಗೂ ಸಮಾನತೆ ನೀಡಿದ್ದಾರೆ. ಉಪಪ್ರಧಾನಿ ಬಾಬುಜಗಜೀವನರಾಂ ದೇಶದ ಕೃಷಿ ಸಚಿವರಾಗಿ ಹಸಿರುಕ್ರಾಂತಿಯ ಮೂಲಕ ದೇಶದಲ್ಲಿ ಹೆಚ್ಚು ಹೆಚ್ಚು ಆಹಾರ ಉತ್ಪಾದನೆ ಮಾಡುವಂತೆ ಮಾಡಿದ ಕೀತಿ ಅವರಿಗೆ ಸಲ್ಲುತ್ತದೆ ಎಂದು ತಿಳಿಸಿದರು.

ಈ ಸಮಾನತೆಯ ಮಹಾಚೇತನರು ಹಾಕಿಕೊಟ್ಟ ಹಾದಿಯಲ್ಲಿ ನಾವೆಲ್ಲರೂ ಫಲ ಅನುಭವಿಸುತ್ತಿದ್ದೇವೆ. ಅವರ ಆದರ್ಶಗಳನ್ನು ನಾವೆಲ್ಲರೂ ಮೈಗೂಡಿಸಿಗೊಂಡು ಸಾಗಬೇಕಿದೆ. ಪ್ರಸ್ತುತ ದಿನಗಳಲ್ಲಿ ಸಾವಿರಾರು ಉದ್ಯೋಗಾವಕಾಶಗಳಿವೆ. ಪ್ರತಿಭಾ ಪುರಸ್ಕಾರ ಪಡೆದಿರುವ ವಿದ್ಯಾರ್ಥಿಗಳು ಶ್ರಮಪಟ್ಟು ಓದಿದ್ದಾರೆ ಅವರಿಗೆ ಪ್ರತಿಫಲ ದೊರಕಿದೆ ಎಂದರು.
ಹರವೆ ವಿರಕ್ತ ಮಠದ ಪೀಠಾಧ್ಯಕ್ಷ ಸರ್ಪಭೂಷಣಸ್ವಾಮಿ ಮಾತನಾಡಿ, ಬಸವಣ್ಣ, ಅಂಬೇಡ್ಕರ್, ಬಾಬುಜಗಜೀವನರಾಂ ಮೂವರು ಮಹಾಚೇತನರು ನಮ್ಮನೆಲ್ಲರನ್ನು ಕತ್ತಲಿನಿಂದ ಬೆಳಕಿನ ಕಡೆಗೆ ಕೊಂಡೊಯ್ಯೂವ ಕೆಲಸ ಮಾಡಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಸರ್ಕಾರಿ ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಮಂಜುನಾಥ್ ಪ್ರಸನ್ನ, ಕನ್ನಡ ಮಹಾಸಭಾ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶೈಲಕುಮಾರ್, ಕನ್ನಡ ಮಹಾಸಭಾದ ಗೌರವಾಧ್ಯಕ್ಷ ಶಾ.ಮುರಳಿ, ಸಹ ಕಾರ್ಯದರ್ಶಿ ಪಣ್ಯದಹುಂಡಿ ರಾಜು, ನಗರಸಭಾ ಮಾಜಿ ಅಧ್ಯಕ್ಷ ಸಿ.ಎಸ್.ಸುರೇಶ್‌ನಾಯಕ, ಮಾಜಿ ಸದಸ್ಯ ಮಹಮ್ಮದ್‌ಅಸ್ಗರ್, ಸಿ.ಕೆ.ಮಂಜುನಾಥ್, ಸಾಮಾಜಿಕ ನ್ಯಾಯ ವೇದಿಕೆ ಕೇಂದ್ರ ಸಮಿತಿ ಸದಸ್ಯ ಕೆ.ಜಗದೀಶ್, ಗು.ಪುರುಷೋತ್ತಮ್, ಕನ್ನಡ ತಾಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷ ಸುರೇಶ್ ಋಗ್ವೇದಿ, ನಿಜಧ್ವನಿಗೋವಿಂದರಾಜು ಹಾಜರಿದ್ದರು.