ಜಿಲ್ಲೆ

ಕನ್ನಡ ಉಳಿವಿಗಾಗಿ ತಂತ್ರಜ್ಞಾನ ಬಳಕೆ ಮುಖ್ಯ

ಕಿರಣ್ ಮಾದರಹಳ್ಳಿ

ಚಾಮರಾಜನಗರ: ತಂತ್ರಜ್ಞಾನದ ಈ ಯುಗದಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿ, ಪರಂಪರೆಯ ಉಳಿವಿಗಾಗಿ ಕನ್ನಡದ ಬಗೆಗಿನ ಹೊಸ ಹೊಸ ತಂತ್ರಾಂಶಗಳ ಅಭಿವೃದ್ಧಿ ಬಹಳ ಮುಖ್ಯ ಎಂದು ಚಾಮರಾಜನಗರ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ.ಆರ್.ಗಂಗಾಧರ್ ಅಭಿಪ್ರಾಯಪಟ್ಟರು.

ಚಾಮರಾಜನಗರ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ವತಿಯಿಂದ ಗುರುವಾರ ಆಯೋಜಿಸಿದ್ದ ‘ಕನ್ನಡ ಕಾವ್ಯ, ಛಂದಸ್ಸು, ವ್ಯಾಕರಣ ಮತ್ತು ತಂತ್ರಾಂಶ’ ಎಂಬ ವಿಷಯವನ್ನು ಕುರಿತು ಒಂದು ದಿನದ ಆನ್‌ಲೈನ್ ವೆಬಿನಾರ್ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕನ್ನಡ ಭಾಷೆಯ ಉಳಿವಿಗಾಗಿ ಕರ್ನಾಟಕ ಸರ್ಕಾರ ಈಗಾಗಲೇ ಕನ್ನಡ ಸಂಸ್ಕೃತಿ ಇಲಾಖೆ, ಕನ್ನಡ ಭಾಷಾ ಅಭಿವೃದ್ದಿ ಪ್ರಾಧಿಕಾರ, ಕನ್ನಡ ಪುಸ್ತಕ ಪ್ರಾಧಿಕಾರಗಳಂತಹ ಇಲಾಖೆಗಳ ಮೂಲಕ ಶ್ರಮಿಸುತ್ತಿದೆ. ಕನ್ನಡ ಭಾಷೆಯನ್ನು ಗಣಕೀಕರಣದ ಮೂಲಕ ಜಾಗತೀಕ ಮಟ್ಟದಲ್ಲಿ ಉಳಿಸಿ ಬೆಳೆಸಲು ಕನ್ನಡ ಗಣಕ ಪರಿಷತ್ತನ್ನು ಸ್ಥಾಪಿಸಿ ನುಡಿ, ಬರಹ ಸೇರಿದಂತೆ ಹಲವಾರು ತಂತ್ರಾಂಶಗಳನ್ನು ಅಭಿವೃದ್ಧಿಪಡಿಸಿದೆ. ಇಂತಹ ತಂತ್ರಾಂಶಗಳನ್ನು ಜನರು ಹೆಚ್ಚಿನ ಮಟ್ಟದಲ್ಲಿ ಬಳಸಬೇಕು ಎಂದು ಕರೆ ಕೊಟ್ಟರು.

ವೆಬಿನಾರ್‌ನಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ವಿಚಾರ ಮಂಡಿಸಿದ ಜರ್ಮನ್‌ನ ಮ್ಯೂನಿಕ್‌ನ ವೈಮಾನಿಕ ತಂತ್ರಜ್ಞ ರಾಘವೇಂದ್ರ ಪ್ರಸಾದ್, ಕನ್ನಡ ಭಾಷೆಯು ಉಳಿಯಬೇಕಾದರೆ ಇಂಗ್ಲೀಷ್ ಹಾಗೂ ಇತರ ಭಾಷೆಗಳೊಡನೆ ಯಂತ್ರಜ್ಞಾನ ಮತ್ತು ತಂತ್ರಜ್ಞಾನಗಳನ್ನು ಸಮರ್ಪಕವಾಗಿ ಬಳಸಿಕೊಂಡು ತನ್ನದೇ ಸ್ವಂತ ತಂತ್ರಾಂಶಗಳನ್ನು ಅಭಿವೃದ್ಧಿಪಡಿಸಿಕೊಂಡು ಬಳಸಬೇಕಾಗುತ್ತದೆ ಎಂದು ಹೇಳಿದರು.

