ಜಿಲ್ಲೆ

ಬೆಳೆ ಪರಿಹಾರ ವಿತರಣೆಗೆ ಆಗ್ರಹಿಸಿ ಪ್ರತಿಭಟನೆ

ಕಿರಣ್ ಮಾದರಹಳ್ಳಿ

ಗುಂಡ್ಲುಪೇಟೆ: ಬರ ಪರಿಹಾರ ಹಾಗೂ ರೈತರ ನಾನಾ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ನೇತೃತ್ವದಲ್ಲಿ ಪಟ್ಟಣದಲ್ಲಿ ಶನಿವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಜಿಲ್ಲೆಯ ನಾನಾ ಭಾಗಗಳಿಂದ ಆಗಮಿಸಿದ್ದ ರೈತ ಸಂಘ ಸದಸ್ಯರು ಪ್ರವಾಸಿ ಮಂದಿರದ ಬಳಿ ಜಮಾವಣೆಗೊಂಡು ಅಲ್ಲಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿ ಸಾರಿಗೆ ಬಸ್ ನಿಲ್ದಾಣದ ಎದುರು ರಸ್ತೆ ಸಂಚಾರ ತಡೆ ಮಾಡಿದರು. ಬಳಿಕ ತಾಲೂಕು ಕಚೇರಿಗೆ ತೆರಳಿ ಪ್ರತಿಭಟನೆ ನಡೆಸಿದರು.

ಈ ವೇಳೆ ಭಾಗ್ಯರಾಜ್ ಮಾತನಾಡಿ, ಪ್ರತಿಯೊಬ್ಬ ರೈತರಿಗೂ ಬರಗಾಲದಿಂದ ಬೆಳೆ ನಷ್ಟವಾಗಿದ್ದರೂ ಜಿಲ್ಲೆಯಲ್ಲಿ ಬರ ಪರಿಹಾರ ವಿತರಣೆ ವಿಷಯದಲ್ಲಿ ಷರತ್ತುಗಳನ್ನು ಹಾಕಿ ರೈತರಿಗೆ ತಾರತಮ್ಯ ಮಾಡಲಾಗುತ್ತಿದೆ. ಮಾನದಂಡ ಮತ್ತು ಷರತ್ತುಗಳಿಂದ ರೈತರನ್ನು ಒಡೆದು ಆಳುವ ನೀತಿಯನ್ನು ಸರ್ಕಾರ ಅನುಸರಿಸುತ್ತಿದೆ. ಕೂಡಲೇ ಈ ನಿರ್ಧಾರ ಕೈಬಿಟ್ಟು ಎಲ್ಲ ರೈತರಿಗೂ ಬರ ಪರಿಹಾರ ನೀಡಬೇಕು. ಜಿಲ್ಲೆಯ ಕೆರೆಗಳಿಗೆ ಆದ್ಯತೆಯ ಮೇರೆಗೆ ನೀರು ತುಂಬಿಸಬೇಕು. ಕಾವೇರಿ ಕಬಿನಿ ನೀರನ್ನು ತಮಿಳುನಾಡಿಗೆ ಬಿಟ್ಟು ಅಚ್ಚುಕಟ್ಟು ಭಾಗದ ರೈತರಿಗೆ ಬೆಳೆ ಬೆಳೆಯಲು ನೀರು ನೀಡದೆ ಮಲೆತಾಯಿ ಧೋರಣೆ ತೋರಿದೆ.

ಇದರಿಂದಾಗಿಯೇ ಅರ್ಧ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಹಾಗಾಗಿ, ರಾಜ್ಯ ಸರ್ಕಾರ ಎಕರೆಗೆ 5 ಸಾವಿರ ರೂ. ಬೆಳೆ ನಷ್ಟ ನೀಡಬೇಕು. ಹೊಸ ಕೃಷಿ ಪಂಪ್‌ಸೆಟ್‌ಗಳಿಗೆ ಅಕ್ರಮ-ಸಕ್ರಮ ಯೋಜನೆಯನ್ನು ಮತ್ತೆ ಜಾರಿ ಮಾಡಬೇಕು. ಹಾಲು ಉತ್ಪಾದಕರಿಗೆ 10 ರೂ. ಹೆಚ್ಚುವರಿ ಪ್ರೋತ್ಸಾಹ ಧನ ನೀಡಬೇಕು, ಸಮರ್ಪಕವಾಗಿ ಕೃಷಿ ಪಂಪ್‌ಸೆಟ್‌ಗಳಿಗೆ 10 ಗಂಟೆ ಹಗಲು ವೇಳೆ ವಿದ್ಯುತ್ ನೀಡಬೇಕು ಎಂದು ಒತ್ತಾಯಿಸಿ ಮನವಿ ಪತ್ರವನ್ನು ಪ್ರಭಾರ ತಹಸೀಲ್ದಾರ್ ಜಯಪ್ರಕಾಶ್ ಅವರಿಗೆ ನೀಡಿದರು.

ಈ ವೇಳೆ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ಚಾಮರಾಜನಗರ ಜಿಲ್ಲಾಧ್ಯಕ್ಷ ನಾಗರಾಜು, ರಾಜ್ಯ ಉಪಾಧ್ಯಕ್ಷ ಕೆರೆಹುಂಡಿ ರಾಜಣ್ಣ, ರಾಜ್ಯ ಪ್ರಧಾನ ಕಾರ್ಯದರ್ಶಿ ಮಲೆಯೂರು ಹರ್ಷ, ಮೈಸೂರು ಜಿಲ್ಲಾಧ್ಯಕ್ಷ ಹಾಡ್ಯ ರವಿ, ಉಡಿಗಾಲ ಮಂಜುನಾಥ್ ಸೇರಿದಂತೆ ಹಲವರು ಇದ್ದರು.