ಗುಂಡ್ಲುಪೇಟೆ: ನೈಸರ್ಗಿಕ ಪದ್ಧತಿಯಲ್ಲಿ ಮಣ್ಣಿನ ಫಲವತ್ತತೆ ಕಾಪಾಡಿಕೊಂಡಿರುವ ರೈತರೊಬ್ಬರು ಒಂದೇ ಭೂಮಿಯಲ್ಲಿ ಕಳೆದ 8 ವರ್ಷಗಳಿಂದ ಉತ್ತಮ ಅರಿಶಿಣ ಬೆಳೆ ಬೆಳೆದಿದ್ದು, ಇದೀಗ 9ನೇ ಬಾರಿಯೂ ಅರಿಶಿಣವನ್ನು ನಾಟಿ ಮಾಡಿದ್ದಾರೆ.
ಸಾಮಾನ್ಯವಾಗಿ ರೈತರು ತಮ್ಮ ಜಮೀನುಗಳಲ್ಲಿ ಬೆಳೆದ ಅರಿಶಿಣವನ್ನು ಕಟಾವು ಮಾಡಿದ ನಂತರ ಅದೇ ವರ್ಷ ಮತ್ತೆ ಅದೇ ಭೂಮಿಗೆ ಅರಿಶಿಣ ನಾಟಿ ಮಾಡುವುದಿಲ್ಲ. ಇಳುವರಿ ಕುಂಠಿತ ಹಾಗೂ ರೋಗಬಾಧೆ ಕಾಡುತ್ತದೆ ಎಂಬ ಕಾರಣಕ್ಕೆ ಬೇರೆ ಭೂಮಿಯಲ್ಲಿ ಬೆಳೆಯುತ್ತಾರೆ. ಆದರೆ, ತಾಲೂಕಿನ ತೆರಕಣಾಂಬಿಹುಂಡಿ ಗ್ರಾಮದ ರೈತ ಕುಮಾರ್ ತಮ್ಮ ಎರಡು ಎಕರೆ ಜಮೀನಿನಲ್ಲಿ ನೈಸರ್ಗಿಕ ಪದ್ಧತಿಯಲ್ಲಿ ಕೃಷಿ ಮಾಡುತ್ತಾರೆ. ಮಣ್ಣಿನಲ್ಲಿ ಫಲವತ್ತತೆ ಕಾಪಾಡಿಕೊಂಡಿದ್ದಾರೆ. ಹಾಗಾಗಿ, ಕಡಿಮೆ ಖರ್ಚಿನಲ್ಲಿ ಅರಿಶಿಣ ನಾಟಿ ಮಾಡಿ ಪ್ರತಿ ವರ್ಷ 3 ರಿಂದ 4 ಟನ್ ಅರಿಶಿಣ ಬೆಳೆಯುತ್ತಾರೆ.
