ಜಿಲ್ಲೆ

ಬಿಎಸ್ಪಿಯಲ್ಲಿ ತತ್ವ, ಸಿದ್ಧಾಂತಗಳು ಮಾಯ

ಎ.ಎಸ್.ಮಣಿಕಂಠ

ಚಾಮರಾಜನಗರ: ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಬಹುಜನ ಸಮಾಜ ಪಕ್ಷವು ಹಣ ಮಾಡುವ ಉದ್ದೇಶದಿಂದ ಅಭ್ಯರ್ಥಿಯನ್ನು ನಿಲ್ಲಿಸಿದ್ದು, ಪಕ್ಷದ ತತ್ವ-ಸಿದ್ಧಾಂತಗಳು ಮಾಯವಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕಮಲ್ ನಾಗರಾಜ್ ಆರೋಪಿಸಿದರು.

ಬಿಎಸ್ಪಿಯಲ್ಲಿ ಈ ಹಿಂದೆ ರಾಜ್ಯ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದೇನೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೊಳ್ಳೇಗಾಲ ಕ್ಷೇತ್ರದಿಂದ ಸ್ಪರ್ಧಿಸಿದ್ದೆ. ಆದರೆ ಪಕ್ಷದ ನಿರ್ದೇಶನದಂತೆ ನಾಮಪತ್ರ ವಾಪಸ್ ತೆಗೆದುಕೊಂಡಿದ್ದೆ. ಎನ್.ಮಹೇಶ್ ಅವರನ್ನು ಸೋಲಿಸುವ ದುರುದ್ದೇಶದಿಂದ ಬಿಎಸ್ಪಿ ಮುಖಂಡರಾದ ಎಂ.ಕೃಷ್ಣಮೂರ್ತಿ, ಮುನಿಯಪ್ಪ, ಅಶೋಕ್ ಸಿದ್ಧಾರ್ಥ, ಗೋಪಿನಾಥ್ ಅವರು ನಾಮಪತ್ರ ವಾಪಸ್ ತೆಗೆಸಿದ್ದರು. ಇತ್ತೀಚಿನ ಪಕ್ಷದ ತೀರ್ಮಾನಗಳಿಂದ ಬೇಸತ್ತು 5 ದಿನಗಳ ಹಿಂದೆ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪಕ್ಷಸ ರಾಜ್ಯಾಧ್ಯಕ್ಷ ಮುನಿಯಪ್ಪ ಅವರು ಕಮಲ್ ನಾಗರಾಜ್ ಅವರಿಗೆ ಯಾವುದೇ ಸ್ಥಾನಮಾನ ನೀಡಬೇಡಿ ಎಂದು ಸೂಚಿಸಿದ್ದಾರೆ. ಪ್ರಾರಂಭದಲ್ಲಿ ಇದ್ದಂತೆ ಪಕ್ಷ ಈಗ ಇಲ್ಲ. ಅಂಬೇಡ್ಕರ್, ಕಾನ್ಶಿರಾಂ ಹಾಗೂ ಅನೇಕ ಪೂರ್ವಿಕರ ಸಿದ್ಧಾಂತಗಳು ಪಕ್ಷದಲ್ಲಿ ಇಲ್ಲದಂತಾಗಿದೆ ಎಂದರು.

ಪ್ರಸ್ತುತ ರಾಜ್ಯ ಸಮಿತಿಯಲ್ಲಿ ಇರುವವರು ಪಕ್ಷವನ್ನು ಅಧೋಗತಿಗೆ ತಳ್ಳುವ ಕೆಲಸ ಮಾಡುತ್ತಿದ್ದಾರೆ. ಚಾಮರಾಜನಗರ ಲೋಕಸಭಾ ಮೀಸಲು ಕ್ಷೇತ್ರದಿಂದ ನನಗೆ ಟಿಕೆಟ್ ನೀಡಬಹುದಿತ್ತು. ಆದರೆ ಹೊರಗಿನಿಂದ ಬಂದ ರಾಜ್ಯ ಸಂಯೋಜಕ ಕೃಷ್ಣಮೂರ್ತಿ ಅವರಿಗೆ ಟಿಕೆಟ್ ನೀಡಲಾಗಿದೆ. ಬಿಎಸ್‌ಪಿಗೆ ರಾಜೀನಾಮೆ ನೀಡಿದ ಮೇಲೆ ಬಿಜೆಪಿ, ಕಾಂಗ್ರೆಸ್ ಪಕ್ಷಗಳಿಗೆ ಹೋಗದೆ ನಾನು ತಟಸ್ಥನಾಗಿ ಉಳಿದಿದ್ದೇನೆ ಎಂದರು.

ಎಸ್ಸಿ/ಎಸ್ಟಿ ಉದ್ದಿಮೆದಾರರ ಸಂಘದ ಜಿಲ್ಲಾಧ್ಯಕ್ಷ ಶಿವಮೂರ್ತಿನಾಯಕ, ದಲಿತ ಅಭಿವೃದ್ಧಿ ಸಂಘದ ಅಧ್ಯಕ್ಷ ಎಸ್.ಲಿಂಗಣ್ಣ, ಚೇತನ್‌ಕುಮಾರ್, ದುಂಡಮಾದನಾಯಕ, ಸಿದ್ದರಾಜು, ಪುಟ್ಟಸ್ವಾಮಿನಾಯಕ ಹಾಜರಿದ್ದರು.