ಜಿಲ್ಲೆ

ಕನ್ನಡ ಕಲಿತರೂ ಅವಕಾಶಗಳು ಹೆಚ್ಚು

ಕಿರಣ್ ಮಾದರಹಳ್ಳಿ

ಚಾಮರಾಜನಗರ: ಪ್ರಸ್ತುತ ಇಂಗ್ಲಿಷ್ ತಿಳಿದಿದ್ದರೆ ಮಾತ್ರ ಜ್ಞಾನ ಹೆಚ್ಚಾಗುತ್ತದೆ ಎಂಬ ಭಾವನೆ ಇದೆ. ಇದು ಸುಳ್ಳು. ಕನ್ನಡ ಕಲಿತರೂ ಅವಕಾಶಗಳು ಹೆಚ್ಚಾಗಿದ್ದು, ಜ್ಞಾನ ಸಂಪಾದನೆ ಮಾಡಬಹುದು ಎಂದು ತಂತ್ರಜ್ಞಾನ ಬರಹಗಾರ, ಕರಾವಳಿ ವಿಕಿಮಿಡಿಯನ್ಸ್ ಕಾರ್ಯಾಧ್ಯಕ್ಷ ಯು.ಬಿ.ಪವನಜ ಅಭಿಪ್ರಾಯಪಟ್ಟರು.

ನಗರದ ಜೆಎಸ್‌ಎಸ್ ಮಹಿಳಾ ಕಾಲೇಜಿನ ಕನ್ನಡ ವಿಭಾಗದಿಂದ ಆಯೋಜಿಸಿರುವ ಎರಡು ದಿನಗಳ ವಿಕಿಪೀಡಿಯಾ ಸಮುದಾಯ ಬೆಳವಣಿಗೆ ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕನ್ನಡ ಭಾಷೆ ಉಳಿಯಬೇಕಾದರೆ ಅಂತರ್ಜಾಲದಲ್ಲಿ ಮಾಹಿತಿ ಸಾಹಿತ್ಯ ಅಥವಾ ಜ್ಞಾನ ಕನ್ನಡದಲ್ಲಿ ಸಿಗುವಂತಾಗಬೇಕು. ಈಗಾಗಲೇ ಕಥನ ಸಾಹಿತ್ಯ ಕನ್ನಡದಲ್ಲಿ ಲಭ್ಯವಿದೆ. ಆದರೆ, ಮಾಹಿತಿ ಸಾಹಿತ್ಯ ಹೆಚ್ಚಿನ ಪ್ರಮಾಣದಲ್ಲಿ ಇಲ್ಲ. ಅಂತರ್ಜಾಲದಲ್ಲಿ ನಾವು ಹುಡುಕುವ ಮಾಹಿತಿಗಳು ಇಂಗ್ಲಿಷ್‌ನಲ್ಲೇ ಹೆಚ್ಚು ಸಿಗುತ್ತಿವೆ. ವಿಕಿಪೀಡಿಯಾವು ಸ್ವತಂತ್ರ ಮತ್ತು ಮುಕ್ತ ವಿಶ್ವಕೋಶವಾಗಿದ್ದು, ಜಗತ್ತಿನ 332 ಭಾಷೆಗಳಲ್ಲಿ, ಭಾರತದ 24 ಭಾಷೆಗಳಲ್ಲಿ ಮಾಹಿತಿ ಲಭ್ಯವಿದೆ. ವಿಕಿಪೀಡಿಯಾದಲ್ಲಿ ಇಂಗ್ಲಿಷ್ ಭಾಷೆಯಲ್ಲಿ 60 ಲಕ್ಷ ಲೇಖನಗಳಿದ್ದರೆ, ಕನ್ನಡದಲ್ಲಿ 32 ಸಾವಿರವಷ್ಟೇ ಇದೆ. ವಿಕಿಪೀಡಿಯಾದಲ್ಲಿ ಯಾರು ಬೇಕಾದರೂ ಮಾಹಿತಿ ಸಂಪಾದನೆ ಮಾಡಬಹುದು ಎಂದು ಸಲಹೆ ನೀಡಿದರು.