1992ರಲ್ಲಿ ಬಿಎಸ್ 9 ತಳಿಯ (ಭವಾನಿಸಾರಗರ ತಳಿ) ಅರಿಶಿಣ ಬಿತ್ತನೆ ಮಾಡಿದ್ದು, ಇಲ್ಲಿಯವರೆಗೆ ಇದೇ ಅರಿಶಿಣವನ್ನು ಬೆಳೆಯುತ್ತಿದ್ದಾರೆ. ತಮ್ಮ ಜಮೀನಿನಲ್ಲಿ ಬೆಳೆದ ಅರಿಶಿಣವನ್ನೇ ಬಿತ್ತನೆಯ ಅರಿಶಿಣವಾಗಿ ಮಾಡಿಕೊಂಡು ಬೆಳೆ ಬೆಳೆಯುತ್ತಾ ಬಂದಿದ್ದಾರೆ. ಅರ್ಧ ಅಡಿ ಮುಕ್ಕಾಲು ಅಡಿಗೆ ನಾಟಿ ಮಾಡದೆ ಪ್ರತಿ ಅಡಿಗೆ ಒಂದರಂತೆ ಬಿತ್ತನೆ ಮಾಡುವುದರಿಂದ ಸಸಿಯ ಬುಡಕ್ಕೆ ಸಮರ್ಪಕವಾಗಿ ಗಾಳಿ, ನೀರು, ಸೂರ್ಯನ ಕಿರಣಗಳು ತಲುಪುವಂತೆ ನೋಡಿಕೊಳ್ಳುತ್ತಿದ್ದಾರೆ. ಕಳೆಗಳಿಗೆ ಕಳೆನಾಶಕ ಸಿಂಪಡಿಸಿದರೆ ಇದು ಸಸಿಗಳ ಬೇರಿಗೆ ಇಳಿದು ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ. ಆದ್ದರಿಂದ ಕಳೆಗಳನ್ನು ಕಾರ್ಮಿಕರ ಮೂಲಕವೇ ಕೀಳಿಸುವುದರಿಂದ ಮಣ್ಣಿನ ಸಡಿಲಿಕೆಯುಂಟಾಗಿ ಗಾಳಿ, ಬೇರುಗಳಿಗೆ ತಲುಪುದರಿಂದ ಸಸಿಗಳ ಬೇರುಗಳು ನಾಶವಾಗದೆ ಇಳುವರಿ ಕೊಡುತ್ತವೆ. ಆದರೆ, ಕೆಲವು ಗೊಬ್ಬರದ ಅಂಗಡಿಗಳ ಮಾಲೀಕರು ನೀಡುವ ಸಲಹೆ ಮೇರೆಗೆ ಬಹಳಷ್ಟು ರೈತರು ನಾನಾ ರೀತಿಯ ರಾಸಾಯನಿಕಗಳನ್ನು ಬೆಳೆಗಳಿಗೆ ಬಳಕೆ ಮಾಡುತ್ತಾರೆ. ಇದರಿಂದ ಹೆಚ್ಚಿನ ಹಣ ವೆಚ್ಚವಾಗುತ್ತದೆ. ಆದರೆ, ಉತ್ತಮ ಇಳುವರಿ ಬರುವುದಿಲ್ಲ. ಬೆಳೆಗಾರರು ನಷ್ಟ ಅನುಭವಿಸಬೇಕಾಗುತ್ತದೆ ಎಂಬುದು ಕುಮಾರ್ ಅಭಿಪ್ರಾಯವಾಗಿದೆ.
ಯೂರಿಯಾ, ಕ್ರಿಮಿನಾಶಕ ಮತ್ತು ಕಳೆನಾಶಕಗಳನ್ನು ಬಳಕೆ ಮಾಡುತ್ತಿಲ್ಲ. ಪ್ರತಿ ಎಕರೆಗೆ 8 ಚೀಲ ಕಾಂಪೋಸ್ಟ್ ಗೊಬ್ಬರ ಮಾತ್ರ ಹಾಕುತ್ತಿದ್ದಾರೆ. ಕ್ರಿಮಿಗಳು ಕಂಡುಬಂದರೆ 10 ಲೀಟರ್ ನೀರಿಗೆ 30 ಎಂಎಲ್‌ನಷ್ಟು ಗಂಜಲ ಬೆರೆಸಿ ಸಿಂಪಡಣೆ ಮಾಡುವ ಮೂಲಕ ಕ್ರಿಮಿನಾಶಕ ಬಳಕೆಯಿಂದ ದೂರವುಳಿದಿದ್ದಾರೆ.
