ಚಾಮರಾಜನಗರ: ‘ವಿಧಾನಸಭೆಯ ಉಪಸಭಾಧ್ಯಕ್ಷ ಸ್ಥಾನ ನನಗೆ ಬೇಡ ಎಂದಿದ್ದೇನೆ..ಶಾಸಕ ರುದ್ರಪ್ಪ ಲಮಾಣಿಗೆ ಈ ಅವಕಾಶ ನೀಡಿ ಎಂದು ಹೇಳಿದ್ದೇನೆ’..!
ಇದು ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರ ಹೇಳಿಕೆ. ಉಪಸಭಾಧ್ಯಕ್ಷರಾಗಲು ಒಪ್ಪಿದ್ದ ಇವರು ಮತ್ತೆ ಒಲ್ಲೆ ಎನ್ನುವ ಮೂಲಕ ಪಕ್ಷಕ್ಕೆ ಅಂತಿಮ ನಿರ್ಧಾರವನ್ನು ತಿಳಿಸಿದ್ದಾರೆ. ನಾಲ್ಕು ಬಾರಿ ಗೆದ್ದಿರುವ ಶಾಸಕ ಸಿ.ಪುಟ್ಟರಂಗಶೆಟ್ಟಿಗೆ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟ ರಚನೆ ಸಂದರ್ಭದಲ್ಲಿ ಮಂತ್ರಿಗಿರಿ ಭಾಗ್ಯ ಒದಗಿಬರಲಿಲ್ಲ. ಆದರೆ ಪಕ್ಷ ಇವರಿಗೆ ಉಪಸಭಾಧ್ಯಕ್ಷರನ್ನಾಗಿ ಆಯ್ಕೆ ಮಾಡಲು ತೀರ್ಮಾನಿಸಿತ್ತು. ಪ್ರಾರಂಭಿಕ ದಿನಗಳಲ್ಲಿ ಈ ಸ್ಥಾನವನ್ನು ಶಾಸಕ ಸಿ.ಪುಟ್ಟರಂಗಶೆಟ್ಟಿ ತಿರಸ್ಕರಿಸಿದ್ದರು.
ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಾಯದ ಮೇರೆಗೆ ಒಪ್ಪಿಕೊಂಡು ವಿಧಾನಸಭೆ ಅಧಿವೇಶಕ್ಕೆ ತೆರಳಿದ್ದರು. ಆಯ್ಕೆ ಪ್ರಕ್ರಿಯೆ ಶುರುವಾಗಿರುವ ಸಂದರ್ಭದಲ್ಲಿ ಮತ್ತೊಮ್ಮೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಶಾಸಕ ರುದ್ರಪ್ಪ ಲಮಾಣಿ ಅವರನ್ನು ಉಪಸಭಾಧ್ಯಕ್ಷರನ್ನಾಗಿ ಆಯ್ಕೆ ಮಾಡಲು ಪಕ್ಷ ತೀರ್ಮಾನಿಸಿದೆ. ಹಾಗಾಗಿ ಜಿಲ್ಲೆಯ ಪಾಲಿಗೆ ಸಿಗಲಿದ್ದ ಸಾಂವಿಧಾನಿಕ ಘನಹುದ್ದೆಯೊಂದು ಕೈ ತಪ್ಪಿದೆ.
