ಜಿಲ್ಲೆ

ಬೇಡಗುಳಿಯಲ್ಲಿ ನೀರಿನ ಕೊರತೆ ತೀವ್ರ

ಕಿರಣ್ ಮಾದರಹಳ್ಳಿ

ಚಾಮರಾಜನಗರ: ಬಿಸಿಲಿನಿಂದ ಬೆಂದು ಕಂಗೆಟ್ಟಿರುವ ಭೂಮಿ ಹನಿ ನೀರನ್ನು ಬಿಡದೆ ಹೀರಿಕೊಳ್ಳುವ ಧಾವಂತದಲ್ಲಿದ್ದರೆ, ದಾಹವನ್ನು ನೀಗಿಸಿಕೊಳ್ಳಲು ಜನರು ಬಿಂದಿಗೆ ಹಿಡಿದು ಕಾದು ಕುಳಿತ್ತಿದ್ದಾರೆ. ನೀರಿಗಾಗಿ ಹಾಹಾಕಾರ ಎದುರಿಸುತ್ತಿರುವ ಈ ಜನರು ವರುಣ ದೇವನ ಆಗಮನಕ್ಕಾಗಿ ಎದುರು ನೋಡುತ್ತಿದ್ದಾರೆ.

ಚಾಮರಾಜನಗರ ತಾಲೂಕಿನ, ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯ ಪ್ರದೇಶ ವ್ಯಾಪ್ತಿಯ ಬೇಡಗುಳಿಯ ನೆಲ ಮತ್ತು ಜನ ಜಲವನ್ನು ಬೇಡುತ್ತಿದ್ದಾರೆ. ಬೆಟ್ಟ ಗುಡ್ಡಗಳಿಂದ ಕೂಡಿರುವ ಈ ಧರೆಗೆ ಮಹಾದಾಹವಿದೆ. ಸುಟ್ಟ ಬೂದಿಯಂತಾಗಿರುವ ಮಣ್ಣು ಮಳೆ ನೀರು ಕುಡಿದು ಘಮಲು ಹೊರಹಾಕಲು ಮಹಾ ಮಳೆಯೇ ಆಗಬೇಕು. ಈಗ ಬೀಳುತ್ತಿರುವ ಸಣ್ಣ ಮಳೆ ‘ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ’ಯಂತಾಗಿದೆ.

ಬೀಳುವ ಸಣ್ಣ ಹನಿಯನ್ನೂ ಭೂಮಿ ಬಿಡದೆ ಹೀರುತ್ತಿದೆ. ಜರಿಯಾಗಿ ಹರಿಯುತ್ತಿದ್ದ ಹೊಳೆಯಲ್ಲಿ ಕೆಸರಕೊಳೆ ಕಾಣಿಸುತ್ತಿದೆ. ಕುಡಿಯಲು ಈ ಹೊಳೆ ನೀರನ್ನೇ ಬಳಸುವ ಬೇಡಗುಳಿ ಜನರಿಗೆ ಕೆಸರಿನ ನೀರು ತಿಳಿಯಾದರಷ್ಟೇ ದಾಹ ನೀಗೋದು.
ಊರಲ್ಲಿ 300ಕ್ಕೂ ಹೆಚ್ಚು ಜನರಿದ್ದಾರೆ. ಇವರಿಗೆಲ್ಲ ನೀರುಣಿಸುತ್ತಿರುವುದು ಒಂದೇ ಬೋರ್‌ವೆಲ್. ಬೇಸಿಗೆಯ ತಾಪಕ್ಕೆ ಅಂತರ್ಜಲ ಕ್ಷೀಣಿಸಿ ಬೋರ್‌ವೆಲ್‌ನ ನೀರಿನ ಮಟ್ಟ ಇಳಿಕೆಯಾಗಿದೆ. ಸರ್ಕಾರಗಳ ಕುಡಿಯುವ ನೀರಿನ ಯೋಜನೆಗಳು ನಗರ, ಪಟ್ಟಣಗಳ ಬೀದಿಗಳನ್ನೇ ತಲುಪಿಲ್ಲ. ಹೀಗಿರುವಾಗ ಬೆಟ್ಟಗುಡ್ಡಗಳ ಮೇಲಿರುವ ಹಳ್ಳಿಗಳನ್ನು ತಲುಪಲು ಹೇಗೆ ಸಾಧ್ಯ?.

