ಚಾಮರಾಜನಗರ: ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಕಾಪಾಡುವ ಪೊಲೀಸ್ ಸಿಬ್ಬಂದಿ ನೆಮ್ಮದಿಯ ಜೀವನ ನಡೆಸಲು ವಸತಿಗೃಹ ಸಮಸ್ಯೆ ಎದುರಾಗಿದೆ.
ತಾಲೂಕಿನ ಸಂತೇಮರಹಳ್ಳಿ ಪೊಲೀಸ್ ಠಾಣೆಯಲ್ಲಿ ಇನ್ಸ್‌ಪೆಕ್ಟರ್, ಸಬ್ ಇನ್ಸ್‌ಪೆಕ್ಟರ್ ಸೇರಿದಂತೆ ಒಟ್ಟು 30 ಪೊಲೀಸ್ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಲವು ವರ್ಷಗಳ ಕಾಲ, ಈ ಸಿಬ್ಬಂದಿಗೆ ವಸತಿಗೃಹಗಳ ಸೌಲಭ್ಯವಿರಲಿಲ್ಲ. ಸಾಕಷ್ಟು ವರ್ಷಗಳ ನಂತರ ಹಿಂದಿನ ಸರ್ಕಾರ ಪೊಲೀಸ್ ಸಿಬ್ಬಂದಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವ ಉದ್ದೇಶದಿಂದ 2021ರ ಆಗಸ್ಟ್‌ನಲ್ಲಿ ಕಾನ್‌ಸ್ಟೇಬಲ್‌ಗಳಿಗೆ ಅನುಕೂಲವಾಗುವಂತೆ ಸುಮಾರು 12 ವಸಗೃಹಗಳನ್ನು ನಿರ್ಮಿಸಿ ಉದ್ಘಾಟಿಸಿತ್ತು.
ಈ ಭಾಗದಲ್ಲಿ ಸಂತೇಮರಹಳ್ಳಿ ಹಾಗೂ ಕುದೇರು ಗ್ರಾಮದಲ್ಲಿ ಪೊಲೀಸ್ ಠಾಣೆಗಳು ಕಾರ್ಯನಿರ್ವಹಿಸುತ್ತಿದ್ದು, 30 ಸಿಬ್ಬಂದಿಗೆ 12 ವಸತಿಗೃಹಗಳು ಮಾತ್ರ ಲಭ್ಯವಿದೆ. ಸಂತೇಮರಹಳ್ಳಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾನ್‌ಸ್ಟೇಬಲ್‌ಗಳು ವಸತಿಗೃಹ ಕಲ್ಪಿಸುವಂತೆ ಮೇಲಧಿಕಾರಿಗಳಿಗೆ ಮನವಿ ಮಾಡಿದರೆ, ಕುದೇರು ವಸತಿಗೃಹಕ್ಕೆ ಹೋಗಿ ಎಂದು ಹೇಳುತ್ತಾರೆ. ಆದರೆ, ಕುದೇರು ಪೊಲೀಸ್ ಠಾಣೆಯ ವಸತಿಗೃಹಗಳಲ್ಲಿ ಮೂಲಸೌಕರ್ಯ ಸಮಸ್ಯೆ ಇದೆ ಎಂಬುದು ಸಿಬ್ಬಂದಿಯ ಅಳಲು.
ಪೊಲೀಸ್ ಸಿಬ್ಬಂದಿ ಸದಾ ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಾರೆ. ಕುಟುಂಬದ ಜತೆ ಕಾಲ ಕಳೆಯುವುದು ಕೂಡ ವಿರಳ. ಅಂತಹ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿಗೆ ಸೂಕ್ತ ರೀತಿಯಲ್ಲಿ ಪೊಲೀಸ್ ಠಾಣೆಯ ಸಮೀಪದಲ್ಲಿ ವಸತಿಗೃಹಗಳನ್ನು ನಿರ್ಮಾಣ ಮಾಡಿಕೊಡುವುದು ಇಲಾಖೆ ಮತ್ತು ಸರ್ಕಾರದ ಕರ್ತವ್ಯ. ಈ ನಿಟ್ಟಿನಲ್ಲಿ ಸೂಕ್ತ ರೀತಿಯಲ್ಲಿ ವಸತಿಗೃಹ ನಿರ್ಮಾಣ ಮಾಡಿಕೊಡಬೇಕು ಎಂಬುದು ಸಿಬ್ಬಂದಿ ಒತ್ತಾಯ.
ಬಾಡಿಗೆ ಮನೆಯಲ್ಲಿ ವಾಸ: ಸಂತೇಮರಹಳ್ಳಿ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುವ ಹಲವು ಕಾನ್‌ಸ್ಟೇಬಲ್‌ಗಳು ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ. ಇದರಿಂದ ಆರ್ಥಿಕ ಹೊರೆ ಉಂಟಾಗುತ್ತಿದೆ. ವಸತಿಗೃಹ ದೊರೆತರೆ ಸಿಬ್ಬಂದಿ ಆರ್ಥಿಕ ಸಮಸ್ಯೆ ಕಡಿಮೆಯಾಗಲಿದೆ. ಅದರಲ್ಲೂ ಮಹಿಳಾ ಸಿಬ್ಬಂದಿಗೆ ತುಂಬಾ ತೊಂದರೆಯಾಗುತ್ತದೆ. ಪೊಲೀಸ್ ಠಾಣೆಯ ಸಮೀಪದಲ್ಲಿ ಸೂಕ್ತ ರೀತಿಯಲ್ಲಿ ವಸತಿಗೃಹಗಳು ಇದ್ದರೆ ಸಿಬ್ಬಂದಿಗೆ ಅನುಕೂಲವಾಗುತ್ತದೆ ಎಂಬುದು ಕಾನ್‌ಸ್ಟೇಬಲ್ ಒಬ್ಬರ ಅಭಿಪ್ರಾಯ.
ಸಂತೇಮರಹಳ್ಳಿಯಲ್ಲಿ 30ಜನ ಸಿಬ್ಬಂದಿಗೆ 12 ವಸತಿಗೃಹಗಳು ಇರುವ ಮಾಹಿತಿ ಇದೆ. ಈ ಕುರಿತು ಹೆಚ್ಚಿನ ವಸತಿಗೃಹ ನಿರ್ಮಾಣಕ್ಕೆ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಲಾಗಿದೆ. ಪದ್ಮಿನಿ ಸಾಹು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂತೇಮರಹಳ್ಳಿ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ವಸತಿ ಸಮಸ್ಯೆ ಉಂಟಾಗಿದೆ. ನಗರದಲ್ಲಿ ಬಾಡಿಗೆ ಮನೆಯಲ್ಲಿದ್ದೇನೆ. ಇದರಿಂದ ಕುಟುಂಬ ನಿರ್ವಹಣೆಗೆ ಸಮಸ್ಯೆಯಾಗುತ್ತಿದೆ.ಹೆಸರು ಹೇಳಲು ಇಚ್ಛಿಸದ ಪೊಲೀಸ್ ಕಾನ್‌ಸ್ಟೇಬಲ್