ಚಾಮರಾಜನಗರ: ವಿಧಾನ ಪರಿಷತ್ ಚುನಾವಣೆಯಲ್ಲಿ ಎಲ್ಲ ಪಕ್ಷಗಳು 30 ವರ್ಷಗಳಿಂದ ಚಾಮರಾಜನಗರ ಜಿಲ್ಲೆಯನ್ನು ಕಡೆಗಣಿಸುತ್ತಿದ್ದಾರೆ ಎಂದು ದಕ್ಷಿಣ ಶಿಕ್ಷಕರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯ ಕೆ.ಪುಟ್ಟಸಿದ್ದಶೆಟ್ಟಿ ಹೇಳಿದರು.
ಇಲ್ಲಿಯವರೆಗೂ ಮಂಡ್ಯ ಜಿಲ್ಲೆಯವರಿಗೆ ಮಾತ್ರ ಅವಕಾಶ ನೀಡಲಾಗಿದೆ. ನಾನು ಈ ಹಿಂದೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಶಿಕ್ಷಕರಿಗೆ ಅನುಕೂಲವಾಗುವಂತೆ ಸಾಕಷ್ಟು ಕೆಲಸಗಳನ್ನು ಮಾಡಿದ್ದೇನೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಗೋಷ್ಠಿಯಲ್ಲಿ ಶಿಕ್ಷಕ ವರದರಾಜ್, ಕಾಯಕ ಸಮುದಾಯಗಳ ಒಕ್ಕೂಟದ ರಾಜ್ಯ ಸಂಚಾಲಕ ಎಚ್.ಎಲ್.ಕೆಂಪಶೆಟ್ಟಿ, ಸಂಘಟನಾ ಕಾರ್ಯದರ್ಶಿ ಶಿವರಾಜಪ್ಪ, ಉಪಾಧ್ಯಕ್ಷ ಶಿವಪ್ಪ ಶೆಟ್ಟಿ, ಮೈಸೂರು ವಿಭಾಗದ ಸಂಘಟನಾ ಕಾರ್ಯದರ್ಶಿ ಕುಮಾರ್ ಇದ್ದರು.