ಜಿಲ್ಲೆ

ಪಾಲಾರ್ ಪಾಲಾಗಲು ಸಿದ್ಧವಾದ ಮೆಂದಾರೆ

ಕಿರಣ್ ಮಾದರಹಳ್ಳಿ

ಹನೂರು: ಮತಗಟ್ಟೆ ಧ್ವಂಸ ಘಟನೆಯಿಂದ ಮೆಂದಾರೆ ಗ್ರಾಮದ ಜನರಲ್ಲಿ ಭಯ ಮನೆ ಮಾಡಿದ್ದು, ಮೆಂದಾರೆ ಬದಲು ಪಾಲಾರ್‌ನಲ್ಲಿ ಪುನರ್ವಸತಿ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.

ಮತಗಟ್ಟೆ ಧ್ವಂಸ ಘಟನೆಯಿಂದ ಇಂಡಿಗನತ್ತ, ಮೆಂದಾರೆ ಗ್ರಾಮಗಳ ಜನಜೀವನ ಮೇಲ್ನೋಟಕ್ಕೆ ಸಹಜ ಸ್ಥಿತಿಯತ್ತ ಮರುಳಿದ್ದರೂ ಆಂತರಿಕವಾಗಿ ನೆಮ್ಮದಿಯ ವಾತಾವರಣ ಇಲ್ಲವಾಗಿದೆ. ಹಲವು ದಶಕಗಳಿಂದ ನೆಲೆಸಿ ಕೂಲಿ ಮಾಡಿಕೊಂಡು ಜೀವನ ನಡೆಸುತ್ತಿದ್ದ ಮೆಂದಾರೆ ಜನ ಮತಗಟ್ಟೆ ಧ್ವಂಸ ಘಟನೆಗೆ ಹೆದರಿ ಊರು ಬಿಡಲು ನಿರ್ಧರಿಸಿದ್ದಾರೆ.

ಇತ್ತ ಇಂಡಿಗನತ್ತದಲ್ಲಿ ಈವರೆಗೂ ಜೈಲು ಸಹವಾಸ ಅನುಭವಿಸದ ಜನರು ಜೈಲು ಸೇರಿ ಗ್ರಾಮಕ್ಕೆ ಮರಳಿದ್ದರೂ ಇವರ ಮನಸ್ಸಿನಲ್ಲಿ ಇನ್ನಿಲ್ಲದ ಯಾತನೆ ಮನೆ ಮಾಡಿದೆ. ನಾಗಮಲೆಗೆ ಚಾರಣ ನಿಷೇಧ, ಜೀಪ್ ಸಂಚಾರ ಸ್ಥಗಿತದ ನಡುವೆಯೂ ಜಮೀನು ನೋಡಿಕೊಂಡು ಊರಿನಲ್ಲಿದ್ದ ಬಹುತೇಕರು ಘಟನೆಯಿಂದ ಬೇಸತ್ತು ಉದ್ಯೋಗ ಅರಸಿ ಬೇರೆಡೆಗೆ ತೆರಳಿದ್ದಾರೆ.
ಇದು ಇಂಡಿಗನತ್ತ ಗ್ರಾಮದಲ್ಲಿ ನಡೆದ ಘಟನೆಯಿಂದ 2 ಗ್ರಾಮದ ಜನರಲ್ಲಿ ಬದಲಾದ ಜೀವನದ ಸ್ಥಿತಿಗತಿ.

ಪುನರ್ವಸತಿ ಕಲ್ಪಿಸಿ:
ಮೆಂದಾರೆ ಗಿರಿಜನ ಗ್ರಾಮದಲ್ಲಿ 80 ಕುಟುಂಬಗಳಿದ್ದು, ಇಲ್ಲಿನ ಜನರು ಕೂಲಿ ಮಾಡಿಕೊಂಡು ಜೀವನ ಸಾಗಿಸುತಿದ್ದರು. ಆದರೆ ಘಟನೆಯಿಂದ ಭಯಭೀತರಾಗಿದ್ದು, ಗ್ರಾಮದಲ್ಲಿರಲು ಜನರು ಒಲ್ಲೆ ಎನ್ನುತ್ತಿದ್ದಾರೆ. ತಾಲೂಕಿನ ಚಂಗಡಿ ಗ್ರಾಮವನ್ನು ಸ್ಥಳಾಂತರಿಸುವ ಸಂಬಂಧ ಕ್ರಮಕೈಗೊಂಡಂತೆ ಸರ್ಕಾರ ನಮಗೂ ಈ ವ್ಯವಸ್ಥೆ ಕಲ್ಪಿಸಲು ಮುಂದಾಗಬೇಕು ಎನ್ನುತ್ತಿದ್ದಾರೆ. ತಮ್ಮ ಬುಡಕಟ್ಟಿಗೆ ಸೇರಿದ ಸುಮಾರು 50 ಕುಟುಂಬಗಳು ವಾಸಿಸುತ್ತಿರುವ ಗಡಿಭಾಗದ ಪಾಲಾರ್‌ಗೆ ಸ್ಥಳಾಂತರಿಸಿ ಪುನರ್ವಸತಿ ಕಲ್ಪಿಸುವಂತೆ ಇಲ್ಲಿನ ಜನರು ಈಗಾಗಲೇ ಜಿಲ್ಲಾಧಿಕಾರಿ ಅವರಲ್ಲಿ ಮನವಿ ಮಾಡಿದ್ದಾರೆ. ಜತೆಗೆ ಗ್ರಾಮಕ್ಕೆ ಯಾರೇ ಭೇಟಿ ನೀಡಿ ಮಾತನಾಡಿಸಿದರೂ ಜನರಿಂದ ಮೊದಲು ಕೇಳಿ ಬರುವ ಮಾತು ಇದಾಗಿದೆ. ಹಾಗಾಗಿ ಇಲ್ಲಿನ ಜನರು ಪುರ್ನವಸತಿಯತ್ತ ಮುಖ ಮಾಡಿದ್ದಾರೆ.

