ಹನೂರು: ತಾಲೂಕಿನ ಚಿಗಾತಪುರ ಗ್ರಾಮದ ಜಮೀನೊಂದರ ಸಮೀಪದಲ್ಲಿ ಮಂಗಳವಾರ ಬೀದಿ ನಾಯಿಗಳ ದಾಳಿಗೆ ಜಿಂಕೆ ಮೃತಪಟ್ಟಿದೆ.
ಗ್ರಾಮ ಸಮೀಪದ ಕಾವೇರಿ ವನ್ಯಜೀವಿ ವಲಯ ಅರಣ್ಯ ಪ್ರದೇಶದಿಂದ ಬೆಳಗ್ಗೆ 8ರ ವೇಳೆಯಲ್ಲಿ 3 ವರ್ಷದ ಹೆಣ್ಣು ಜಿಂಕೆ ಮುನಿಸ್ವಾಮಿ ಅವರ ಜಮೀನಿಗೆ ಬಂದಿತ್ತು. ಈ ವೇಳೆ ಬೀದಿ ನಾಯಿಗಳು ಸುತ್ತುವರಿದು ದಾಳಿ ನಡೆಸಿವೆ. ಪರಿಣಾಮ ಜಿಂಕೆ ಸ್ಥಳದಲ್ಲಿಯೇ ಮೃತಪಟ್ಟಿದೆ. ಈ ಬಗ್ಗೆ ತಿಳಿದ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ಮುಟ್ಟಿಸಿದರು. ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಜಿಂಕೆ ಕಲೇಬರವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆ ಬಳಿಕ ಅಂತ್ಯಕ್ರಿಯೆ ನಡೆಸಿದರು.