ಚಾಮರಾಜನಗರ: ಹಣ್ಣುಗಳ ರಾಜ ಮಾವು ತಡವಾಗಿಯಾದರೂ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಇಳುವರಿ ಕುಂಠಿತವಾಗಿರುವುದರಿಂದ ಬೇಡಿಕೆ ಹೆಚ್ಚಾಗಿದೆ. ಅದಾಗ್ಯೂ ವಿವಿಧ ಬಗೆಯ ಮಾವಿನ ಹಣ್ಣು ಖರೀದಿಸಲು ಗ್ರಾಹಕರು ಮುಂದಾಗಿದ್ದಾರೆ.
ಜಿಲ್ಲೆಯಲ್ಲಿ ಈ ಬಾರಿ ಸೂಕ್ತ ಸಮಯಕ್ಕೆ ಮಳೆಯಾಗದ ಪರಿಣಾಮವಾಗಿ ಮಾವಿನ ಹಣ್ಣು ಇಳುವರಿ ಕುಂಠಿತವಾಗಿದೆ. ಇದರಿಂದಾಗಿ ಫೆಬ್ರವರಿ ತಿಂಗಳಲ್ಲಿ ಮಾರುಕಟ್ಟೆಗೆ ಬರಬೇಕಿದ್ದ ಮಾವು ತಡವಾಗಿ ಬಂದಿದೆ. ಏಪ್ರಿಲ್ ಕೊನೆಯ ವಾರದಲ್ಲಿ ಮಾವಿನ ಹಣ್ಣು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಜನರನ್ನು ಆಕರ್ಷಿಸುತ್ತಿದೆ. ಪ್ರಮುಖವಾಗಿ ಬಾದಾಮಿ, ರಸಪುರಿ, ತೋತಾಪುರಿ, ಸಿಂಧೂರ ಹಾಗೂ ನಾನಾ ತಳಿಯ ಮಾವಿನ ಹಣ್ಣುಗಳು ಮಾರುಕಟ್ಟೆ ಪ್ರವೇಶಿಸಿದೆ. ಆದರೆ ಮಾವಿನ ಋತು ಮುಗಿಯುವ ಸಮಯದಲ್ಲಿ ಹಣ್ಣುಗಳು ಮಾರುಕಟ್ಟೆಗೆ ಬಂದಿರುವುದರಿಂದ ಮತ್ತು ಇಳುವರಿ ಕುಂಠಿತವಾಗಿರುವುದರಿಂದ ಬೇಡಿಕೆಯಷ್ಟು ಹಣ್ಣುಗಳು ದೊರೆಯುತ್ತಿಲ್ಲ. ಇದರಿಂದ ಮಾವಿನ ಹಣ್ಣುಗಳ ಬೆಲೆಯಲ್ಲೂ ಭಾರಿ ಪ್ರಮಾಣದ ಏರಿಕೆ ಕಂಡಿದೆ. ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಟ್ಟಿದರೂ ಮಾವಿನ ಹಣ್ಣುಗಳನ್ನು ಖರೀದಿಸಲು ಮುಂದಾಗುತ್ತಿದ್ದಾರೆ. ಮುಂದಿನ ವಾರಗಳಲ್ಲಿ ಮತ್ತಷ್ಟು ಮಾವಿನ ತಳಿಗಳು ಮಾರುಕಟ್ಟೆಗೆ ಲಗ್ಗೆ ಇಡಲಿದ್ದು, ಮಾವಿನ ಹಣ್ಣಿನ ಬೇಡಿಕೆ ಮತ್ತಷ್ಟು ಹೆಚ್ಚಲಿದೆ ಎಂದು ಮಾವು ಮಾರಾಟಗಾರರು ವಿಜಯವಾಣಿಗೆ ಮಾಹಿತಿ ನೀಡಿದರು.
