ಜಿಲ್ಲೆ

ಗ್ರಾಮೀಣ ನೃತ್ಯ ಪ್ರತಿಭೆಗಳಿಗೆ ಎಬಿಸಿಡಿ ವೇದಿಕೆ

ಎ.ಎಸ್.ಮಣಿಕಂಠ

ಕೊಳ್ಳೇಗಾಲ: ಭಾರತದಲ್ಲಿ ನೃತ್ಯಕ್ಕೆ ವಿಶೇಷ ಸ್ಥಾನ, ಗೌರವವಿದೆ. ಈ ಕಲೆಯಲ್ಲಿ ನೈಪುಣ್ಯ ಸಾಧಿಸಿ ಸಾರ್ಥಕ ಬದುಕು ಕಟ್ಟಿಕೊಂಡವರು ಸಾಕಷ್ಟಿದ್ದಾರೆ. ಇಂತಹ ಸಾಧಕರನ್ನು ಗ್ರಾಮೀಣ ಭಾಗದಲ್ಲೂ ಹುಟ್ಟು ಹಾಕಲು ಕೊಳ್ಳೇಗಾಲದ ಎಬಿಸಿಡಿ ಡಾನ್ಸ್ ಕ್ಲಾಸ್ ಎಂಬ ವೇದಿಕೆ ಮುಂದಾಗಿದೆ.2017ರಲ್ಲಿ ಡಾನ್ಸ್ ಮಾಸ್ಟರ್ ಶೃಂಗಾರ್ ನೇತೃತ್ವದಲ್ಲಿ ಕೊಳ್ಳೇಗಾಲದಲ್ಲಿ ಎಬಿಸಿಡಿ ಡಾನ್ಸ್ ಕ್ಲಾಸ್ ಕೊಳ್ಳೇಗಾಲ ಎಂಬ ಹೆಸರಲ್ಲಿ ಕಲಾ ಸೇವೆ ಆರಂಭಗೊಂಡಿದೆ.

ಆರ್.ಶೃಂಗಾರ್ ಬಿಕಾಂ ಪದವೀಧರ. ಡಾನ್ಸ್ ಮೇಲಿದ್ದ ಆಸಕ್ತಿಯಿಂದ ಈ ಕ್ಷೇತ್ರದಲ್ಲಿಯೇ ಸಾಧನೆ ಮಾಡಲು ಹೊರಟಿದ್ದಾರೆ. ಇವರಿಗೆ ರಿಯಾಲಿಟಿ ಶೋಗಳಲ್ಲಿ ಹಿನ್ನೆಲೆ ನೃತ್ಯಪಟುವಾಗಿ ಕಾರ್ಯನಿರ್ವಹಿಸಿದ ಅಪಾರ ಅನುಭವವಿದೆ. ಡಿಕೆಡಿ, ಪುಟಾಣಿ ಪಂಟ್ರು, ಡಿ ಜೋಡಿ ಹಾಗೂ ಡಾನ್ಸ್ ಡಾನ್ಸ್ ರಿಯಾಲಿಟಿ ಶೋಗಳಿಗೆ ಸಹಾಯಕ ನೃತ್ಯ ಸಂಯೋಜಕರಾಗಿ ಕೆಲಸ ಮಾಡಿದ್ದಾರೆ. ಪ್ರಸ್ತುತ ಕೊಳ್ಳೇಗಾಲದ ವಿಸ್ಡಮ್ ಶಾಲೆಯಲ್ಲಿ ಡಾನ್ಸ್ ಮಾಸ್ಟರ್ ಆಗಿದ್ದಾರೆ. ಹಾಗೆಯೇ ಎಬಿಸಿಡಿ ಡಾನ್ಸ್ ಕ್ಲಾಸ್ ನಡೆಸುತ್ತ ನೃತ್ಯ ಕ್ಷೇತ್ರದಲ್ಲಿ ಹೊಸ ಪ್ರತಿಭೆಗಳನ್ನು ಹುಟ್ಟು ಹಾಕುತ್ತಿದ್ದಾರೆ.

