ಹನೂರು: ನಾಗರಿಕತೆ ಮತ್ತು ಸಂಸ್ಕೃತಿ ಬೆಳೆಯಬೇಕಾದರೆ ಪ್ರಕೃತಿ ಹಾಗೂ ಅಭಿವೃದ್ಧಿ ನಡುವೆ ಸಮತೋಲನ ಕಾಯ್ದುಕೊಳ್ಳುವುದು ಅಗತ್ಯ ಎಂದು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.
ನೇಚರ್ ಕನ್ಸರ್ವೇಷನ್ ಫೌಂಡೇಷನ್ ವತಿಯಿಂದ ತಾಲೂಕಿನ ಎಲ್ಲೇಮಾಳ ಗ್ರಾಮದ ಬಳಿ ಸ್ಥಾಪಿಸಿರುವ ಹೊಳೆಮತ್ತಿ ಪ್ರಕೃತಿ ಮಾಹಿತಿ ಕೇಂದ್ರದಲ್ಲಿ ಗುರುವಾರ ಆಯೋಜಿಸಿದ್ದ 5ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು. ಯಾವುದೇ ಪ್ರಾಣಿ ಕೃತಕ ಸನ್ನಿವೇಶದಲ್ಲಿ ವಾಸಿಸಲು ಇಚ್ಛಿಸುವುದಿಲ್ಲ. ಆದರೆ ಮನುಷ್ಯ ಕಾಲಕಾಲಕ್ಕೆ ಬದಲಾಗುವ ವಾತಾವರಣದಲ್ಲಿ ವಾಸಿಸಲು ಬಯಸುತ್ತಾನೆ. ಹೀಗಾಗಿ ಪ್ರಕೃತಿ ನಿಯಮವನ್ನು ಉಲ್ಲಂಘಿಸುತ್ತಿರುವುದರಿಂದ ಅರಣ್ಯ ಸಂಪತ್ತು ನಾಶವಾಗುತ್ತಿದೆ ಎಂದರು.
ಅರಣ್ಯ ಸಂರಕ್ಷಣೆ ಎಲ್ಲರ ಜವಾಬ್ದಾರಿಯಾಗಿದ್ದು, ಜನರು ಹಾಗೂ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಕೆಲಸವಾಗಬೇಕಿದೆ. ಅರಣ್ಯ ಹೆಚ್ಚಾದಂತೆ ವನ್ಯಪ್ರಾಣಿಗಳೂ ಹೆಚ್ಚಾಗುತ್ತವೆ. ಇದರಿಂದ ಉತ್ತಮ ಪರಿಸರ ನಿರ್ಮಾಣ ಸಾಧ್ಯ. ಅರಣ್ಯ ಎಂದಾಕ್ಷಣ ಕೆಲವರು ಸಫಾರಿ ಎಂದು ಭಾವಿಸುತ್ತಾರೆ. ಹೀಗಾಗಿ ಅರಣ್ಯ ಮಾಹಿತಿ ಬಗ್ಗೆ ತಿಳಿಯಲಿಚ್ಛಿಸುವುದಿಲ್ಲ. ಅರಣ್ಯ ಸಂರಕ್ಷಣೆಯ ಬಗ್ಗೆ ಮಾಹಿತಿ ನೀಡುವ ಸಲುವಾಗಿ ಗ್ರಾಮೀಣ ಪ್ರದೇಶದಲ್ಲಿ ಹೊಳೆಮತ್ತಿ ಕೇಂದ್ರವನ್ನು ಸ್ಥಾಪಿಸಿದ್ದು, ದೇಶದಲ್ಲಿಯೇ ಏಕೈಕ ಪ್ರಕೃತಿ ಮಾಹಿತಿ ಕೇಂದ್ರವಾಗಿದೆ. 2018ರಲ್ಲಿ ಮಾಜಿ ಸಂಸದ ದಿ.ಆರ್. ಧ್ರುವನಾರಾಯಣ ಅವರಿಂದ ಉದ್ಘಾಟನೆಯಾದ ಈ ಕೇಂದ್ರ 5 ವರ್ಷ ಪೂರೈಸಿರುವುದು ಹೆಮ್ಮೆಯ ಸಂಗತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇದಕ್ಕೂ ಮುನ್ನ ಮಾಹಿತಿ ಕೇಂದ್ರದಲ್ಲಿನ ಅರಣ್ಯ ಹಾಗೂ ವನ್ಯಜೀವಿಗಳ ಚಿತ್ರ ಸಹಿತ ಮಾಹಿತಿಯನ್ನು ಶ್ರೀಗಳು ವೀಕ್ಷಿಸಿದರು. ಈ ವೇಳೆ ಡಾ.ಸಂಜಯ್ ಗುಬ್ಬಿ ವಿವರಣೆ ನೀಡಿದರು. ಬಳಿಕ ಕೇಂದ್ರದ ಆವರಣದಲ್ಲಿ ಸಸಿ ನೆಟ್ಟು ನೀರೆರೆಯಲಾಯಿತು. ರಸಪ್ರಶ್ನೆ, ಮಣ್ಣಿನ ಮಾದರಿ ಹಾಗೂ ಕೃತಿ ಜೋಡಣೆ ಸ್ಪರ್ಧೆಯಲ್ಲಿ ವಿಜೇತರಾದ ಶಾಲಾ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ರಿಚರ್ಡ್ ಲೂಯಿಸ್ ತಂಡದವರಿಂದ ನಗೆಹಬ್ಬ ಏರ್ಪಡಿಸಲಾಗಿತ್ತು.
ಮಲೆಮಹದೇಶ್ವರ ವನ್ಯಜೀವಿ ವಿಭಾಗದ ಡಿಸಿಎಫ್ ಡಾ.ಸಂತೋಷ್‌ಕುಮಾರ್, ಕಾವೇರಿ ವನ್ಯಜೀವಿ ವಿಭಾಗದ ಡಿಸಿಎಫ್ ಎಲ್. ನಂದೀಶ್, ಎಸಿಎಫ್‌ಗಳಾದ ಭಾಗ್ಯಲಕ್ಷ್ಮೀ, ಅಂಕರಾಜು, ಆರ್‌ಎಫ್‌ಗಳು, ಮಾಹಿತಿ ಕೇಂದ್ರದ ಸ್ವಯಂಸೇವಕರು, ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು ಇತರರು ಭಾಗವಹಿಸಿದ್ದರು.