ಮಾವಿನ ಬೆಲೆಯಲ್ಲಿ ಏರಿಕೆ:
ಪ್ರತಿವರ್ಷದ ಎರಡನೇ ತಿಂಗಳಿನಲ್ಲಿ ಮಾರುಕಟ್ಟೆ ಪ್ರವೇಶ ಮಾಡುತ್ತಿದ್ದ ಮಾವು ಆರನೇ ತಿಂಗಳಿನಲ್ಲಿ ಮುಕ್ತಾಯವಾಗಬೇಕಿತ್ತು. ಆದರೆ ಸೂಕ್ತ ಸಮಯಕ್ಕೆ ಮಳೆಯಾಗದ ಕಾರಣಕ್ಕೆ ಮಾವು ಮಾರುಕಟ್ಟೆಗೆ ಬರುವುದು ತಡವಾಗಿದೆ. ಇದರಿಂದಾಗಿ ಬೆಲೆಯಲ್ಲಿ ಏರಿಕೆ ಕಂಡಿದ್ದು, 1 ಕೆ.ಜಿ ರಸಪೂರಿ ಮಾವಿನ ಹಣ್ಣಿಗೆ 160 ರೂ., ಬಾದಾಮಿ 200 ರೂ., ಗಿಣಿ ಮಾವು ಅಥವಾ ತೋತಾಪುರಿ 100 ರೂ.,
ಸಿಂಧೂರ 60 ರೂ. ಗೆ ಮಾರಾಟ ಮಾಡಲಾಗುತ್ತಿದೆ. ಈಗ ಇರುವ ಬೇಡಿಕೆಯಷ್ಟು ಮಾವು ಮಾರುಕಟ್ಟೆಯಲ್ಲಿ ದೊರೆಯದ ಪರಿಣಾಮವಾಗಿ ಹರ್ಣನುಗಳ ದೊರೆಯುತ್ತಿಲ್ಲ. ಈಗ ಇರುವ ಮಾವು 15-20 ದಿನಗಳಲ್ಲಿ ಖಾಲಿಯಾಗಲಿದೆ. ಈ ಕಾರಣಕ್ಕೆ ಹೆಚ್ಚಿನ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಬೆಲೆ ಏರಿಕೆಯ ನಡುವೆಯೂ ಗ್ರಾಹಕರು ಮಾವಿನ ಹಣ್ಣು ಖರೀದಿಸಲು ಮುಂದಾಗುತ್ತಿದ್ದಾರೆ. ಸಾಧ್ಯವಾದರೇ ಇನ್ನು ತಿಂಗಳಷ್ಟು ಮಾತ್ರ ಮಾವಿನ ಹಣ್ಣು ದೊರೆಯಬಹುದು ಎಂದು ಮಾವಿನ ಹಣ್ಣಿನ ವ್ಯಾಪಾರಿ ಚೆನ್ನಿಗ ವಿಜಯವಾಣಿಗೆ ಮಾಹಿತಿ ನೀಡಿದರು.
ಇಳುವರಿ ಕುಂಠಿತ:
ಈ ಬಾರಿ ಸೂಕ್ತ ರೀತಿಯಲ್ಲಿ ಮಳೆಯಾಗದ ಪರಿಣಾಮವಾಗಿ ಮಾವಿನ ಹಣ್ಣಿನ ಇಳುವರಿ ಸಾಕಷ್ಟು ಕುಂಠಿತಗೊಂಡಿದೆ. ಚಳಿಗಾಲದ ಸಮಯದಲ್ಲಿ ಮಾವಿನ ಹೂವುಗಳಿಗೆ ಹಾಗೂ ಮೊಗ್ಗುಗಳಿಗೆ ಇಬ್ಬನಿ ಬೀಳುವುದು, ಮಣ್ಣಿನ ತೇವಾಂಶ ಕೊರತೆ ಮತ್ತು ಅನೇಕ ರೋಗಗಳು ಬಂದ ಪರಿಣಾಮವಾಗಿಯೂ ಇಳುವರಿ ಕುಂಠಿತವಾಗಿದೆ. ಜಿಲ್ಲೆಯಲ್ಲಿ ಹೆಚ್ಚಿನ ಬಿಸಿಲಿನ ತಾಪಮಾನ ಇದ್ದ ಕಾರಣದಿಂದಲೂ ಹಣ್ಣುಗಳು ಚಿಕ್ಕದಾಗಿದ್ದಾಗಲೇ ಸಾಕಷ್ಟು ಕಡೆಗಳಲ್ಲಿ ಉದುರಿಹೋಗಿದೆ. ಇದರಿಂದಾಗಿ ಹೆಚ್ಚು ಹಣ್ಣುಗಳು ಬಂದಿಲ್ಲ. ಬೇರೆ ಕಡೆಯಿಂದ ಮಾವಿನ ಹಣ್ಣುಗಳನ್ನು ತರಿಸಿಕೊಂಡು ಮಾರಾಟ ಮಾಡುತ್ತಿದ್ದರೂ, ಬೇಡಿಕೆಯಷ್ಟು ಹಣ್ಣು ದೊರೆಯುತ್ತಿಲ್ಲ. ವಾರದಿಂದ ಹೆಚ್ಚಿನ ಪ್ರಮಾಣದಲ್ಲಿ ಮಳೆಯೂ ಆಗುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಕೂಯ್ಲು ಮಾಡಬೇಕಿದ್ದ ಮಾವಿನ ಹಣ್ಣಿಗೂ ಹೊಡೆತ ಬಿದ್ದಂತಾಗಿದೆ.
