oppo_2 
ಜಿಲ್ಲೆ

ಕೃಷಿ ಚಟುವಟಿಕೆಯತ್ತ ಮುಖ ಮಾಡಿದ ರೈತರು

ಕಿರಣ್ ಮಾದರಹಳ್ಳಿ

ಹನೂರು: ತಾಲೂಕಿನಲ್ಲಿ ಒಂದು ವಾರದಿಂದ ಆಗಾಗ್ಗೆ ಮಳೆಯಾಗುತ್ತಿದ್ದು, ಭೂಮಿ ಹದಗೊಂಡಿದೆ. ಇದರಿಂದ ರೈತರು ಎಳ್ಳು ಹಾಗೂ ಸಜ್ಜೆಯನ್ನು ಬಿತ್ತನೆ ಮಾಡಲು ಮುಂದಾಗಿದ್ದು, ಕೃಷಿ ಚಟುವಟಿಕೆಯತ್ತ ಮುಖ ಮಾಡಿದ್ದಾರೆ.

ಕಳೆದ ವರ್ಷ ನಿಗದಿತ ಅವಧಿಯಲ್ಲಿ ಮಳೆಯಾಗದ ಕಾರಣ ತಾಲೂಕಿನ ಬಹುತೇಕ ಕಡೆಗಳಲ್ಲಿ ಬಿತ್ತನೆ ಬೀಜ ಭೂಮಿಯಲ್ಲೇ ಕಮರಿ ಹೋಗಿದ್ದರೆ ಇನ್ನಿತರ ಕಡೆ ಬಂದಿದ್ದ ಪೈರುಗಳು ಬಿಸಿಲಿನ ತಾಪಕ್ಕೆ ಸೊರಗಿ ಹೋಗಿದ್ದವು. ಇದರಿಂದ ಬೆಳೆ ಬೆಳೆಯಲು ಸಾಧ್ಯವಾಗಲಿಲ್ಲ. ಪರಿಣಾಮ ರೈತರು ನಷ್ಟವನ್ನು ಅನುಭವಿಸಬೇಕಾಯಿತು. ಜಮೀನುಗಳು ಪಾಳು ಬಿದ್ದಿದ್ದವು. ಬರದ ಛಾಯೆ ಆವರಿಸಿತ್ತು. ಈ ಹಿನ್ನೆಲೆಯಲ್ಲಿ ತಾಲೂಕನ್ನು ಬರಪೀಡಿತವೆಂದು ಘೋಷಿಸಿತ್ತು. ಅಲ್ಲದೇ ಈ ವರ್ಷ ಆರಂಭದಲ್ಲಿ ಮಳೆಯಾಗದ ಹಿನ್ನೆಲೆ ಅಂತರ್ಜಲ ಮಟ್ಟ ಕುಸಿತಗೊಂಡು ನೀರಾವರಿ ಜಮೀನುಗಳಲ್ಲೂ ಕೃಷಿಗೆ ಹಿನ್ನಡೆಯಾಗಿತ್ತು. ಆದರೆ ಕಳೆದ ವಾರದಿಂದ ಮಳೆ ಬೀಳುತ್ತಿರುವುದರಿಂದ ಬರಡಾಗಿ ನಿಂತಿದ್ದ ಜಮೀನುಗಳು ಹದಗೊಂಡಿವೆ. ಇದರಿಂದ ರೈತಾಪಿ ಸಮುದಾಯದಲ್ಲಿ ಹರ್ಷ ವ್ಯಕ್ತವಾಗಿದ್ದು, ಭೂಮಿಯನ್ನು ಉಳುಮೆಗೊಳಿಸಿ ಬಿತ್ತನೆ ಕಾರ್ಯಕ್ಕೆ ಸಜ್ಜಾಗಿದ್ದಾರೆ.

