ಚಾಮರಾಜನಗರ : ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಶಿಕ್ಷಣ ಸಚಿವ ಮಧು ಬಂಗಾರಪ್ಪ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡಿದ್ದು, ಚುನಾವಣಾ ಆಯೋಗಕ್ಕೆ ದೂರು ನೀಡುವುದಾಗಿ ದಕ್ಷಿಣ ಶಿಕ್ಷಕರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯ ಕೆ.ಪುಟ್ಟಸಿದ್ದಶೆಟ್ಟಿ ಹೇಳಿದರು.
ಈ ಬಾರಿ ವಿಧಾನ ಪರಿಷತ್ ಚುನಾವಣೆಯನ್ನು ಗೆಲ್ಲುವ ಉದ್ದೇಶದಿಂದ ಇಡೀ ಸರ್ಕಾರವೇ ಅಭ್ಯರ್ಥಿ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಭಾಗಿಯಾಗಿರುವುದು ಸೂಕ್ತವಲ್ಲ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರು ದಕ್ಷಿಣ ಶಿಕ್ಷಕರ ಕ್ಷೇತ್ರವನ್ನು ಗೆಲ್ಲುವ ಉದ್ದೇಶದಿಂದ ಹಣದ ಆಮಿಷ ಒಡ್ಡುತ್ತಿದ್ದಾರೆ. ಇದನ್ನು ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಿ ಅವರಿಗೆ ನೋಟಿಸ್ ನೀಡಬೇಕು. ಇಲ್ಲವೇ ಚುನಾವಣಾ ಆಯೋಗದ ಕಚೇರಿ ಮುಂಭಾಗ ಧರಣಿ ನಡೆಸುವುದಾಗಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.
ವಿಧಾನ ಪರಿಷತ್ ಚುನಾವಣೆಯಲ್ಲಿ ಎಲ್ಲ ಪಕ್ಷಗಳು 30 ವರ್ಷಗಳಿಂದ ಚಾಮರಾಜನಗರ ಜಿಲ್ಲೆಯನ್ನು ಕಡೆಗಣಿಸುತ್ತಿದ್ದಾರೆ. ಇಲ್ಲಿಯವರೆಗೂ ಮಂಡ್ಯ ಜಿಲ್ಲೆಯವರಿಗೆ ಮಾತ್ರ ಅವಕಾಶ ನೀಡಲಾಗಿದೆ. ಕಾಂಗ್ರೆಸ್ ಸರ್ಕಾರ ಶಿಕ್ಷಕರಿಗೆ ಕೊಟ್ಟ ಯಾವ ಭರವಸೆಯನ್ನು ಈಡೇರಿಸಿಲ್ಲ. 7ನೇ ವೇತನ ಆಯೋಗ, ಹಳೆಯ ಪಿಂಚಣಿ ಯೋಜನೆ ಜಾರಿಗೆ ತರುತ್ತೇವೆ ಎಂದು ವಿಧಾನಸಭಾ ಚುನಾವಣೆಯಲ್ಲಿ ಭರವಸೆ ನೀಡಿದ್ದರು. ಸುಮಾರು 8 ಲಕ್ಷ ಶಿಕ್ಷಕರ ಮತವನ್ನು ಪಡೆದು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಶಿಕ್ಷಕರ ಭರವಸೆಯನ್ನು ಈಡೇರಿಸಲು ಮುಂದಾಗಿಲ್ಲ. ಸಿದ್ದರಾಮಯ್ಯ ನುಡಿದಂತೆ ನಡೆಯುವ ಮುಖ್ಯಮಂತ್ರಿ ಅಲ್ಲ ಎಂದು ದೂರಿದರು.
ನಾನು ಈ ಹಿಂದೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಶಿಕ್ಷಕರಿಗೆ ಅನುಕೂಲವಾಗುವಂತೆ ಸಾಕಷ್ಟು ಕೆಲಸಗಳನ್ನು ಮಾಡಿದ್ದೇನೆ. ಹಾಗಾಗಿ ಈ ಬಾರಿಯ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಶಿಕ್ಷಕರು ನನ್ನನ್ನು ಪರಿಗಣಿಸಿ, ಪ್ರಥಮ ಪ್ರಾಶಸ್ತ್ಯದ ಮತವನ್ನು ನೀಡಬೇಕು ಎಂದು ಮನವಿ ಮಾಡಿದರು.
ಗೋಷ್ಠಿಯಲ್ಲಿ ಶಿಕ್ಷಕ ವರದರಾಜ್, ಕಾಯಕ ಸಮುದಾಯಗಳ ಒಕ್ಕೂಟದ ರಾಜ್ಯ ಸಂಚಾಲಕ ಎಚ್.ಎಲ್.ಕೆಂಪಶೆಟ್ಟಿ, ಸಂಘಟನಾ ಕಾರ್ಯದರ್ಶಿ ಶಿವರಾಜಪ್ಪ, ಉಪಾಧ್ಯಕ್ಷ ಶಿವಪ್ಪ ಶೆಟ್ಟಿ, ಮೈಸೂರು ವಿಭಾಗದ ಸಂಘಟನಾ ಕಾರ್ಯದರ್ಶಿ ಕುಮಾರ್ ಇದ್ದರು.