ಹೆಚ್ಚಿದ ಬೇಡಿಕೆ:
ಜಿಲ್ಲೆಯಲ್ಲಿ ತಡವಾಗಿ ಮಾರುಕಟ್ಟೆ ಪ್ರವೇಶಿಸಿರುವ ವಿವಿಧ ಬಗೆಯ ಮಾವಿನ ಹಣ್ಣುಗಳಿಗೆ ದಿನೇದಿನೇ ಬೇಡಿಕೆ ಹೆಚ್ಚಾಗುತ್ತಿದೆ. ಮಾವಿನ ಹಣ್ಣಿನ ಬೆಲೆಯಲ್ಲಿ ಏರಿಕೆ ಕಂಡಿದ್ದರೂ ಗ್ರಾಹಕರು ಅದನ್ನು ಲೆಕ್ಕಿಸದೇ ಹಣ್ಣಗಳನ್ನು ಖರೀದಿಸಿ ಮಾವಿನ ರುಚಿ ಸವಿಯುತ್ತಿದ್ದಾರೆ. ನಗರದ ಪ್ರಮುಖ ರಸ್ತೆಗಳಲ್ಲಿ ತಳ್ಳು ಗಾಡಿಗಳಲ್ಲಿ ಇಟ್ಟುಕೊಂಡು ವ್ಯಾಪಾರ ಮಾಡುವವರು ಹೆಚ್ಚಾಗಿ ಕಂಡು ಬರುತ್ತಿದ್ದಾರೆ. ಸಂಜೆಯ ಸಮಯದಲ್ಲಿ ಮಾವಿನ ಹಣ್ಣುಗಳು ಉತ್ತಮವಾಗಿ ವ್ಯಾಪಾರವಾಗುತ್ತಿದೆ. ಗ್ರಾಮೀಣ ಭಾಗದಿಂದಲೂ ಮಾವಿನ ಹಣ್ಣು ಖರೀದಿಸಲು ಜನರು ಬರುತ್ತಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಮಾವಿನ ಹಣ್ಣು ಮುಕ್ತಾಯವಾಗಬಹುದು ಎಂದು ಮಾರಾಟಗಾರ ಅಭಿಪ್ರಾಯವಾಗಿದೆ.
ಈ ಬಾರಿ ಮಾರುಕಟ್ಟೆಗೆ ತಡವಾಗಿ ಮಾವಿನಹಣ್ಣು ಲಗ್ಗೆ ಇಟ್ಟಿರುವುದರಿಂದ ಬೇಡಿಕೆ ಹೆಚ್ಚಾಗಿದೆ. ಆದರೆ ಹಣ್ಣುಗಳು ಮಾರಾಟಮಾಡಲು ಸಿಗುತ್ತಿಲ್ಲ. ಇದರಿಂದಾಗಿ ಬೆಲೆಯೂ ಹೆಚ್ಚಾಗಿದೆ. ಗ್ರಾಹಕರು ಹೆಚ್ಚಿನ ರೀತಿಯಲ್ಲಿ ಭೇಟಿ ನೀಡಿ ಹಣ್ಣುಗಳನ್ನು ಖರೀದಿ ಮಾಡುತ್ತಿದ್ದಾರೆ.ಚೆನ್ನಿಗ, ಮಾವಿನ ಹಣ್ಣಿನ ವ್ಯಾಪಾರಿ, ಚಾಮರಾಜನಗರ ತಳ್ಳುಗಾಡಿಗಳಲ್ಲಿ ಜೋಡಿಸಿರುವ ವಿವಿಧ ತಳಿಯ ಮಾವಿನ ಹಣ್ಣುಗಳನ್ನು ನೋಡಿದರೆ ಯಾರಿಗೆ ತಾನೇ ಮಾವಿನ ಹಣ್ಣಿನ ರುಚಿ ಸವಿಯಬೇಕು ಎನಿಸುವುದಿಲ್ಲ. ವರ್ಷಕ್ಕೆ ಒಂದು ಬಾರಿ ಸಿಗುವ ಮಾವಿನ ಹಣ್ಣಿಗೆ ಈ ಬಾರಿ ಬೆಲೆ ಏರಿಕೆಯಾಗಿದ್ದರು, ಹಣ್ಣನ್ನು ಖರೀದಿ ಮಾಡಿದ್ದೇನೆ. ಈ ವರ್ಷ ಮಾವಿನ ಋತುವಿಗೆ ಸರಿಯಾಗಿ ಮಾರುಕಟ್ಟೆಗೆ ಮಾವು ಬಂದಿಲ್ಲ.ನಾಗರಾಜು, ಗ್ರಾಹಕ, ಚಾಮರಾಜನಗರ