ಎಲ್ಲೆಲ್ಲಿ ಎಷ್ಟೆಷ್ಟು ಬಿತ್ತನೆ?:
ತಾಲೂಕಿನಲ್ಲಿ ಕೃಷಿ ಇಲಾಖೆಯು 2023-24ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ 31,492 ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ಬೆಳೆಗಳ ಬಿತ್ತನೆ ನಿರ್ದಿಷ್ಟ ಗುರಿಯನ್ನು ಹೊಂದಲಾಗಿದ್ದು, ಅಗತ್ಯ ಬಿತ್ತನೆ ಬೀಜವನ್ನು ವಿತರಿಸಲಾಗಿದೆ. ಈಗಾಗಲೇ 1,098 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯ ನಡೆದಿದೆ. ಅಲ್ಲದೇ ಸದ್ಯಕ್ಕೆ ಅಗತ್ಯವಾದ ಬಿತ್ತನೆ ಬೀಜಗಳನ್ನು ವಿತರಿಸಿದ್ದು, ರೈತರು ಮಳೆಗೆ ಅನುಗುಣವಾಗಿ 3 ತಿಂಗಳ ಬೆಳೆಯಾದ ಸಜ್ಜೆ ಹಾಗೂ ಎಳ್ಳು ಬಿತ್ತನೆ ಕಾರ್ಯವನ್ನು ಶುರು ಮಾಡಿದ್ದಾರೆ. ರಾಮಾಪುರ ಹೋಬಳಿಯಲ್ಲಿ 12,660 ಹೆಕ್ಟೇರ್ ಕೃಷಿ ಭೂಮಿ ಇದ್ದು, ಪ್ರಸ್ತುತ ಮಳೆಯಾಶ್ರಿತ ಪ್ರದೇಶದಲ್ಲಿ 45 ಹೆಕ್ಟೇರ್ ಹಾಗೂ ನೀರಾವರಿ ಪ್ರದೇಶದಲ್ಲಿ 160 ಹೆಕ್ಟೇರ್‌ನಲ್ಲಿ ಸಜ್ಜೆ ಹಾಗೆಯೇ ಮಳೆಯಾಶ್ರಿತ ಪ್ರದೇಶದ 110 ಹೆಕ್ಟೇರ್ ಹಾಗೂ ನೀರಾವರಿಯ 8 ಎಕರೆಯಲ್ಲಿ ಎಳ್ಳನ್ನು ಬಿತ್ತನೆ ಮಾಡಲಾಗಿದೆ. ಇನ್ನು ಹನೂರು ಹೋಬಳಿಯಲ್ಲಿ 84 ಹೆಕ್ಟೇರ್‌ನಲ್ಲಿ ಸಜ್ಜೆ ಹಾಗೂ 120 ಹೆಕ್ಟೇರ್‌ನಲ್ಲಿ ಎಳ್ಳನ್ನು ಬಿತ್ತನೆ ಮಾಡಲಾಗಿದೆ. ಲೊಕ್ಕನಹಳ್ಳಿ ಹೋಬಳಿಯಲ್ಲಿ 47 ಹೆಕ್ಟೇರ್‌ನಲ್ಲಿ ಸಜ್ಜೆ ಹಾಗೂ 85 ಹೆಕ್ಟೇರ್‌ನಲ್ಲಿ ಎಳ್ಳನ್ನು ಬಿತ್ತನೆ ಮಾಡಲಾಗಿದೆ.
ಕೃಷಿ ಚಟುವಟಿಕೆ ಚುರುಕು: ತಾಲೂಕಿನಲ್ಲಿ ಆಗಾಗ್ಗೆ ಮಳೆಯಾಗುತ್ತಿರುವುದರಿಂದ ರೈತಾಪಿ ವರ್ಗದಲ್ಲಿ ಸಂತಸ ಮನೆ ಮಾಡಿದ್ದು, ಕೆಲ ರೈತರು ಈಗಾಗಲೇ ಬಿತ್ತನೆ ಮಾಡಿದ್ದರೆ, ಇನ್ನು ಕೆಲವರು ಭೂಮಿಯನ್ನು ಉಳುಮೆ ಮಾಡಿ ಬಿತ್ತನೆ ಕಾರ್ಯಕ್ಕೆ ಅಣಿಯಾಗಿದ್ದಾರೆ. ಹಾಗಾಗಿ ತಾಲೂಕಿನಲ್ಲಿ ಕೃಷಿ ಚಟುವಟಿಕೆ ಗರಿಗೆದರಿದೆ. ಇದರಿಂದ ಉಳುಮೆ ಜಾನುವಾರು, ಟ್ರಾೃಕ್ಟರ್ ಹಾಗೂ ಕೂಲಿ ಆಳುಗಳಿಗೂ ಬೇಡಿಕೆ ಹೆಚ್ಚಾಗಿದೆ.