ರಾಜಕೀಯ ಪ್ರಾತಿನಿಧ್ಯ ಸಿಗದ ಜಿಲ್ಲೆ:
ಕಾಂಗ್ರೆಸ್ ಸರ್ಕಾರದಲ್ಲಿ ಜಿಲ್ಲೆಗೆ ಪ್ರಾತಿನಿಧ್ಯ ಸಿಕ್ಕಿಲ್ಲ. ಚಾಮರಾಜನಗರದಲ್ಲಿ ಸಿ.ಪುಟ್ಟರಂಗಶೆಟ್ಟಿ, ಕೊಳ್ಳೇಗಾಲದಲ್ಲಿ ಎ.ಆರ್.ಕೃಷ್ಣಮೂರ್ತಿ, ಗುಂಡ್ಲುಪೇಟೆಯಲ್ಲಿ ಎಚ್.ಎಂ.ಗಣೇಶ್‌ಪ್ರಸಾದ್ ಗೆದ್ದು ಶಾಸಕರಾಗಿದ್ದಾರೆ. ಈ ಮೂವರಲ್ಲಿ ಎಚ್.ಎಂ.ಗಣೇಶ್‌ಪ್ರಸಾದ್ ಮೊದಲ ಬಾರಿಗೆ ಆಯ್ಕೆಯಾಗಿದ್ದಾರೆ. ಉಳಿದಂತೆ ಸಿ.ಪುಟ್ಟರಂಗಶೆಟ್ಟಿ ನಾಲ್ಕನೇ ಗೆಲುವು ದಾಖಲಿಸಿರುವ ಜನಪ್ರಿಯ ಶಾಸಕ. ಎ.ಆರ್.ಕೃಷ್ಣಮೂರ್ತಿ ಹಿರಿಯ, ಸಜ್ಜನ ರಾಜಕಾರಣಿ. ಈ ಇಬ್ಬರೂ ಸಚಿವರಾಗಲು ಅರ್ಹರಿದ್ದರು. ಹಿಂದಿನ ಸರ್ಕಾರದಲ್ಲಿ ಸಿ.ಪುಟ್ಟರಂಗಶೆಟ್ಟಿಗೆ ಸಚಿವರಾಗಿ ಕೆಲಸ ಮಾಡಿದ ಅನುಭವವೂ ಇತ್ತು. ಇವರಿಗೆ ಸಚಿವ ಸ್ಥಾನ ಕೈ ತಪ್ಪಿತು. ಈಗ ಉಪಸಭಾಧ್ಯಕ್ಷ ಸ್ಥಾನವನ್ನು ಬೇಡವೆಂದಿದ್ದಾರೆ.
ಸಚಿವ ಸಂಪುಟ ರಚನೆ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿ ‘ಕೆಲವು ಜಿಲ್ಲೆಗಳಿಗೆ ರಾಜಕೀಯ ಪ್ರಾತಿನಿಧ್ಯ ಒದಗಿಸಲು ಸಾಧ್ಯವಾಗಿಲ್ಲ’ ಎಂದಿದ್ದರು. ಉದಾಹರಣೆಗೆ ಕೊಡಗು ಜಿಲ್ಲೆಯನ್ನು ಉಲ್ಲೇಖಿಸಿದ್ದರು. ನಂತರ ವಿರಾಜಪೇಟೆಯ ಶಾಸಕ ಎ.ಎಸ್.ಪೊನ್ನಣ್ಣ ಅವರನ್ನು ಸಿಎಂ ಕಾನೂನು ಸಲಹೆಗಾರರಾಗಿ ನೇಮಕ ಮಾಡಲಾಯಿತು. ಇದೇ ರೀತಿ ಜಿಲ್ಲೆಗೂ ರಾಜಕೀಯ ಶಕ್ತಿ ತುಂಬೇಕಿದೆ. ತನಗೆ ಒಪ್ಪಿತ ವಲ್ಲದ ಕಾರಣಕ್ಕೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಉಪ ಸಭಾಧ್ಯಕ್ಷ ಸ್ಥಾನವನ್ನು ತಿರಸ್ಕಾರ ಮಾಡಿದ್ದಾರೆ. ಅವರ ಆಸಕ್ತಿಯನ್ನು ಆಧರಿಸಿ ಸ್ಥಾನಮಾನ ನೀಡಿದ್ದರೆ ರಾಜ್ಯದಲ್ಲಿರುವ ಉಪ್ಪಾರ ಸಮಾಜದ ಏಕೈಕ ಶಾಸಕನಿಗೆ ರಾಜಕೀಯ ಶಕ್ತಿ ದೊರೆಯುತ್ತಿತ್ತು.