ಹಾಗಾಗಿ ಬೇಡಗುಳಿ ಜನರು ಜಲಕ್ಕಾಗಿ ತಮ್ಮ ಪೂರ್ವಜರ ಹಾದಿಯನ್ನೇ ಹಿಡಿದಿದ್ದಾರೆ. ಊರಿನಿಂದ 3 ಕಿ.ಮೀ ದೂರ ಇರುವ ಹೊಳೆಗೆ ಹೋಗಿ ನೀರು ತುಂಬಿಕೊಂಡು ಬಂದು ಉಪಯೋಗಿಸುತ್ತಿದ್ದರು. ಆದರೆ, ಭೀಕರ ಬರಗಾಲ ಹೊಳೆಯ ನೀರನ್ನು ಬತ್ತಿಸಿತು. ಕುಡಿಯುವ ನೀರಿಗೆ ಹಾಹಾಕಾರ ಎದುರಾಗಿರುವಾಗ ಲೋಕಸಭೆ ಚುನಾವಣೆ ಬಂತು. ಗ್ರಾಮಸ್ಥರು ಮತದಾನ ಬಹಿಷ್ಕಾರದ ಪ್ರತಿಭಟನೆ ನಡೆಸಿ ಆಡಳಿತ ವ್ಯವಸ್ಥೆಯ ಗಮನ ಸೆಳೆದರು. ಗ್ರಾಮದಲ್ಲಿ ಮತ್ತೊಂದು ಬೋರ್‌ವೆಲ್ ಕೊರೆಸಲು ಸಲರಾದರು. ಈ ಬೋರ್‌ವೆಲ್‌ನಲ್ಲಿ ನೀರು ಸಿಕ್ಕಿತು. ಆದರೆ ಕೆಟ್ಟು ಹೋಯಿತು. ಚುನಾವಣೆ ಮುಗಿದ ಮೇಲೆ ಗ್ರಾಮದ ಸಮಸ್ಯೆ ಕುರಿತು ಅಧಿಕಾರಿಗಳು ಗಮನಹರಿಸಲಿಲ್ಲ. ಕುಡಿಯುವ ನೀರಿಗೆ ಪರದಾಡುವಾಗ ಮಳೆ ಬಂತು. ಹೊಳೆ ತುಂಬಿ ಹರಿಯುವಷ್ಟು, ಕೊಡದಲ್ಲಿ ತುಂಬಿ ಕೊಂಡೊಯ್ಯುವಷ್ಟು ಮಳೆಯಾಗಿಲ್ಲ.

ಹೀಗಾಗಿ ಗ್ರಾಮಸ್ಥರು ಹೊಳೆ ದಡದ ಕಲ್ಲುಬಂಡೆಗಳ ಮೇಲೆ ಸಂಗ್ರಹಗೊಂಡ ನೀರನ್ನು ಶೇಖರಿಸುತ್ತಿದ್ದಾರೆ. ನೀರು ತುಂಬಿಕೊಳ್ಳುವ ಸಣ್ಣ ಹಳ್ಳಗಳಿಗೆ ಮೇಲಿಂದ ಕಸ ಬೀಳಬಾರದೆಂದು ಜಾಲರಿ ಹಾಕಿದ್ದಾರೆ. ಮಳೆಗಾಗಿ, ಹೊಳೆಯಿಂದ ಹರಿದುಬರುವ ನೀರಿಗಾಗಿ ಕಾಯುತ್ತಿದ್ದಾರೆ. ಬಿದ್ದ ಮಳೆ ನೀರು ಇಂಗಿ ಹೋಗಿ ನೆಲದ ಒಡಲು ಸೇರುತ್ತಿದೆ. ಕಲ್ಲು ಹೊಂಡ, ಜಲ ನಿಲ್ಲುವ ಸ್ಥಳಗಳಲ್ಲಿ ಮಳೆ ನೀರು ತುಂಬಿಕೊಂಡರೆ ಕೆಸರು ನೆಲಕಚ್ಚಿ ನೀರು ತಿಳಿಯಾದ ಮೇಲೆ ಜನರು ಬಳಕೆ ಮಾಡುತ್ತಿದ್ದಾರೆ.

