ಹನೂರು: ಗಲಭೆಯಿಂದಾಗಿ ನಮ್ಮ ಮತ್ತು ಇಂಡಿಗನತ್ತ ಗ್ರಾಮಗಳ ನಡುವಿನ ಬಾಂಧವ್ಯ ಹಾಳಾಯ್ತು ಎಂದು ಮಹದೇಶ್ವರ ಬೆಟ್ಟದ ಮೆಂದಾರೆ ಗ್ರಾಮಸ್ಥ ಮಾದ ಬೇಸರ ವ್ಯಕ್ತಪಡಿಸಿದರು.
ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ಇಂಡಿಗನತ್ತ ಗ್ರಾಮದಲ್ಲಿ ಲೋಕಸಭೆ ಚುನಾವಣೆ ಮತದಾನದ ದಿನ ನಡೆದ ಮತಗಟ್ಟೆ ಧ್ವಂಸ ಪ್ರಕರಣದ ಪರಿಣಾಮದ ಕುರಿತು ವಿಜಯವಾಣಿಯೊಂದಿಗೆ ಅವರು ಮಾತನಾಡಿದರು. ಇಂಡಿಗನತ್ತ ಮತ್ತು ಮೆಂದಾರೆ ಎರಡೂ ಒಂದೇ ಊರಿನಂತಿದ್ದವು. ಒಟ್ಟಿಗೆ ಸೇರಿ ವರ್ಷಕ್ಕೊಮ್ಮೆ ಹಬ್ಬ ಮಾಡುತ್ತಿದ್ದೆವು. ಲೋಕಸಭೆ ಚುನಾವಣೆ ಮತದಾನಕ್ಕೂ ಮೊದಲು ಇಬ್ಬರ ನಡುವೆ ಉತ್ತಮ ಬಾಂಧವ್ಯವಿತ್ತು. ಅಣ್ಣ-ತಮ್ಮಂದಿರಂತೆ ಬಾಳುತ್ತಿದ್ದೆವು. ಈಗ ಈ ಸಂಬಂಧ ಹಾಳಾಗಿದೆ. ಒಬ್ಬರನ್ನು ಮತ್ತೊಬ್ಬರು ಮಾತನಾಡಿಸುತ್ತಿಲ್ಲ ಎಂದರು.