ಚಾಮರಾಜನಗರ : ರಾಜ್ಯ ಸರ್ಕಾರ ಬರ ನಿರ್ವಹಣೆಯಲ್ಲಿ ವಿಫಲವಾಗಿದ್ದು, 20 ದಿನಗಳೊಳಗೆ ಎಲ್ಲ ರೈತರಿಗೂ ಬರ ಪರಿಹಾರ ವಿತರಿಸದಿದ್ದರೆ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಎಚ್ಚರಿಸಿದರು.
ನಗರದ ಮಹಾಮನೆ ಸಭಾಂಗಣದಲ್ಲಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ವತಿಯಿಂದ ಗುರುವಾರ ಆಯೋಜಿಸಿದ್ದ ಜಿಲ್ಲೆಯ ರೈತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ರಾಜ್ಯ ಸರ್ಕಾರವೇ ಕಳೆದ 9 ತಿಂಗಳ ಹಿಂದೆ 223 ತಾಲೂಕುಗಳಲ್ಲಿ ಬರಗಾಲ ಘೋಷಿಸಿತು. ಬರಗಾಲದ ನಿಯಮದ ಪ್ರಕಾರ ಘೋಷಣೆಯಾದ ಒಂದೇ ತಿಂಗಳಲ್ಲೇ ಬರಪರಿಹಾರ ವಿತರಣೆಗೆ ಕಾನೂನಿನಲ್ಲಿ ಅವಕಾಶ ಇದೆ. ಆದರೆ ರಾಜ್ಯ ಸರ್ಕಾರ ರೈತರಿಗೆ ಪರಿಹಾರ ನೀಡದೆ ಅನ್ಯಾವೆಸಗುತ್ತಿದೆ. ಒಂದು ಹೆಕ್ಟೇರ್ ನೀರಾವರಿ ಜಮೀನಿಗೆ 13.500 ರೂ. ಒಣಭೂಮಿ ಆದರೆ ಒಂದು ಹೆಕ್ಟೇರ್‌ಗೆ 23.500 ಬರಪರಿಹಾರ ನೀಡಬೇಕು. ಅದನ್ನು ಬಿಟ್ಟು ರೈತರ ಖಾತೆಗೆ ಭಿಕ್ಷೆಯ ರೂಪದಲ್ಲಿ 1000, 500, 300, ರೂ.ಗಳನ್ನು ಜಮಾ ಮಾಡಿ, ಸರ್ಕಾರ ದೊಡ್ಡದೊಡ್ಡ ಕಂಪನಿ ಲೂಟಿ ಮಾಡಿ ವಾಮಮಾರ್ಗ ಅನುಸರಿಸುತ್ತಿದೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಒಟ್ಟು 70ಲಕ್ಷಕ್ಕೂ ಹೆಚ್ಚು ರೈತರಿದ್ದು, ಕೇವಲ 27 ಲಕ್ಷ ರೈತರ ಖಾತೆಗೆ ಮಾತ್ರ ಬರಪರಿಹಾರ ವಿತರಣೆ ಮಾಡಿದೆ. ಜಾನುವಾರಿಗಳಿಗೆ ಮೇವು ಮತ್ತು ನೀರು ಪೂರೈಕೆ ಮಾಡಲು ಸರ್ಕಾರಕ್ಕೆ ಆಗುತ್ತಿಲ್ಲ. ಚಾಮರಾಜನಗರ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಬಿರುಗಾಳಿ ಮಳೆಗೆ ಫಸಲು ಹಾನಿಯಾಗಿರುವುದರಿಂದ ಅಂತಹ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೂಕಳ್ಳಿ ಮಹದೇವಸ್ವಾಮಿ, ರಾಜ್ಯ ಸಂಘಟನಾ ಕಾರ್ಯದರ್ಶಿ ಉತ್ತುವಳ್ಳಿ ದೇವರಾಜ್, ಜಿಲ್ಲಾ ಉಪಾಧ್ಯಕ್ಷ ಪಟೇಲ್ ಶಿವಮೂರ್ತಿ, ತಾಲೂಕು ಅಧ್ಯಕ್ಷ ನಂಜೆದೇವನಪುರ ಸತೀಶ್, ಷಡಕ್ಷರಿ, ಯರಿಯೂರ ಮಹೇಶ್, ಉಡಿಗಾಲ ಸುಂದ್ರಪ್ಪ, ಹೆಗ್ಗೋಠಾರ ಶಿವಸ್ವಾಮಿ, ಕುರುಬೂರು ಸಿದ್ದೇಶ್, ಮಂಜು, ಕಿರಗಸೂರು ಶಂಕರ್, ಕುಮಾರ್, ಮಹದೇವಸ್ವಾಮಿ ಇತರರಿದ್ದರು.