ಚಾಮರಾಜನಗರ : ನಂಜನಗೂಡು ತಾಲೂಕಿನ ದೇವರಸನಹಳ್ಳಿಯ ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದ ರೊಟೋವೇಟರ್‌ಗೆ ಸಿಲುಕಿ ಮೃತಪಟ್ಟಿದ್ದ ಬಾಲಕನ ಅಂತ್ಯಸಂಸ್ಕಾರ ಶನಿವಾರ ಕಾಗಲವಾಡಿ ಗ್ರಾಮದಲ್ಲಿ ನೆರವೇರಿತು.
ತಾಲೂಕಿನ ಕಾಗಲವಾಡಿ ಗ್ರಾಮದ ಕಾರ್ತಿಕ್ ಮತ್ತು ಮಮತಾ ದಂಪತಿಯ ಪುತ್ರ 2ನೇ ತರಗತಿ ವಿದ್ಯಾರ್ಥಿ ಭವಿಷ್(7) ಮೃತರು. ಮೃತ ದೇಹವನ್ನು ಶುಕ್ರವಾರ ರಾತ್ರಿಯೇ ಕಾಗಲವಾಡಿ ಗ್ರಾಮಕ್ಕೆ ತರಲಾಗಿತ್ತು. ಈ ವೇಳೆ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಶನಿವಾರ ಮಧ್ಯಾಹ್ನ 12.30ಕ್ಕೆ ಕಾರ್ತಿಕ್ ಅವರ ಜಮೀನಿನಲ್ಲಿ ಸಂಬಂಧಿಕರ ಆಕ್ರಂದನದ ನಡುವೆ ಅಂತ್ಯಸಂಸ್ಕಾರ ಮಾಡಲಾಯಿತು. ಇದಕ್ಕೂ ಮೊದಲು ಬಾಲಕನ ಪಾರ್ಥಿವ ಶರೀರವನ್ನು ಮನೆಯ ಮುಂಭಾಗ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಈ ಸಂದರ್ಭದಲ್ಲಿ ಮೃತ ಬಾಲಕನ ತಾಯಿ ಮತ್ತು ಹತ್ತಿರದ ಸಂಬಂಧಿಕರ ರೋದನ ಕರುಳನ್ನು ಹಿಂಡುವಂತಿತ್ತು. ಈ ವೇಳೆ ಬಾಲಕನ ತಾಯಿ ಅಸ್ವಸ್ಥರಾಗಿದ್ದರು.
ಕಾಗಲವಾಡಿ ಗ್ರಾಮವಲ್ಲದೇ ದೇವರಸನಹಳ್ಳಿಯಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಸಂಬಂಧಿಕರು ಭೇಟಿ ನೀಡಿ ಅಂತಿಮ ದರ್ಶನ ಪಡೆದುಕೊಂಡರು. ಸಾರ್ವಜನಿಕರು ಕೂಡ ಮೃತ ಬಾಲಕನನ್ನು ನೆನೆದು ಕಂಬನಿ ಮಿಡಿದರು. ಪುಟ್ಟ ಮಕ್ಕಳಿಗೆ ಇಂತಹ ಸಾವು ಬರಬಾರದು ಎಂದು ಹಲವರು ನೋವು ತೋಡಿಕೊಳ್ಳುತ್ತಿದ್ದರು. ಯಾರೇ ಪಾಲಕರು ಮಕ್ಕಳನ್ನು ಈ ತರಹ ಟ್ರ್ಯಾಕ್ಟರ್ ಮತ್ತು ಇನ್ನಿತರ ವಾಹನಗಳ ಬಳಿಗೆ ಕಳುಹಿಸಬಾರದು. ಪುಟ್ಟ ಮಕ್ಕಳನ್ನು ಬಹಳ ಜೋಪಾನವಾಗಿ ನೋಡಿಕೊಳ್ಳಬೇಕು. ಆಕಸ್ಮಿಕವಾದರೂ ಇಂತಹ ಘಟನೆಗಳು ಮರುಕಳಿಸಬಾರದು ಎಂದು ಗ್ರಾಮ ಪಂಚಾಯಿತಿ ಸದಸ್ಯ ಪ್ರವೀಣ್ ವಿಜಯವಾಣಿ ಜತೆಗೆ ಮಾತನಾಡಿ ನೋವು ಹಂಚಿಕೊಂಡರು.
ಏನಾಗಿತ್ತು?: ಬಾಲಕ ಭವಿಷ್ ತಾಯಿ ಮಮತಾ ಅವರ ಸ್ವಗ್ರಾಮವಾದ ದೇವರಸನಹಳ್ಳಿಗೆ ಬೇಸಿಗೆ ರಜೆಗಾಗಿ ತೆರಳಿದ್ದರು. ಅಜ್ಜಿ ಮನೆಯವರ ಜಮೀನಿಗೆ ತೆರಳಿ, ಟ್ರ್ಯಾಕ್ಟರ್ ಉಳುಮೆ ಮಾಡುತ್ತಿದ್ದಾಗ ಚಾಲಕನ ಜತೆಗೆ ಕುಳಿತಿದ್ದ. ಈ ವೇಳೆ ಆಕಸ್ಮಿಕವಾಗಿ ಭವಿಷ್ ಕೆಳಗೆ ಉರುಳಿ ಬಿದ್ದಿದ್ದಾನೆ. ಇದು ಚಾಲಕನ ಗಮನಕ್ಕೆ ಬಾರದೆ ರೊಟವೇಟರ್ ಒಳಗೆ ಸಿಲುಕಿ ಬಾಲಕನ ದೇಹ ಪುಡಿಪುಡಿಯಾಗಿತ್ತು.