ಜಿಲ್ಲೆ

ಪ್ರಪಂಚಕ್ಕೆ ಜ್ಞಾನಮಾರ್ಗ ತೋರಿಸಿದ ಶಂಕರ

ಚಾಮರಾಜನಗರ: ಶ್ರೀಶಂಕರಾಚಾರ್ಯರು ಇಡೀ ಜಗತ್ತಿಗೆ ದರ್ಶನ ಮತ್ತು ಜ್ಞಾನದ ಮಾರ್ಗವನ್ನು ತೋರಿಸಿ ಮಾನವ ಜನ್ಮ ಸಾರ್ಥಕಗೊಳಿಸಿದರು ಎಂದು ಮೈಸೂರು ಸನ್ನದು ಲೆಕ್ಕಪರಿಶೋಧಕ ಎಸ್.ಅಚ್ಯುತ್ ಹೇಳಿದರು.

ನಗರದ ಅಗ್ರಹಾರಬೀದಿಯ ಪಟ್ಟಾಭಿರಾಮಮಂದಿರದಲ್ಲಿ ಪಟ್ಟಾಭಿರಾಮಮಂದಿರ ಟ್ರಸ್ಟ್, ಶ್ರೀ ಪಟ್ಟಾಭಿರಾಮ ಮಂದಿರ ಮತ್ತು ಶ್ರೀಶಂಕರ ತತ್ವ ಪ್ರಸಾರ ಅಭಿಯಾನ ವತಿಯಿಂದ ಶಂಕರಾಚಾರ್ಯ, ರಾಮಾನುಜಚಾರ್ಯ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

8ನೇ ಶತಮಾನದ ಕೊನೆಯ ಮಧ್ಯಭಾಗದಲ್ಲಿ ಕೇರಳದ ಕಾಲಡಿ ಗ್ರಾಮದಲ್ಲಿ ಜನಿಸಿದ ಆದಿಶಂಕರರು ಭಗವದ್ಗೀತೆ, ಉಪನಿಷತ್ತು, ಬ್ರಹ್ಮಸೂತ್ರಗಳಿಗೆ ಭಾಷ್ಯ ಬರೆದ ಮೊದಲಿಗರಾಗಿದ್ದರು. ಶಂಕರರಿಗೆ ಚಿಕ್ಕಂದಿನಲ್ಲೇ ಸನ್ಯಾಸದ ಕಡೆಗೆ ಒಲವಿತ್ತು. ಶಿವನ ಅವತಾರವೇ ಶಂಕರಚಾರ್ಯರು ಎಂದು ಬಣ್ಣಿಸಿದರು.

ಶಂಕರ ಜಯಂತಿ ಅಂಗವಾಗಿ ವೇದಪಾರಾಯಣ, ಭಜನೆ, ಸತ್ಸಂಗ ನೆರವೇರಿತು. ಜಯಂತಿ ಅಂಗವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಶಂಕರಾಚಾರ್ಯರ ಭಾವಚಿತ್ರದ ಹೂವಿನ ಪಲ್ಲಕ್ಕಿ ಮೆರವಣಿಗೆ ವಿಜೃಂಭಣೆಯಿಂದ ನೆರವೇರಿತು. ಮೆರವಣಿಗೆಯಲ್ಲಿ ಪಟ್ಟಾಭಿರಾಮ ಮಂದಿರ ಅಧ್ಯಕ್ಷ ಕೆ.ಬಾಲಸುಬ್ರಮಣ್ಯ, ನಾಗೇಂದ್ರ ಪ್ರಸಾದ್, ಎಸ್.ಲಕ್ಷ್ಮೀ ನರಸಿಂಹ, ಶಾಂತಲಾ ವಾಸುದೇವರಾವ್, ಪ್ರಕಾಶ್, ಮೈಸೂರು ರಮೇಶ್, ವಿಜಯ ಬುಕ್ ಡಿಪೋ ಮಾಲೀಕ ಮುರಳಿ, ಅರ್ಚಕರಾದ ಕಿರಣ್ ಭಾರದ್ವಾಜ್, ಕಾರ್ತಿಕ್ ಭಾರದ್ವಾಜ್, ಬಾಲಸುಬ್ರಹ್ಮಣ್ಯ, ಶ್ರೀಶಂಕರ ತತ್ವ ಪ್ರಸಾರ ಅಭಿಯಾನದ ಜಿಲ್ಲಾ ಸಂಚಾಲಕ ಕೆ.ಅಜಿತ್, ಶ್ರೀನಾಥ್, ಬ್ರಾಹ್ಮಿ ಮಹಿಳಾ ಸಂಘದವರು ಹಾಗೂ ಸಮುದಾಯದವರು ಭಾಗವಹಿಸಿದ್ದರು.