ಕಡಿಮೆ ರಸಗೊಬ್ಬರ, ಅಧಿಕ ಹಸಿರೆಲೆ ಗೊಬ್ಬರ ಬಳಕೆ:
ಅರಿಶಿಣ ಬೆಳೆದ ಭೂಮಿಯಲ್ಲಿ ಮರು ವರ್ಷಕ್ಕೆ ಸೂಕ್ಷ್ಮ ಪೋಷಕಾಂಶಗಳು ಕಡಿಮೆಯಾಗುವುದರಿಂದ ಅದನ್ನು ಹೆಚ್ಚಿಸಲು ಪ್ರತಿ ಎಕರೆಗೆ ಎರಡು ಚೀಲಗಳಷ್ಟು ಜಿಪ್ಸಂ, ಎರೆಹುಳು ಗೊಬ್ಬರ, ಜಿಂಕ್, ಐರನ್ ಬೋರನ್‌ನಂಥಾ ಪೋಷಕಾಂಶಗಳ ಮಿಶ್ರಣವನ್ನು ಬಳಕೆ ಮಾಡಲಾಗುತ್ತದೆ. ಪ್ರತಿ ಎರಡು ವರ್ಷಕ್ಕೊಮ್ಮೆ ಸೆಣಬು, ಹುರುಳಿ, ಹಲಸಂದೆ, ಚಂಬೆಗಳನ್ನು ಬಿತ್ತನೆ ಮಾಡಿ ಅವು ಸ್ವಲ್ಪ ಬೆಳೆದಂತೆ ಉಳುಮೆ ಮಾಡುವುದರಿಂದ ಹಸಿರೆಲೆಗೊಬ್ಬರ ಬಳಕೆ ಮಾಡಿ ಪೋಷಕಾಂಶ ಹೆಚ್ಚಳ ಮಾಡಲಾಗುತ್ತಿದೆ.
ಮೂರು ತಿಂಗಳು ಬಿಸಿಲು ಕಾಯಿಸಿ ಉಳುಮೆ:
ಅರಿಶಿಣ ಬಿತ್ತನೆಗೆ ಮೊದಲು 3 ತಿಂಗಳು ಬಿಸಿಲಿನಲ್ಲಿ ಕಾಯಿಸಿ ಪ್ರತಿ ವಾರವೂ ಎರಡು ಬಾರಿ ಉಳುಮೆ ಮಾಡುವುದು ಅವಶ್ಯಕ. ಕೊನ್ನಾರೆಯಂಥಾ ಕಳೆ ಬೆಳೆದರೆ ಅಂಥಾ ಜಮೀನಿನಲ್ಲಿ ಯಾವುದೇ ಬೆಳೆ ಬೆಳೆಯಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಇದು ಬೆಳೆಯದಂತೆ ಮಾಡಲು ಉಳುಮೆ ಮಾಡುವ ಮೊದಲು ಮುಂಜಾನೆ ವೇಳೆ ಇಬ್ಬನಿ ಬೀಳುವ ಸಮಯದಲ್ಲಿ ಅದರ ಮೇಲೆ ಉಪ್ಪನ್ನು ಸಿಂಪಡಿಸುವುದರಿಂದ ಅವು ಬೇರು ಸಮೇತ ನಿರ್ಮೂಲನೆಯಾಗುತ್ತವೆ. ಬಿಸಿಲಿನಲ್ಲಿ ಉಳುಮೆ ಮಾಡುವ ಬದಲು ಸಂಜೆ 4 ಗಂಟೆ ನಂತರ ಉಳುವುದರಿಂದ ಬೆಳ್ಳಕ್ಕಿಗಳು ಗೊಣ್ಣೆಹುಳ ಮುಂತಾದ ಹುಳುಗಳನ್ನು ಮೊಟ್ಟೆ ಸಮೇತ ತಿಂದು ಹಾಕುವುದರಿಂದ ಮುಂದಿನ ದಿನಗಳಲ್ಲಿ ರೋಗಬಾಧೆ ಇಲ್ಲವಾಗುತ್ತದೆ.
