ಕೊಳ್ಳೇಗಾಲ: ಕೊಳ್ಳೇಗಾಲ, ಹನೂರು ಭಾಗದ ಗ್ರಾಮೀಣ ಪ್ರದೇಶಗಳಲ್ಲಿ ಸಮರ್ಪಕವಾಗಿ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ವ್ಯವಸ್ಥೆ ಇಲ್ಲದ ಪ್ರತಿಭಟನೆಗೆ ಮುಂದಾಗಿದ್ದ ರೈತ ಮುಖಂಡರ ಜತೆ ಸೋಮವಾರ ಉಪವಿಭಾಗಧಿಕಾರಿ ಶಿವಮೂರ್ತಿ ಸಭೆ ನಡೆಸಿ ಸಮಸ್ಯೆ ಆಲಿಸಿದರು.
ಪಟ್ಟಣದ ಉಪವಿಭಾಗಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕರೆದಿದ್ದ ಸಭೆಯಲ್ಲಿ ರೈತ ಸಂಘದ ಜಿಲ್ಲಾ ಕಾರ್ಯಧ್ಯಕ್ಷ ಶೈಲೇಂದ್ರ ಮಾತನಾಡಿ, ತಾಲೂಕಿನ ದೊಡ್ಡಿಂದುವಾಡಿ ಗ್ರಾಮದೊಳಗೆ ಕೆಎಸ್‌ಆರ್‌ಟಿಸಿ ಬಸ್ ಸಂಚರಿಸುತ್ತಿಲ್ಲ. ಬರುವ ಬಸ್‌ಗಳು ಮಲೆಮಹದೇಶ್ವರ ಬೆಟ್ಟದ ಮುಖ್ಯರಸ್ತೆಯಲ್ಲಿಯೇ ತೆರಳುತ್ತವೆೆ. ಇದರಿಂದ ದೊಡ್ಡಿಂದುವಾಡಿ ಗ್ರಾಮದ ಜನರು ಹಾಗೂ ಶಾಲಾ ಮಕ್ಕಳಿಗೆ ತೊಂದರೆ ಆಗಿದೆ ಎಂದು ತಿಳಿಸಿದರು.
ಹನೂರು-ರಾಮಪುರ ಮಾರ್ಗದ ಬದಲಿಗೆ ಎಲ್ಲೆಮಾಳ ಮಾರ್ಗವಾಗಿ ಬಸ್ ಸಂಚಾರ ಮಾಡುತ್ತಿವೆ. ಸತ್ತೇಗಾಲದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳು ನಿಲ್ಲಿಸುತ್ತಿಲ್ಲ. ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಪತ್ರ ಮೂಲಕ ಎಷ್ಟೇ ಮನವಿ ಮಾಡಿದರು ಪ್ರಯೋಜನವಾಗಿಲ್ಲ. ಆದ್ದರಿಂದ ಪ್ರತಿಭಟನೆ ಮಾಡಲು ರೈತ ಸಂಘ ಮುಂದಾಗಿದೆ. ಇನ್ನಾದರೂ ಜಿಲ್ಲಾಡಳಿತ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.
ಸಮಸ್ಯೆ ಆಲಿಸಿದ ಉಪವಿಭಾಗಾಧಿಕಾರಿ ಶಿವಮೂರ್ತಿ ಮಾತನಾಡಿ, ಸತ್ತೇಗಾಲ, ದೊಡ್ಡಿಂದುವಾಡಿ, ಅಜ್ಜೀಪುರ, ತೆಳ್ಳನೂರು, ಪಾಳ್ಯ, ಉಗನೀಯ ಹಾಗೂ ಇತರ ಗ್ರಾಮಗಳಿಗೆ ಸಮಯಕ್ಕೆ ಸರಿಯಾಗಿ ಬಸ್ ಬಾರದ ಕಾರಣ ಜನರಿಗೆ ಹಾಗೂ ವಿದ್ಯಾಭ್ಯಾಸಕ್ಕೆ ಪಟ್ಟಣಕ್ಕೆ ಬರುವ ಮಕ್ಕಳಿಗೆ ತೊಂದರೆಯಾಗುತ್ತಿರುವುದನ್ನು ಗಮನಕ್ಕೆ ತಂದಿದ್ದು, ಶೀಘ್ರವೇ ಕೆಎಸ್‌ಆರ್‌ಟಿಸಿ ಅಧಿಕಾರಿಗಳ ಜತೆ ಚರ್ಚಿಸಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿ, ಸಮಾಧಾನಪಡಿಸಿದರು.
ಜಿಲ್ಲಾ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಭಾಸ್ಕರ್, ಉಪಾಧ್ಯಕ್ಷ ಗೌಡೇಗೌಡ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಮಾದಮ್ಮ, ತಾಲೂಕು ಅಧ್ಯಕ್ಷ ಶಿವಮಲ್ಲು, ಪ್ರಧಾನ ಕಾರ್ಯದರ್ಶಿ ಪೆರಿಯಾನಾಯಗಂ, ಹನೂರು ರೈತ ಸಂಘ ಅಧ್ಯಕ್ಷ ಅಂಜಾದ್ ಖಾನ್, ವಸಂತ್ ದೊಡ್ಡಿಂದುವಾಡಿ, ವಾಸು, ಅಶೋಕ್, ಮಹದೇವ, ಜಯರಾಜು, ಶಿವಕುಮಾರ್, ರಾಮೇಗೌಡ, ಶಿವು, ಲೀಲಮ್ಮ, ಶಶಿಕಲಾ ಇದ್ದರು.