ನೃತ್ಯ ದೇವರಂತೆ: ಬಿಕಾಂ ಓದಿರುವ ಆರ್.ಶೃಂಗಾರ್ ಓದಿಗೆ ತಕ್ಕಂತ ಉದ್ಯೋಗ ಪಡೆದು ನಿರ್ದಿಷ್ಟ ಬದುಕು ನಡೆಸುವ ಬದಲು ವಿಶಾಲ ಪ್ರಪಂಚದತ್ತ ಮುಖ ಮಾಡಿದ್ದಾರೆ. 10 ವರ್ಷಗಳಿಂದ ನೃತ್ಯದ ನಂಟು ಹೊಂದಿರುವ ಇವರು ಈ ಕ್ಷೇತ್ರದಲ್ಲೇ ಏನಾದರೂ ಸಾಧನೆ ಮಾಡಬೇಕೆಂಬ ಹಂಬಲದಲ್ಲಿದ್ದಾರೆ. ಕಲಾ ಸರಸ್ವತಿ ಒಲಿಯಲು ಕಠಿಣ ಶ್ರಮ ಹಾಗೂ ಶ್ರದ್ಧೆ ಅಡಿಪಾಯ ಆಗಿರುತ್ತದೆ. ಈ ಹಿನ್ನೆಲೆ ನೃತ್ಯವನ್ನು ದೇವರೆಂದು ಆರಾಧಿಸುತ್ತ ಡಾನ್ಸ್‌ಕ್ಲಾಸ್ ನಡೆಸುತ್ತ ನೂರಾರು ಪ್ರತಿಭೆಗಳನ್ನು ಹೊರತರುತ್ತಿದ್ದಾರೆ.ವಿವಿಧೆಡೆ ಪ್ರದರ್ಶನ: ಜಿಲ್ಲೆಯಲ್ಲಿರುವ ಹೆಸರು ಮಾಡಿರುವ ಡಾನ್ಸ್ ಕ್ಲಾಸ್‌ಗಳಲ್ಲಿ ಎಬಿಸಿಡಿ ಒಂದಾಗಿದೆ. ಆರ್.ಶೃಂಗಾರ್ ವರ್ಷಕ್ಕೆ ಜಿಲ್ಲೆಯಲ್ಲಿ 16 ರಿಂದ 17 ಶಾಲೆಗಳ ವಾರ್ಷಿಕೋತ್ಸವ ಕಾರ್ಯಕ್ರಮಗಳಲ್ಲಿ ನೃತ್ಯ ಸಂಯೋಜನೆ ಮಾಡುತ್ತಾರೆ. ಇವರಿಂದ ಕಲಿತ ನೃತ್ಯ ಪಟುಗಳು ಬೆಂಗಳೂರು, ಮಂಗಳೂರು, ಮೈಸೂರು ದಸರಾ, ಸ್ವಾತಂತ್ರ್ಯ ದಿನಾಚರಣೆ, ಕನ್ನಡ ರಾಜ್ಯೋತ್ಸವ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳಲ್ಲಿ ಪ್ರದರ್ಶನ ನೀಡಿ ಹೆಸರು ಗಳಿಸಿದ್ದಾರೆ.

ವಿವಿಧ ಪ್ರಕಾರಗಳ ತರಬೇತಿ: ಎಬಿಸಿಡಿ ಡಾನ್ಸ್ ಕ್ಲಾಸ್ ಕೊಳ್ಳೇಗಾಲದ ಭಾಗದಲ್ಲಿ ಸಕ್ಸಸ್ ಫುಲ್ ಜರ್ನಿ ನಡೆಸುತ್ತಿದೆ. 3 ವರ್ಷ ಮೇಲ್ಪಟ್ಟ ಮಕ್ಕಳಿಂದ 25 ವರ್ಷದ ಯುವಕ-ಯುವತಿಯರು ಡಾನ್ಸ್ ಕಲಿಯುತ್ತಿದ್ದಾರೆ. ಪ್ರಸ್ತುತ 120ಕ್ಕೂ ಹೆಚ್ಚು ವಿದ್ಯಾರ್ಥಿಗಳು ಡಾನ್ಸ್ ಕಲಿಯುತ್ತಿದ್ದಾರೆ. ಕಳೆದ 7 ವರ್ಷದಲ್ಲಿ 800 ರಿಂದ 900 ವಿದ್ಯಾರ್ಥಿಗಳು ನೃತ್ಯ ತರಬೇತಿ ಪಡೆದಿದ್ದಾರೆ. ಬೇಸಿಕ್, ಬಾಲಿವುಡ್ ಸ್ಟೈಲ್, ಫಿಲ್ಮಿ ಸ್ಟೈಲ್, ವೆಸ್ಟ್ರನ್, ಸೆಮಿಕ್ಲಾಸಿಕಲ್, ಹಿಪ್‌ಪಾಪ್ ಇನ್ನಿತರ ಡಾನ್ಸ್‌ಗಳ ತರಬೇತಿ ನೀಡಲಾಗುತ್ತಿದೆ. ಮಾಸ್ಟರ್ ಶೃಂಗಾರ್ ಅವರಿಗೆ ಶಿಷ್ಯರಾದ ಪ್ರೇಮ್, ಮಧು, ಚಂದು ಸಾಥ್ ನೀಡುತ್ತಿದ್ದಾರೆ.