ನಮ್ಮಲ್ಲಿ ಇಂಗ್ಲಿಷ್ ಬಗ್ಗೆ ಭ್ರಮೆ ಇದೆ. ಇಂಗ್ಲಿಷ್ ಗೊತ್ತಿದ್ದರೆ ಮಾತ್ರ ಅವಕಾಶ ಸಿಗುತ್ತದೆ. ಇಂಗ್ಲಿಷ್ ತಿಳಿದಿದ್ದರೆ ಮಾತ್ರ ಜ್ಞಾನ ಹೆಚ್ಚಾಗುತ್ತದೆ ಎಂಬ ಭಾವನೆ ಇದೆ ಎಂಬುದು ಸುಳ್ಳು. ಕನ್ನಡ ಕಲಿತರೂ ಅವಕಾಶ ಇದೆ. ಜನರಲ್ಲಿರುವ ಇಂಗ್ಲಿಷ್‌ನ ಪಿತ್ತ ಹೋಗಬೇಕಾದರೆ ಪ್ರಪಂಚದ ಜ್ಞಾನ ಕನ್ನಡದಲ್ಲಿ ಲಭ್ಯವಾಗಬೇಕು ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ, ಶಿಕ್ಷಕ ಬಿ.ಎಸ್.ವಿನಯ್ ಮಾತನಾಡಿ, ಈಗ ತಂತ್ರಜ್ಞಾನ ವೇಗವಾಗಿ ಸಾಗುತ್ತಿದೆ. ನಾವು ಅವುಗಳನ್ನು ತಿಳಿದುಕೊಳ್ಳದಿದ್ದರೆ ಉಳಿಗಾಲವಿಲ್ಲ. ಕಂಪ್ಯೂಟರ್, ಮೊಬೈಲ್ ಯುಗದಲ್ಲಿ ಅವುಗಳ ಬಗ್ಗೆ ಹೆಚ್ಚು ಗೊತ್ತಿಲ್ಲದಿದ್ದರೂ ಕಲಿತುಕೊಂಡಿದ್ದೇವೆ. ಕನ್ನಡವನ್ನು ಓದುವುದಕ್ಕೆ ಬಾರದವರು ಕೂಡ ಈಗ ಮೊಬೈಲ್‌ನಲ್ಲಿ ಬರುವ ಒಟಿಪಿಯನ್ನು ಓದಿ ಹೇಳುವ ಸಾಮರ್ಥ್ಯ ಹೊಂದಿದ್ದಾರೆ. ತಂತ್ರಜ್ಞಾನ ಈಗ ಅನಿವಾರ್ಯವಾಗಿದೆ ಎಂದರು.

ಅಂತರ್ಜಾಲದಲ್ಲಿ ಇಂಗ್ಲಿಷ್‌ನಲ್ಲಿ ಇರುವಷ್ಟು ಮಾಹಿತಿ ಕನ್ನಡದಲ್ಲಿ ಇಲ್ಲ. ಕನ್ನಡ ಭಾಷೆ ಬೆಳೆಯಬೇಕಾದರೆ, ಈಗಿನ ಅಗತ್ಯಕ್ಕೆ ತಕ್ಕಂತೆ ಭಾಷೆಯನ್ನು ಬಳಸಬೇಕು. ಜಗತ್ತಿನ ಮಾಹಿತಿಗಳು ನಮ್ಮದೇ ಭಾಷೆಯಲ್ಲಿ ಸಿಗುವಂತಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾಲೇಜು ಪ್ರಾಂಶುಪಾಲ ಎನ್.ಮಹದೇವಸ್ವಾಮಿ, ಸಂಪನ್ಮೂಲ ವ್ಯಕ್ತಿಯಾಗಿದ್ದ ಪ್ರಜ್ಞಾ ದೇವಾಡಿಗ, ಕನ್ನಡ ವಿಭಾಗದ ಮುಖ್ಯಸ್ಥ ಬಿ.ಬಿ.ವರಪ್ರಸಾದ್, ಬೋಧಕರು, ಸಿಬ್ಬಂದಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.