ನಿರಾಸಕ್ತಿಗೆ ಕಾರಣವೇನು?
ಶಾಸಕ ಸಿ.ಪುಟ್ಟರಂಗಶೆಟ್ಟಿ ಉಪಸಭಾಧ್ಯಕ್ಷರಾಗಲು ನಿರಾಸಕ್ತಿ ತೋರಲು ಹಲವು ಕಾರಣಗಳಿವೆ. ದಿನನಿತ್ಯ ಜನರ ಒಡನಾಟ, ರಾಜಕೀಯ ಚಟುವಟಿಕೆಯಲ್ಲಿ ತೊಡಗಿರುವ ಶಾಸಕರಿಗೆ ಉಪಸಭಾಧ್ಯಕ್ಷರಾಗಿ ಜನಸಂಪರ್ಕ, ರಾಜಕೀಯ ರಹಿತವಾಗಿ ಇರಲು ಇಷ್ಟವಿಲ್ಲ. ಈ ಸ್ಥಾನವನ್ನು ನಿಭಾಯಿಸಲು ಇವರು ಮಾನಸಿಕವಾಗಿ ಸಿದ್ಧರಿಲ್ಲ. ಮುಖ್ಯವಾಗಿ ತನಗೆ ಹೊಂದಾಣಿಕೆಯಾಗದ ಸ್ಥಾನವಿದು ಎನ್ನುವುದು ಶೆಟ್ಟರಿಗೆ ಚೆನ್ನಾಗಿ ಗೊತ್ತಿದೆ.
ನಿಗಮ ಮಂಡಳಿಯತ್ತ ಕಣ್ಣು:
ಸಚಿವ ಸಂಪುಟ ರಚನೆ ಬಳಿಕ ಈಗ ನಿಗಮ ಮಂಡಳಿಗಳ ಕಡೆ ಎಲ್ಲರ ದೃಷ್ಟಿ ಹರಿದಿದೆ. ಶಾಸಕರಿಗೇ ಮಂತ್ರಿಭಾಗ್ಯ ದೊರೆಯದ ಇರುವುದರಿಂದ ನಿಗಮ, ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ನಡೆಯುತ್ತಿರುವ ಪೈಪೋಟಿಗೆ ಈಗ ತೂಕ ಹೆಚ್ಚಾಗಿದೆ. ಶಾಸಕ ಸಿ.ಪುಟ್ಟರಂಗಶೆಟ್ಟಿಗೆ ಪಕ್ಷ ಮುಂದಿನ ದಿನಗಳಲ್ಲಿ ಯಾವ ಜವಾಬ್ದಾರಿ ನೀಡುತ್ತದೆಯೋ ಕಾದುನೋಡಬೇಕಾಗಿದೆ. ಎ.ಆರ್.ಕೃಷ್ಣಮೂರ್ತಿಗೆ ಸಿಗುವ ಅವಕಾಶವೇನು ಎನ್ನುವ ಪ್ರಶ್ನೆ ಎದ್ದಿದೆ. ಈ ಮಧ್ಯೆ ನಿಗಮ ಮಂಡಳಿ ಅಧ್ಯಕ್ಷರ ಸ್ಥಾನದ ಆಕಾಂಕ್ಷಿಗಳ ಸಾಲಿನಲ್ಲಿ ಕೊಳ್ಳೇಗಾಲ ಮಾಜಿ ಶಾಸಕ ಜಯಣ್ಣ, ಹನೂರು ಮಾಜಿ ಶಾಸಕ ಆರ್.ನರೇಂದ್ರ, ಜಿಲ್ಲಾಧ್ಯಕ್ಷ ಪಿ.ಮರಿಸ್ವಾಮಿ ಹೆಸರು ಕೇಳಿಬರುತ್ತಿದೆ.