ಜಿಲ್ಲೆ

ಹೈನಾ ರಕ್ಷಣೆಗೆ ಧಾವಿಸಿದ ಅರಣ್ಯ ಇಲಾಖೆ

ಕಿರಣ್ ಮಾದರಹಳ್ಳಿ

ಗುಂಡ್ಲುಪೇಟೆ: ಕಾಡಂಚಿನ ಗ್ರಾಮದತ್ತ ಬಂದಿದ್ದ ಹೈನಾ(ಕತ್ತೆ ಕಿರುಬ)ವೊಂದು ಬೀದಿ ನಾಯಿಗಳ ದಾಳಿ ತಪ್ಪಿಸಿಕೊಳ್ಳಲು ಸೇತುವೆಯ ಕೆಳಗೆ ಆಶ್ರಯ ಪಡೆದ ಘಟನೆ ಬಂಡೀಪುರದಲ್ಲಿ ನಡೆದಿದೆ.

ಗುರುವಾರ ಸಂಜೆ ಬಂಡೀಪುರ ವಲಯದ ಚೆನ್ನಿಕಟ್ಟೆ ಸಮೀಪ ಬಂದ ಹೈನಾ ಮೇಲೆ ಬೀದಿ ನಾಯಿಗಳು ಹಾಗೂ ಸಾರ್ವಜನಿಕರು ದಾಳಿನಡೆಸಿದರು. ಈವೇಳೆ ಮಳೆ ನೀರು ಹರಿಯಲು ಅಳವಡಿಸಿದ ಪೈಪ್ ಒಳಗೆ ನುಗ್ಗಿತು. ವಿಷಯ ತಿಳಿದ ಅರಣ್ಯ ಇಲಾಖೆ ಅಧಿಕಾರಿಗಳು ಪಶು ವೈದ್ಯರ ಜತೆ ಹೈನಾ ರಕ್ಷಣೆಗೆ ಸ್ಥಳಕ್ಕೆ ತೆರಳಿ ನಾಯಿಗಳನ್ನು ಓಡಿಸಿದರು. ಹೈನಾ ಗಾಯಗೊಂಡಿದ್ದರೆ ಸೆರೆಹಿಡಿದು ಚಿಕಿತ್ಸೆ ನೀಡಲು ಬಲೆ ಹಾಗೂ ಬೋನನ್ನು ಸಿದ್ಧಪಡಿಸಿ ಕಾದು ಕುಳಿತರು.

ಈ ವೇಳೆ ಕೊಳವೆಯ ಮತ್ತೊಂದು ಭಾಗದಿಂದ ಹೊರಬಂದ ಹೈನಾ ಕಾಡಿನತ್ತ ಓಡಿಹೋಯಿತು. ಕಾರ್ಯಾಚರಣೆ ಸಂದರ್ಭದಲ್ಲಿ ಬಂಡೀಪುರ ಉಪವಿಭಾಗ ಎಸಿಎಫ್ ನವೀನ್, ಆರ್‌ಎಫ್‌ಒ ದೀಪಾ, ಪಶುವೈದ್ಯ ಡಾ.ವಾಸಿಂ ಮಿರ್ಜಾ ಹಾಗೂ ಸಿಬ್ಬಂದಿ ಇದ್ದರು.