ಚಾಮರಾಜನಗರ: ಸಕ್ಕರೆ ಕಾರ್ಖಾನೆಗಳಿಂದ ಕಬ್ಬಿನ ಹೆಚ್ಚುವರಿ 150 ರೂ.ಗಳನ್ನು ಕೊಡಿಸಲು ಆಗ್ರಹಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘ ವತಿಯಿಂದ ೆ.28 ರಂದು ಮೈಸೂರು ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಲಾಗುತ್ತದೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಕಾರ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಕ್ಕರೆ ಕಾರ್ಖಾನೆಗಳಿಂದ ಕಬ್ಬಿನ ಹೆಚ್ಚುವರಿ 150 ರೂ. ಅನ್ನು ಕೊಡಿಸುವುದು ಸೇರಿದಂತೆ ರೈತರ ನಾನಾ ಹಕ್ಕೊತ್ತಾಯಗಳ ಈಡೇರಿಕೆಗೆ ಒತ್ತಾಯಿಸಿ ಮೈಸೂರು ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಲು ನಿರ್ಧರಿಸಲಾಗಿದೆ ಎಂದರು. ಅಂದು ಮೈಸೂರು ಗನ್‌ಹೌಸ್ ವೃತ್ತದಿಂದ ಬೆಳಗ್ಗೆ 11ಕ್ಕೆ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಮುತ್ತಿಗೆ ಹಾಕಲಾಗುವುದು. ಈ ಕಾರ್ಯಕ್ರಮಕ್ಕೆ ಚಾಮರಾಜನಗರ ಜಿಲ್ಲೆಯ ರೈತರು ಸ್ವಯಂಪ್ರೇರಿತರಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿಕೊಡುವಂತೆ ಮನವಿ ಮಾಡಿದರು.
ಸರ್ಕಾರ ಮಧ್ಯಪ್ರವೇಶ ಮಾಡಿ ಅರಿಶಿಣಕ್ಕೆ ಎಂಐಎಸ್ ಯೋಜನೆಯಡಿ ಒಂದು ಕ್ವಿಂಟಾಲ್ಗೆ 17,500 ರೂ. ಗಳನ್ನು ಕೊಡಿಸಬೇಕು. ಕಾವೇರಿ-ಕಬಿನಿ ಅಚ್ಚುಕಟ್ಟು ನಾಲೆಗಳ ವ್ಯಾಪ್ತಿಯಲ್ಲಿ ಬೆಳೆದು ನಿಂತಿರುವ ಕಬ್ಬು, ಬಾಳೆ, ಇನ್ನಿತರ ಬೆಳೆಗಳ ರಕ್ಷಣೆಗಾಗಿ ಬೇಸಿಗೆಯಲ್ಲಿ ದನಕರುಗಳ ಕುಡಿಯುವ ನೀರಿಗಾಗಿ ಕೆರೆಕಟ್ಟೆಗಳನ್ನು ತುಂಬಿಸಬೇಕು ಎಂದು ಒತ್ತಾಯಿಸಿದರು. ನಾಲೆಗಳಿಗೆ ನೀರು ಹರಿಸಬೇಕು. ಕೃಷಿ ಪಂಪ್‌ಸೆಟ್‌ಗಳಿಗೆ ಬೆಳಗ್ಗೆ 6ರಿಂದ ಸಂಜೆ 6 ರವಗೆ ಹಗಲು ವೇಳೆ ಸಮರ್ಪಕ ವಿದ್ಯುತ್ ನೀಡಬೇಕು. ರೈತರ ಅನುಕೂಲಕ್ಕೆ ತಕ್ಕಂತೆ ನಿಮಯಗಳನ್ನು ಬದಲಾಯಿಸಬೇಕು ಎಂದು ಆಗ್ರಹಿಸಿದರು.
ಸಂಘದ ಜಿಲ್ಲಾ ಕಾರ್ಯದರ್ಶಿ ಎಚ್.ಮೂಕಳ್ಳಿ ಮಹದೇವಸ್ವಾಮಿ, ಜಿಲ್ಲಾ ಉಪಾಧ್ಯಕ್ಷ ಮೂಡಲಪುರ ಪಟೇಲ್ ಶಿವಮೂರ್ತಿ, ತಾಲೂಕು ಉಪಾಧ್ಯಕ್ಷ ಮೂಡಲಪುರ ಹಾಲಿನ ನಾಗರಾಜು, ಹೆಗ್ಗೋಠಾರ ಶಿವಸ್ವಾಮಿ, ಕಿನಕಹಳ್ಳಿ ಬಸವಣ್ಣ, ಮಂಜುನಾಥ ಉಡಿಗಾಲ, ಗುರುಪ್ರಸಾದ್, ಗುರು, ಗುರುಮಲ್ಲಪ್ಪ, ಮಹೇಶ್, ಗುರುಸಿದ್ದಶೆಟ್ಟಿ, ಸುಧಾಕರ್, ಗ್ರಾಮ ಘಟಕ ಮಲೆಯೂರು ಹರ್ಷ, ಪ್ರವೀಣ್ ಭಾಗವಹಿಸಿದ್ದರು.