ರೀಬೋರ್ ಮಾಡ್ಸಬೇಕು
ಪುಣಜನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೇಡಗುಳಿ ಗ್ರಾಮದಲ್ಲಿ ಲೋಕಸಭೆ ಚುನಾವಣೆ ಮತದಾನದ ಹಿಂದಿನ ದಿನ ಒಂದು ಬೋರ್‌ವೆಲ್ ಕೊರೆಸಲಾಗಿತ್ತು. ಈ ಬೋರ್‌ವೆಲ್‌ನಲ್ಲಿ ನೀರು ಸಿಕ್ಕರೂ ಪೂರೈಕೆಯಾಗುತ್ತಿಲ್ಲ. ಬೋರ್‌ವೆಲ್ ಪೈಪ್ ಬಿಡುವಾಗ ಕಲ್ಲು ಸಿಕ್ಕಿಹಾಕಿಕೊಂಡಿದೆ. ಇದನ್ನು ರೀಬೋರ್ ಮಾಡಿಸಬೇಕು. ಈ ಸಮಸ್ಯೆ ಬಗೆಹರಿಸಬೇಕೆಂದು ಗ್ರಾಮಸ್ಥರು ಹಲವು ದಿನಗಳಿಂದ ಅಧಿಕಾರಿಗಳಲ್ಲಿ ಮನವಿ ಮಾಡುತ್ತಲೇ ಇದ್ದಾರೆ. ಆದರೆ ಏನೂ ಪ್ರಯೋಜನವಾಗಿಲ್ಲ.

ಹೊಳೆಯಿಂದ ಪೈಪ್‌ಲೈನ್:
ಜಿಲ್ಲಾಡಳಿತ ಮಾಡಬೇಕಿದ್ದ ಕುಡಿಯುವ ನೀರಿನ ಪೈಪ್‌ಲೈನ್ ಅನ್ನು ಬೇಡಗುಳಿ ಗ್ರಾಮಸ್ಥರೇ ಮಾಡಿಕೊಂಡಿದ್ದಾರೆ. ಹೊಳೆ ನೀರು ತುಂಬಿಕೊಳ್ಳುವ ಹಳ್ಳದಿಂದ ಪೈಪ್‌ಲೈನ್ ಮಾಡಿ ಇಳಿಜಾರಿಯಲ್ಲಿ ಹರಿದು ಮನೆಯ ಬಳಿ ಇಟ್ಟಿರುವ ಟ್ಯಾಂಕ್‌ಗೆ ತುಂಬಿಕೊಳ್ಳುವಂತೆ ಮಾಡಿಕೊಂಡಿದ್ದಾರೆ. ಪ್ರಸ್ತುತ ಹೊಳೆಯಲ್ಲಿ ನೀರಿನ ಪ್ರಮಾಣ ಸಂಪೂರ್ಣ ಕಡಿಮೆ ಇರುವುದರಿಂದ ಜನರಿಗೆ ನೀರು ದೊರೆಯುತ್ತಿಲ್ಲ.

ನೀರಿಗಾಗಿ ಗಲಾಟೆ:
ಬೇಡಗುಳಿಯ ವಸತಿ ಶಾಲೆಯಲ್ಲಿ ನೀರು ಕೇಳಿದರೆ ಗಲಾಟೆ ಮಾಡುತ್ತಾರೆ. ಮೋಟಾರ್ ಹಾಳಾಗುತ್ತದೆ ಎಂದು ನೀರು ಕೊಡುವುದಿಲ್ಲ. ಹೊಸ ಬೋರ್‌ವೆಲ್ ಸಮಸ್ಯೆ ಬಗೆಹರಿಸುವ ಸಲುವಾಗಿ ಅಧಿಕಾರಿಗಳು ಮೂರ‌್ನಾಲ್ಕು ಬಾರಿ ಬಂದು ಹೋಗಿದ್ದಾರೆ. ಸೋಮವಾರವೂ ಸಹ ಬೇಡಗುಳಿಗೆ ಬಂದಿದ್ದರು. ಆದರೆ ಸಮಸ್ಯೆ ಬಗೆಹರಿದ ನೀರು ಸಿಗುತ್ತಿಲ್ಲ ಎಂದು ಮಹದೇವು ಹೇಳಿದ್ದಾರೆ.