ಬಿತ್ತನೆ ಬೀಜ ದಾಸ್ತಾನಿಗೆ ಮುಂಜಾಗ್ರತೆ:
ತಾಲೂಕಿನಲ್ಲಿ ರೈತರು ಸದ್ಯ ಸಜ್ಜೆ ಹಾಗೂ ಎಳ್ಳನ್ನು ಬಿತ್ತನೆ ಮಾಡುತ್ತಿದ್ದಾರೆ. ಆದರೆ ಮುಂಗಾರಿನಲ್ಲಿ ಹೆಚ್ಚಾಗಿ ರಾಗಿ ಹಾಗೂ ಮುಸುಕಿನ ಜೋಳವನ್ನು ಬಿತ್ತನೆ ಮಾಡುತ್ತಾರೆ. ಹಾಗಾಗಿ ಕೃಷಿ ಇಲಾಖೆ ಹನೂರು ಹೋಬಳಿಯಲ್ಲಿ ರಾಗಿ 3,500 ಹೆಕ್ಟೇರ್, ಲೊಕ್ಕನಹಳ್ಳಿ ವ್ಯಾಪ್ತಿಯಲ್ಲಿ 3,550 ಹೆಕ್ಟೇರ್ ಹಾಗೂ ರಾಮಾಪುರ ಭಾಗದಲ್ಲಿ 6 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯ ಗುರಿಯನ್ನು ಹೊಂದಲಾಗಿದೆ. ಹಾಗೆಯೇ ಹನೂರು ವ್ಯಾಪ್ತಿಯಲ್ಲಿ ಮುಸುಕಿನ ಜೋಳ 4,200 ಹೆಕ್ಟೇರ್, ಲೊಕ್ಕನಹಳ್ಳಿಯಲ್ಲಿ 4,780 ಹೆಕ್ಟೇರ್ ಹಾಗೂ ರಾಮಾಪುರ ವ್ಯಾಪ್ತಿಯಲ್ಲಿ 4,570 ಹೆಕ್ಟೇರ್ ಪ್ರದೇಶದಲ್ಲಿ ಗುರಿ ಹೊಂದಲಾಗಿದ್ದು, ಬಿತ್ತನೆ ಬೀಜ ವಿತರಣೆಗೆ ಅಗತ್ಯ ಮುಂಜಾಗ್ರತಾ ಕ್ರಮ ವಹಿಸಿದೆ.

ತಾಲೂಕಿನಲ್ಲಿ ಇದೀಗ ಮಳೆಯಾಗುತ್ತಿರುವುದರಿಂದ ರೈತರು ಎಳ್ಳು ಹಾಗೂ ಸಜ್ಜೆ ಬಿತ್ತನೆ ಕಾರ್ಯಕ್ಕೆ ಮುಂದಾಗಿದ್ದು, ಅಗತ್ಯ ಬಿತ್ತನೆ ಬೀಜಗಳನ್ನು ವಿತರಿಸಲಾಗಿದೆ. ಅಲ್ಲದೇ ಮುಂಗಾರಿನಲ್ಲಿ ರಾಗಿ ಹಾಗೂ ಮುಸುಕಿನ ಜೋಳಕ್ಕೆ ಹೆಚ್ಚಿನ ಬೇಡಿಕೆ ಇರುವುದರಿಂದ ನಿಗದಿಪಡಿಸಿರುವ ಗುರಿಗೆ ಅನುಗುಣವಾಗಿ ಬಿತ್ತನೆ ಬೀಜ ದಾಸ್ತಾನಿಗೆ ಈಗಾಗಲೇ ಅಗತ್ಯ ಕ್ರಮವಹಿಸಲಾಗಿದೆ.
ನಾಗೇಂದ್ರ, ಕೃಷಿ ಅಧಿಕಾರಿ, ಹನೂರು