ಅರಿಶಿಣ ಕಟಾವು ಸಂದರ್ಭದಲ್ಲಿ ಹೆಚ್ಚಿನ ಹಣ ದೊರಕುತ್ತದೆ ಎಂಬ ಕಾರಣಕ್ಕೆ ಬೆಳೆಗಾರರು ಗುಂಡನ್ನು ಮಾರಾಟ ಮಾಡಿ ಬೆರಳನ್ನು ಬಿತ್ತನೆಗೆ ಇಟ್ಟುಕೊಳ್ಳುತ್ತಾರೆ. ಆದರೆ, ಬೆರಳಿನ ಬದಲು ಗುಂಡು ಅರಿಶಿನ ಬಿತ್ತನೆ ಮಾಡಿದರೆ ಅದು ಎರಡೂ ಕಡೆಗಳಲ್ಲಿ ಮೊಳಕೆ ಬಂದು ಉತ್ತಮ ಪೋಷಕಾಂಶ ನೀಡಿದರೆ ಉತ್ತಮ ಇಳುವರಿ ಬರುತ್ತದೆ. ಬೆರಳು ಬಿತ್ತನೆಯಿಂದ ಬೆಳೆದ ಸಸಿಗಳಿಗೆ ಎಷ್ಟೇ ಗೊಬ್ಬರ ನೀಡಿದರೂ ಅವು ದುರ್ಬಲವಾಗಿಯೇ ಬೆಳೆಯುತ್ತವೆ.
ಹಸು ಸಾಕಣೆ: ತಮ್ಮ ಜಮೀನಿನ ಬದುಗಳ ಬಳಿಯಲ್ಲಿಯೇ ನೇಪಿಯರ್ ಹುಲ್ಲು ಬೆಳೆದು ಹಸುಗಳಿಗೆ ಸಮೃದ್ಧ ಮೇವು ಕೊಡುತ್ತಿದ್ದಾರೆ. ಎಚ್‌ಎಫ್ ಮತ್ತು ಜರ್ಸಿ ತಳಿಯ 9ನೇ ತಲೆಮಾರಿನ ಹಸುಗಳಿದ್ದು ಸದ್ಯ 3 ರಾಸುಗಳಿಂದ ಹಾಲು ಉತ್ಪಾದನೆ ಮಾಡುತ್ತಿದ್ದಾರೆ.
ಭೂಮಿಗೆ ರಾಸಾಯನಿಕ ಗೊಬ್ಬರ ಬದಲು ನೈಸರ್ಗಿಕವಾಗಿ ದೊರೆಯುವ ಹಸಿರುಎಲೆಗಳು, ಕೊಳೆತ ಪದಾರ್ಥಗಳ ಕಾಪೋಸ್ಟ್ ಗೊಬ್ಬರವನ್ನು ಬೆಳೆಗಳಿಗೆ ನೀಡಲಾಗುತ್ತದೆ. ಹಿಂದಿನಿಂದಲೂ ಭೂಮಿಗೆ ರಾಸಾಯನಿಕ ಕೊಟ್ಟಿರುವುದರಿಂದ ಈಗ ಕೊಡದಿದ್ದರೆ ಬೆಳೆಯುವುದಿಲ್ಲ. ಆದ್ದರಿಂದ ಆರಂಭದಲ್ಲಿ ಡಿಎಪಿ, 20:20, ಪೊಟ್ಯಾಷ್, ಬೇವಿನ ಇಂಡಿ ಮಿಶ್ರಣ ಮಾಡಿ ಪ್ರತಿ ಎಕರೆಗೆ 150 ಕೆಜಿ ಬಳಕೆ ಮಾಡಿದರೆ ಸಾಕಾಗುತ್ತದೆ. ಪ್ರತಿ ಎಕರೆಗೆ 2 ರಿಂದ 2.25 ಟನ್ ಇಳುವರಿ ಪಡೆಯಲಾಗುತ್ತಿದೆ. ಕಳೆದ ವರ್ಷ 1.8 ಲಕ್ಷ ರೂ. ಖರ್ಚು ಮಾಡಿ ಬೆಳೆದಿದ್ದರೂ 3 ಟನ್ ಬೆಳೆ ಬಂದಿತ್ತು.
ಕುಮಾರ್, ತೆರಕಣಾಂಬಿಹುಂಡಿ ರೈತರು.