ನಮ್ಮೂರಿನಲ್ಲಿರುವ ಹಳೆಯ ಬೋರ್‌ವೆಲ್‌ನಿಂದ ಸರಬರಾಜು ಆಗುತ್ತಿರುವ ನೀರು ಸಾಲುತ್ತಿರಲಿಲ್ಲ. ಇನ್ನೊಂದು ಬೋರ್‌ವೆಲ್ ಕೊರೆಸಬೇಕೆಂದು ಮನವಿ ಮಾಡಿದ್ದೆವು. ಈ ಹಿನ್ನೆಲೆಯಲ್ಲಿ ಹೊಸದಾಗಿ ಬೋರ್‌ವೆಲ್ ಕೊರೆಸಲಾಯಿತು. ಇದಕ್ಕೆ ಪೈಪ್ ಬಿಡುವಾಗ ಕಲ್ಲು ಅಡ್ಡ ಬಂದಿದೆ. ನೀರು ಪೂರೈಕೆಯಾಗುತ್ತಿಲ್ಲ. ಈ ಬೋರ್‌ವೆಲ್ ಸರಿಪಡಿಸಿಕೊಡಬೇಕು. ನೀರಿನ ಅಭಾವದಿಂದಾಗಿ ಹಿಂದಿನಿಂದಲೂ ನಾವು ಹೊಳೆಯ ನೀರನ್ನೇ ಕುಡಿಯುತ್ತಿದ್ದೇವೆ. ಹೊಳೆ ಬತ್ತಿ ಹೋದಾಗಿನಿಂದ ಕುಡಿಯುವ ನೀರಿಗೆ ಸಮಸ್ಯೆ ಹೆಚ್ಚಾಗಿದೆ.ಮಹದೇವು, ಬೇಡಗುಳಿ ಗ್ರಾಮಸ್ಥ, ಚಾಮರಾಜನಗರ ಹೊಸ ಬೋರ್‌ವೆಲ್‌ಗೆ ಮೋಟಾರ್ ಹಾಕುವಾಗ ಕಲ್ಲು ಅಡ್ಡ ಬಂದಿದೆ. ಮತ್ತೆ ರೀ ಬೋರ್ ಮಾಡಿಸಬೇಕೆಂದರೆ ಬೋರ್‌ವೆಲ್ ಲಾರಿಯನ್ನೇ ತರಬೇಕು. ಬೇಡಗುಳಿಯ ಚಿಕ್ಕ ರಸ್ತೆಯಲ್ಲಿ ಲಾರಿ ಬರುವುದು ಸವಾಲಿನ ಕೆಲಸ. ಈ ಹಿನ್ನೆಲೆಯಲ್ಲಿ ಲಾರಿಯವರು ಬರುವುದಿಲ್ಲ ಎನ್ನುತ್ತಿದ್ದಾರೆ. ಚಿಕ್ಕ ಲಾರಿಯನ್ನಾದರೂ ಕಳುಹಿಸಿಕೊಡಿ ಎಂದು ಕೇಳುತ್ತಿದ್ದೇವೆ. ಅಲ್ಲಿಯವರೆಗೂ ಗ್ರಾಮಸ್ಥರಿಗೆ ವಸತಿ ಶಾಲೆಯಲ್ಲಿರುವ ಬೋರ್‌ವೆಲ್ ನೀರನ್ನೇ ಬಳಸಿಕೊಳ್ಳಲು ಅನುಕೂಲ ಮಾಡಿಕೊಟ್ಟಿದ್ದೇವೆ.ಜಗದೀಶ್, ಎಇಇ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಚಾಮರಾಜನಗರ