ಜಿಲ್ಲೆ

ಜೋರು ಮಳೆಯಿಂದ ಕೆರೆ-ಕಟ್ಟೆಗಳಿಗೆ ನೀರು

ಹನೂರು: ತಾಲೂಕಿನ ಬಂಡಳ್ಳಿ ಭಾಗದಲ್ಲಿ ಶನಿವಾರ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಜೋರು ಮಳೆಯಾಗಿದ್ದು, ಕೆರೆಕಟ್ಟೆಗಳಲ್ಲಿ ನೀರು ಸಂಗ್ರಹವಾಗಿದೆ. ಇದರಿಂದ ರೈತರ ಮೊಗದಲ್ಲಿ ಸಂತಸ ಮೂಡಿದೆ.

ಈ ಭಾಗದಲ್ಲಿ ಬೆಳಗ್ಗೆಯಿಂದಲೂ ಮೋಡ ಕವಿದ ವಾತವರಣವಿತ್ತು. ಮಧ್ಯಾಹ್ನ 3.30ರಲ್ಲಿ ಆರಂಭವಾದ ಜೋರು ಮಳೆ ಬಂಡಳ್ಳಿ, ಅಲಗಾಪುರ, ಮಣಗಳ್ಳಿ ಹಾಗೂ ಈ ಭಾಗದ ಇನ್ನಿತರೆ ಕಡೆಗಳಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಸುರಿಯಿತು. ಇದರಿಂದ ಈಗಾಗಲೇ ಸಜ್ಜೆ ಹಾಗೂ ಎಳ್ಳನ್ನು ಬಿತ್ತನೆ ಮಾಡಿರುವ ರೈತರಲ್ಲಿ ಸಂತಸ ಮನೆ ಮಾಡಿದರೆ, ಬಂಡಳ್ಳಿ ಗ್ರಾಮದ ಕೆರೆಗೆ ಹಳ್ಳಕೊಳ್ಳದಿಂದ ಹೆಚ್ಚಿನ ಮಟ್ಟದಲ್ಲಿ ನೀರು ಸಂಗ್ರಹವಾಗಿದ್ದು, ಗ್ರಾಮಸ್ಥರು ಸ್ಥಳಕ್ಕಾಗಮಿಸಿ ವೀಕ್ಷಿಸಿ ಖುಷಿ ವ್ಯಕ್ತಪಡಿಸಿದರು. ಜತೆಗೆ ಅಂತರ್ಜಲ ಕುಸಿತದಿಂದ ಕಂಗೆಟ್ಟಿದ್ದ ಜನರಿಗೆ ಈ ಮಳೆ ಕೊಂಚ ನೆಮ್ಮದಿ ತಂದಿದೆ.

ಇನ್ನು ತಾಲೂಕಿನ ಕೌದಳ್ಳಿ ಗ್ರಾಮದಲ್ಲಿ ಶುಕ್ರವಾರ ಸಂಜೆ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಜೋರು ಮಳೆ ಸುರಿದ ಪರಿಣಾಮ ಚರಂಡಿ ತ್ಯಾಜ್ಯ ತೆರೆವುಗೊಳಿಸದ ಹಿನ್ನಲೆ ಅಂಗಡಿ ಮುಂಗಟ್ಟುಗಳಿಗೆ ಕೊಳಚೆ ನೀರು ನುಗ್ಗಿತು. ಇದರಿಂದ ವ್ಯಾಪಾರಸ್ಥರು ಪರದಾಡಿದರು.