ಚಾಮರಾಜನಗರ: ಮಾಜಿ ಉಪಪ್ರಧಾನಿ ಡಾ.ಬಾಬು ಜಗಜೀವನರಾಮ್ ಆಶಯದಂತೆ ಎಲ್ಲರೂ ಒಗ್ಗಟ್ಟಿನಿಂದ ಸಾಗಬೇಕು ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಲ್ಲಿಕಾರ್ಜುನ್ ಅಭಿಪ್ರಾಯಪಟ್ಟರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಗುರುವಾರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಡಾ.ಬಾಬು ಜಗಜೀವನರಾಮ್ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಜಿಲ್ಲೆಯಲ್ಲಿ ಶೇ.25ಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಎಸ್ಸಿ-ಎಸ್ಟಿ ಸಮುದಾಯದವರು ಇದ್ದಾರೆ. ಶ್ರೇಷ್ಠ ನಾಯಕರಾದ ಅಂಬೇಡ್ಕರ್ ಹಾಗೂ ಬಾಬೂಜಿ ಅವರ ತತ್ವ, ಆದರ್ಶಗಳನ್ನು ಮೈಗೂಡಿಸಿಕೊಂಡು ಸಾಗಿದಾಗ ಮಾತ್ರ ಸಮುದಾಯ ಅಭಿವೃದ್ಧಿ ಹೊಂದಲು ಸಾಧ್ಯ. ಆ ಮಹಾಪುರುಷರ ಆಶಯದಂತೆಯೇ ಆಡಳಿತಾತ್ಮಕ ಕಾರ್ಯಗಳು ನಡೆಯುತ್ತಿದ್ದು, ಅವರು ದೇಶಕ್ಕೆ ನೀಡಿದ ಕೊಡುಗೆ ಅಪಾರ ಎಂದರು.
ಜಿಲ್ಲಾ ಕೇಂದ್ರದಲ್ಲಿ ಸುಮಾರು 10 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಸಮುದಾಯ ಭವನ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಇಲಾಖೆಯ ವಸತಿ ಶಾಲೆಗಳಲ್ಲಿ ಪೌರಕಾರ್ಮಿಕರ ಮಕ್ಕಳನ್ನು ನೇರ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ತಳಸಮುದಾಯಗಳ ಸುಮಾರು 10 ಸಾವಿರ ಮಕ್ಕಳು, ವಸತಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಅದಕ್ಕೆ ಪೂರಕವಾದ ಬೆಂಬಲವನ್ನು ಸರ್ಕಾರ ನೀಡುತ್ತಿದೆ ಎಂದರು.
ಪ್ರಭಾರ ಜಿಲ್ಲಾಧಿಕಾರಿ ಎಸ್.ಪೂವಿತಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಂಜುನಾಥ್ ಪ್ರಸನ್ನ, ಸಮುದಾಯ ಮುಖಂಡರಾದ ಶಿವಮೂರ್ತಿ, ಸಿ.ಎಂ.ಕೃಷ್ಣಮೂರ್ತಿ, ಚಾ.ಗು.ನಾಗರಾಜ್, ರಾಮಸಮುದ್ರ ನಾಗರಾಜ್, ಬಸವನಪುರ ರಾಜಶೇಖರ್, ಬಾಬು ಜಗಜೀವನ್‌ರಾಂ ಟ್ರಸ್ಟ್ ಅಧ್ಯಕ್ಷ ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ಶಿವಣ್ಣ, ಬ್ಯಾಡಮೂಡ್ಲು ಬಸವಣ್ಣ ಇತರರು ಉಪಸ್ಥಿತರಿದ್ದರು.
ಅಧಿಕಾರಿಗಳಿಗೆ ತರಾಟೆ: ಪುಣ್ಯಸ್ಮರಣೆ ಕಾರ್ಯಕ್ರಮಕ್ಕೆ ಸಮುದಾಯದ ಹಲವು ಮುಖಂಡರಿಗೆ ಮಾಹಿತಿ ನೀಡಲಾಗಿರಲಿಲ್ಲ. ಬಾಬೂಜಿ ಸಂಘ-ಸಂಸ್ಥೆ ಮತ್ತು ಟ್ರಸ್ಟ್‌ಗಳಿಗೂ ಮಾಹಿತಿ ಇಲ್ಲ. ಅಧಿಕಾರಿಗಳು ಈ ವಿಚಾರದಲ್ಲಿ ತಾರತಮ್ಯ ಮಾಡುತ್ತಾರೆ. ಪೂರ್ವಭಾವಿ ಸಭೆಗಳ ಬಗ್ಗೆ ಮಾಹಿತಿ ನೀಡಬೇಕು. ಅದನ್ನೂ ಮಾಡುವುದಿಲ್ಲ. ಸಲಹೆ ಸೂಚನೆಗಳಿದ್ದರೆ ನೋಟ್ ಮಾಡಿಕೊಳ್ಳುವುದಿಲ್ಲ ಎಂದು ಬಾಬುಜಗಜೀವನರಾಮ್ ಟ್ರಸ್ಟ್ ಅಧ್ಯಕ್ಷ ಶಿವಕುಮಾರ್ ಹಾಗೂ ಪ್ರಧಾನ ಕಾರ್ಯದರ್ಶಿ ಶಿವಣ್ಣ ಅಧಿಕಾರಿಗಳನ್ನು ಕಾರ್ಯಕ್ರಮಕ್ಕೂ ಮುನ್ನ ತರಾಟೆಗೆ ತೆಗೆದುಕೊಂಡರು. ಬಳಿಕ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ್ ಮುಖಂಡರನ್ನು ಸಮಾಧಾನಗೊಳಿಸಿದರು. ನಂತರ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಪ್ರಭಾರ ಜಿಲ್ಲಾಧಿಕಾರಿ ಎಸ್.ಪೂವಿತಾ, ಎಸ್ಪಿ ಪದ್ಮಿನಿ ಸಾಹು ಮಾಲಾರ್ಪಣೆ ಮಾಡಿದರು.