ನೆಮ್ಮದಿ ಇಲ್ಲದಂತಾದ ಜೀವನ:
ಇಂಡಿಗನತ್ತ ಗ್ರಾಮದಲ್ಲಿ ಮೂಲಸೌಕರ್ಯ ಮರೀಚಿಕೆಯಾಗಿದ್ದರೂ ಆರಾಧ್ಯ ದೈವ ಮಾದಪ್ಪನನ್ನು ನಂಬಿ ಬಾವಿ ನೀರು ಹಾಗೂ ಕೊಳ್ಳಿ ಬೆಂಕಿಯ ಬೆಳಕಿನಲ್ಲಿ ಇಲ್ಲಿನ ಜನರು ಕಷ್ಟದ ನಡುವೆಯೂ ನೆಮ್ಮದಿ ಜೀವನ ನಡೆಸುತ್ತಿದ್ದರು. ಬಹುತೇಕ ಜನರು ಮ.ಬೆಟ್ಟದ ಮಾದಪ್ಪನ ಸನ್ನಿಧಿಯಲ್ಲಿ ಸರತಿ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದರು. ಆದರೆ ಘಟನೆಯಿಂದಾಗಿ ಈವರೆಗೂ ಜೈಲಿನ ಮುಖವನ್ನೇ ಕಂಡಿರದ ಮಹಿಳೆಯರು ಸೇರಿದಂತೆ 46 ಜನರು 21 ದಿನಗಳು ಜೈಲಿನಲ್ಲಿರಬೇಕಾಯಿತು. ಇದು ಅವರ ಮನಸ್ಸಿನ ಮೇಲೆ ಅಗಾಧ ಪರಿಣಾಮ ಉಂಟು ಮಾಡಿದ್ದು, ಅಳುಕಿನ ಮನಸ್ಥಿತಿಯನ್ನು ಸೃಷ್ಟಿಸಿದೆ. ಇದರಿಂದ ನೆಮ್ಮದಿಯ ಜೀವನ ಇಂಡಿಗನತ್ತ ಗ್ರಾಮದ ಜನರಲ್ಲಿ ಇಲ್ಲದಂತಾಗಿದೆ. ಇವರೆಲ್ಲರ ಮುಖ ಕಳೆಗುಂದಿದ್ದು, ಮೊದಲಿನ ರೀತಿಯಲ್ಲಿ ಅಂಗಡಿ, ಮುಂಗಟ್ಟುಗಳ ಬಳಿ ಕುಳಿತುಕೊಂಡು ಕಷ್ಟ-ಸುಖ ಹಂಚಿಕೊಳ್ಳುತ್ತಿದ್ದ ಸನ್ನಿವೇಶ ಇಲ್ಲವಾಗಿದೆ.

ಕೂಲಿ ಆರಸಿ ವಲಸೆ:
ಘಟನೆಗೂ ಮುನ್ನ ಕಳೆದ 3 ತಿಂಗಳ ಹಿಂದೆ ಮ.ಬೆಟ್ಟದಿಂದ ನಾಗಮಲೆಗೆ ಜೀಪ್ ಮೂಲಕ ಭಕ್ತರನ್ನು ಕರೆದೊಯ್ಯಲಾಗುತ್ತಿತ್ತು. ಹಾಗಾಗಿ ಇಂಡಿಗನತ್ತದ ಸುಮಾರು 50ಕ್ಕೂ ಹೆಚ್ಚು ಕುಟುಂಬಗಳು ಇದನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದವು. ಆದರೆ ಸರ್ಕಾರ ಚಾರಣ ನಿರ್ಬಂಧ ಹೇರಿದ ಹಿನ್ನೆಲೆಯಲ್ಲಿ ಜೀಪ್‌ಗಳ ಸಂಚಾರ ಸ್ಥಗಿತಗೊಂಡಿತು. ಪರಿಣಾಮ ಇಲ್ಲಿನ ಜನರ ಕುಟುಂಬ ನಿರ್ವಹಣೆಯ ಮೇಲೆ ಹೊಡೆತ ಬಿದ್ದಿತು. ಆದರೂ, ಜಮೀನಿನಲ್ಲಿ ಕೃಷಿ ಮಾಡಿಕೊಂಡಿದ್ದ ಜನರು ಘಟನೆಯಿಂದಾಗಿ ಬೇಸತ್ತು ಕೂಲಿಗಾಗಿ ಬೇರೆಡೆಗೆ ವಲಸೆ ಹೋಗಿದ್ದಾರೆ. ಇದರಿಂದ ಗ್ರಾಮದಲ್ಲಿ ಮೊದಲಿನ ವಾತಾವರಣ ಇಲ್ಲವಾಗಿದೆ.

ನಮ್ಮನ್ನು ಪಾಲಾರ್ ಗ್ರಾಮಕ್ಕೆ ಸ್ಥಳಾಂತರ ಮಾಡಬೇಕು. ಈ ಕಾಡಿನಿಂದ ನಾವು ಅಲ್ಲಿಗೆ ಹೋದರೆ ಜೀವನ ನಿರ್ವಹಣೆಗೂ ಅನುಕೂಲವಾಗಲಿದೆ. ಸರ್ಕಾರ ನಮಗೆ ಪುನರ್ವಸತಿ ಕಲ್ಪಿಸಿಕೊಡಬೇಕು.ಶಿವಕುಮಾರ್ಮೆಂದಾರೆ ಗ್ರಾಮಸ್ಥ