ಹಾಗಾಗಿ ಜಾಗತಿಕ ಮಟ್ಟದಲ್ಲಿ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಕವನ ಮತ್ತು ವ್ಯಾಕರಣ ಎಂಬ ಎರಡು ತಂತ್ರಾಂಶಗಳನ್ನು ಅಭಿವೃದ್ದಿಪಡಿಸಲಾಗಿದೆ. ಇವು ಕನ್ನಡ ಸಾಹಿತ್ಯದಲ್ಲಿನ ಯಾವುದೇ ಪದ್ಯವನ್ನು ಗಣಕೀರಣಕ್ಕೆ ಒಳಪಡಿಸಿದರೆ ಅದು ಸ್ವಯಂಚಾಲಿತವಾಗಿ ಕನ್ನಡ ಛಂದಸ್ಸಿನ ಯಾವುದೇ ಜಾತಿಯನ್ನು ನಿರ್ದಿಷ್ಟ ಹಾಗೂ ನಿಖರವಾಗಿ ಗುರುತಿಸಿ ಪ್ರಸ್ತಾರಗಳನ್ನು ಹಾಕಿ ವಿಶ್ಲೇಷಣೆ ಮಾಡಬಹುದು. ಗುರುತಿಸಿದ ಪದ್ಯವನ್ನು ಹಿಂದೂಸ್ಥಾನಿ ಹಾಗೂ ಕರ್ನಾಟಕ ಸಂಗೀತದ ಯಾವುದೇ ತಾಳ ಮತ್ತು ರಾಗಕ್ಕೆ ಹೊಂದಿಕೆಯಾಗುವಂತೆ ಸಂಯೋಜನೆ ಮಾಡಬಲ್ಲ ಸಾಮರ್ಥ್ಯವನ್ನು ಹೊಂದಿದೆ. ಈ ತಂತ್ರಾಂಶಗಳನ್ನು ಕವಿಗಳು ಮತ್ತು ಓದುಗರು ಪದ್ಯ ವಿಶ್ಲೇಷಣಾಕಾರರು ಉಚಿತವಾಗಿ ಬಳಸಬಹುದಾಗಿದೆ ಎಂದು ವಿವರಿಸಿದರು.

ಸಂದರ್ಶಕ ಪ್ರಾಧ್ಯಾಪಕ ಪ್ರೊ.ಕೃಷ್ಣಮೂರ್ತಿ ಹನೂರು ಮಾತನಾಡಿ, ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವುದಕ್ಕಾಗಿ ಹಳಗನ್ನಡದ ಪಂಪನಿಂದ ಹಿಡಿದು ಇವತ್ತಿನ ಯುವ ಕವಿಗಳ ಕೃತಿಗಳನ್ನು ಒಂದೇ ಒಂದು ತಂತ್ರಾಂಶದಲ್ಲಿ ಹಿಡಿದಿಡುವ ಕೆಲಸವಾಗಬೇಕಿದೆ. ಕನ್ನಡ ಕಾವ್ಯ, ಛಂದಸ್ಸು ಮತ್ತು ವ್ಯಾಕರಣಕ್ಕೆ ಸಂಬಂಧಿಸಿದ ತಂತ್ರಾಂಶವನ್ನು ಅಭಿವೃದ್ಧಿಪಡಿಸಿರುವುದು ಕನ್ನಡ ಛಂದಸ್ಸಿನ ವಿಶ್ಲೇಷಣೆಯ ಕ್ಲಿಷ್ಟದ ಕೆಲಸವನ್ನು ಸರಳೀಕಿರಿಸಿದೆ ಆ ಕೆಲಸವನ್ನು ರಾಘವೇಂದ್ರ ಪ್ರಸಾದ್ ಯಶಸ್ವಿಯಾಗಿ ಮಾಡಿದ್ದಾರೆ ಎಂದರು.

ವೆಬಿನಾರ್‌ನಲ್ಲಿ ಕನ್ನಡ ವಿಭಾಗದ ಮುಖ್ಯಸ್ಥ ಬಸವಣ್ಣ ಎಸ್. ಮೂಕಹಳ್ಳಿ, ಉಪನ್ಯಾಸಕರಾದ ಡಾ. ಮಹೇಶ್ ಬಾಬು, ಗುರುರಾಜು ಯರಗನಹಳ್ಳಿ, ಪಿ.ರಾಣಿ, ಡಾ ಶಶಿಕಲಾ, ಜಾನಪದ ವಿಭಾಗದ ಮುಖ್ಯಸ್ಥ ಡಾ.ಶಿವರಾಜು ಬೂದಿತಿಟ್ಟು, ಡಾ.ಆರ್.ಮಹೇಶ್ ಕೋಡಿಉಗನೆ, ಡಾ.ಜಗದೀಶ್ ಮತ್ತು ಇತರರು ಭಾಗವಹಿಸಿದ್ದರು.