ವಾರ್ಷಿಕೋತ್ಸವ ಸಮಾರಂಭ: ಎಬಿಸಿಡಿ ಡಾನ್ಸ್ ಕ್ಲಾಸ್‌ಕೊಳ್ಳೇಗಾಲದ ಎಂಜಿಎಸ್‌ವಿ ಜೂನಿಯರ್ ಕಾಲೇಜು ಮೈದಾನದಲ್ಲಿ 3 ವರ್ಷದಿಂದ ವಾರ್ಷಿಕೋತ್ಸವ ಕಾರ್ಯಕ್ರಮ ಆಯೋಜನೆ ಮಾಡುತ್ತಿದೆ. ಎಬಿಸಿಡಿ ಡಾನ್ಸ್ ಕ್ಲಾಸ್‌ನ ನೃತ್ಯಪಟುಗಳು ವಿವಿಧ ಪ್ರಕಾರಗಳ ನೃತ್ಯವನ್ನು ಪ್ರದರ್ಶಿಸುತ್ತ ಸಾರ್ವಜನಿಕರಿಗೆ ಮನರಂಜನೆ ನೀಡುತ್ತಾರೆ. ಈ ವೇಳೆ ನೃತ್ಯ ಪ್ರದರ್ಶಿಸಿದ ಮಕ್ಕಳಿಗೆ ಪ್ರಮಾಣ ಪತ್ರ, ಬಹುಮಾನ ವಿತರಿಸಿ ಪ್ರೋತ್ಸಾಹಿಸಲಾಗುತ್ತದೆ.

ತರಬೇತಿ ಸಮಯ: ಕೊಳ್ಳೇಗಾಲದ ಪಟ್ಟಣದ ಶ್ರೀಬಸವೇಶ್ವರನಗರ 2ನೇ ಕ್ರಾಸ್‌ನಲ್ಲಿ ಎಬಿಸಿಡಿ ಡಾನ್ಸ್ ಕ್ಲಾಸ್ ಇದೆ. ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 5 ರಿಂದ 6 ಗಂಟೆವರೆಗೆ ತರಬೇತಿ ನೀಡಲಾಗುವುದು. ವಿಶೇಷವಾಗಿ ಶನಿವಾರ ಮಧ್ಯಾಹ್ನ 3-6ರವರೆಗೆ ಹಾಗೂ ಭಾನುವಾರ ಬೆಳಗ್ಗೆ 11 ರಿಂದ 2 ಗಂಟೆವರೆಗೆ ಕ್ಲಾಸ್ ನಡೆಯುತ್ತದೆ. ಪ್ರತಿವರ್ಷ ಬೇಸಿಗೆ ಶಿಬಿರ ನಡೆಸಲಾಗುತ್ತದೆ. ಈಗಾಗಲೇ ಏ.1 ರಿಂದ ಬೇಸಿಗೆ ಶಿಬಿರ ಪ್ರಾರಂಭವಾಗಿದ್ದು 80 ಮಕ್ಕಳು ದಾಖಲಾಗಿ ನೃತ್ಯ ತರಬೇತಿ ಪಡೆಯುತ್ತಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೊ.9035901126/9844792559 ಸಂಪರ್ಕಿಸಬಹುದು.

ನೃತ್ಯವನ್ನು ದೇವರಂತೆ ಕಾಣುತ್ತೇನೆ. ಕೊಳ್ಳೇಗಾಲದ ಭಾಗದಲ್ಲಿ ಡಾನ್ಸ್ ಕ್ಲಾಸ್ ತೆರೆದಿರುವ ಉದ್ದೇಶ ಗ್ರಾಮೀಣ ಭಾಗದ ಮಕ್ಕಳ ಪ್ರತಿಭೆ ಗುರುತಿಸುವುದು. ನಮ್ಮ ವೇದಿಕೆ ಮೂಲಕ ನೃತ್ಯ ಕ್ಷೇತ್ರದಲ್ಲಿ ಸಾಧಕರನ್ನಾಗಿ ಮಾಡುವುದು. ನನಗೆ ವಿಶ್ವಾಸವಿದೆ. ನಮ್ಮ ಸಂಸ್ಥೆಯಿಂದ ಕೊಳ್ಳೇಗಾಲ ಭಾಗದಿಂದ ಉತ್ತಮ ಡಾನ್ಸರ್ ಅನ್ನು ಹೊರ ಜಗತ್ತಿಗೆ ಕೊಡುತ್ತೇವೆ. -ಶೃಂಗಾರ್, ಡಾನ್ಸ್ ಮಾಸ್ಟರ್, ಎಬಿಸಿಡಿ ಡಾನ್ಸ್ ಕ್ಲಾಸ್, ಕೊಳ್ಳೇಗಾಲ ಡಾನ್ಸ್ ಕಲಿಯಲು ನನಗೆ ಇಷ್ಟ. ನಮ್ಮ ಮಾಸ್ಟರ್ ನಮಗೆ ಚೆನ್ನಾಗಿ ಡಾನ್ಸ್ ಹೇಳಿಕೊಡುತ್ತಾರೆ. ನನಗೆ ಕ್ಲಾಸ್‌ಗೆ ಬರಲು ಖುಷಿಯಿದೆ. ನಾನು ಮುಂದೆ ದೊಡ್ಡ ಡಾನ್ಸರ್ ಆಗುತ್ತೇನೆ. -ಜೆ.ಜ್ಞಾನಶ್ರೀ, ವಿದ್ಯಾರ್ಥಿ, ಎಬಿಸಿಡಿ ಡಾನ್ಸ್ ಕ್ಲಾಸ್, ಕೊಳ್ಳೇಗಾಲ