ಜಿಲ್ಲೆ

ನಮ್ಮ ರೈಲೂ ಚೆನ್ನಾಗಿ ಓಡುತ್ತಿದೆ

ಚಾಮರಾಜನಗರ: ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಒಂದು ವರ್ಷವನ್ನು ಯಶಸ್ವಿಯಾಶಗಿ ಪೂರೈಸಿದ್ದು, ರಾಜ್ಯ ಸರ್ಕಾರದ ರೈಲು ಚೆನ್ನಾಗಿ ಓಡುತ್ತಿದೆ, ಬಿದ್ದು ಹೋಗುವುದಿಲ್ಲ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ತಿರುಗೇಟು ನೀಡಿದರು.

ನಗರದ ಡಾ.ಬಿ.ಆರ್.ಅಬೇಡ್ಕರ್ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆವರು ಸರ್ಕಾರ ಕೆಲವೇ ದಿನಗಳಲ್ಲಿ ಬೀಳುತ್ತೆ ಎನ್ನುವ ಬಿವೈವಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ರೈಲು ಓಡುತ್ತಿದೆ, ಗಢಗಢ ನಡುಗುತ್ತಾ ಇಲ್ಲ. ಟ್ರೈನ್ ಏನೂ ಬಿದ್ದು ಹೋಗುವುದಿಲ್ಲ. ಇವರಿಗೆ ಅದರಿಂದ ಯಾವುದೇ ಲಾಭ ಸಿಕ್ಕಲ್ಲ ಎಂದು ಉತ್ತರಿಸಿದರು.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಬಗ್ಗೆ ಲಘು ಹೇಳಿಕೆ ವಿಚಾರವಾಗಿ ಮಾತನಾಡಿ, ಇದೊಂದು ಪೂಲೀಶ್ ಥಿಂಕಿಂಗ್. ದೇವೇಗೌಡರು ಈ ರಾಷ್ಟ್ರದ ಪ್ರಧಾನ ಮಂತ್ರಿಯಾಗಿದ್ದವರು. ಪ್ರತಿಯೊಬ್ಬರು ಸಾರ್ಥಕ ಬದುಕು ಬದುಕಬೇಕೆಂಬುದು ಮಾನವ ಸಹಜ ಗುಣವಾಗಿದೆ. ಯಾವ ಮೂರ್ಖನೂ ಕೂಡ ಆ ರೀತಿ ಯೋಚನೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಎಸ್‌ಐಟಿ ತನಿಖಾ ವಿಚಾರದಲ್ಲಿ ಉನ್ನತ ಪೊಲೀಸ್ ಅಧಿಕಾರಿಗಳ ತಂಡ ಕೆಲಸ ಮಾಡುತ್ತಿದೆ. ಕಾನೂನಾತ್ಮಕವಾಗಿ ಏನುಮಾಡಬೇಕು ತನ್ನ ಕೆಲಸವನ್ನು ಮಾಡುತ್ತದೆ. ಅದರಲ್ಲಿ ರಾಜಕೀಯ ಪ್ರವೇಶವಿಲ್ಲ ಎಂದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬ ಅಂತೆ ಕಂತೆಗಳನ್ನು ನಾವು ಮಾತನಾಡುವುದಿಲ್ಲ. ಕೊಲೆಗಳು ಎಲ್ಲಿ ಆಗುತ್ತಿದೆ? ಕಾನೂನು ವ್ಯವಸ್ಥೆ ಸರಿಯಾಗಿ ನಿರ್ವಹಣೆ ಆಗುತ್ತಿದೆ. ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಸಚಿವ ಸಂಪುಟ ಪುನರ್ ರಚನೆ ನಮ್ಮ ಕೆಲಸವಲ್ಲ, ಅದು ಹೈಕಮಾಂಡ್‌ಗೆ ಬಿಟ್ಟ ವಿಚಾರವಾಗಿದೆ. ಒಂದು ವರ್ಷದ ಆಡಳಿತ ತೃಪ್ತಿ ತಂದಿದೆ. ಕೊಟ್ಟ ಗ್ಯಾರಂಟಿಗಳನ್ನು ಈಡೇರಿಸಿದ್ದೇವೆ. ಒಂದು ಕೋಟಿ ಇಪ್ಪತ್ತೊಂದು ಲಕ್ಷ ಆರ್ಥಿಕ ಸ್ವಾವಲಂಬನೆಗಳಿಗೆ ಸಹಕಾರಿಯಾಗಿದೆ ಎಂದು ಹೇಳಿದರು.