ಚಾಮರಾಜನಗರ: ಮತದಾನ ಜಾಗೃತಿ ಕಾರ್ಯಕ್ರಮಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಹಮ್ಮಿಕೊಳ್ಳಲು ಏ.21 ರಂದು ಜಿಲ್ಲೆಯ ಎಲ್ಲಾ ಮತಗಟ್ಟೆಗಳಲ್ಲಿ ವಾಕಥಾನ್ ಏರ್ಪಡಿಸುವಂತೆ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆನಂದ್ ಪ್ರಕಾಶ್ ಮೀನಾ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಲೋಕಸಭಾ ಸಾರ್ವತ್ರಿಕ ಚುನಾವಣೆಯ ಸಂಬಂಧ ಶನಿವಾರ ಆಯೋಜಿಸಿದ್ದ ಸ್ವೀಪ್ ಕಾರ್ಯಚಟುವಟಿಕೆಗಳ ಅನುಷ್ಠಾನ ಕುರಿತು ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಲೋಕಸಭಾ ಚುನಾವಣೆಯ ಅಂಗವಾಗಿ ಇದೇ ಏ.26ರಂದು ಚಾಮರಾಜನಗರ ಲೋಕಸಭಾ ಕ್ಷೇತ್ರವ್ಯಾಪ್ತಿಯಲ್ಲಿ ಮತದಾನ ನಡೆಯಲಿದ್ದು, ಮತದಾನದ ಮಹತ್ವ ಕುರಿತು ನಾಗರಿಕರಿಗೆ ಪರಿಣಾಮಕಾರಿ ಅರಿವು ಮೂಡಿಸಬೇಕಾಗಿದೆ. ಭಾರತ ಚುನಾವಣಾ ಆಯೋಗವು ಅಂದು ಪ್ರಜಾಪ್ರಭುತ್ವದ ಹಬ್ಬವನ್ನು ಆಚರಿಸಲು ಸೂಚಿಸಿರುವ ನಿಟ್ಟಿನಲ್ಲಿ ಏ.21ರಂದು ನಮ್ಮ ನಡೆ ಮತಗಟ್ಟೆಯ ಕಡೆಗೆ ವಾಕಥಾನ್ ಕಾರ್ಯಕ್ರಮವನ್ನು ಎಲ್ಲಾ ಮತಗಟ್ಟೆಗಳಲ್ಲಿ ರಾಷ್ಟ್ರೀಯ ಹಬ್ಬದ ಮಾದರಿಯಲ್ಲಿ ಆಚರಿಸಲು ಉದ್ದೇಶಿಸಲಾಗಿದೆ ಎಂದರು.
ಜಿಲ್ಲೆಯ ಎಲ್ಲಾ ಮತಗಟ್ಟೆ ಅಧಿಕಾರಿಗಳು ಈ ಸಂಬಂಧ ಆಯಾ ವ್ಯಾಪ್ತಿಯ ತಹಶೀಲ್ದಾರರು, ತಾಲೂಕು ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಶಾಲಾ ಶಿಕ್ಷಕರೊಂದಿಗೆ ಸಮನ್ವಯ ಸಾಧಿಸಿ ಮತಗಟ್ಟೆ ಇರುವ ಗ್ರಾಮಗಳ ನಿಗದಿತ ಪರಿಮಿತಿಯಲ್ಲಿ ಸಾರ್ವಜನಿಕರನ್ನೊಳಗೊಂಡು ವಾಕಥಾನ್ ಏರ್ಪಡಿಸಿ ಸ್ಥಾಪಿತವಾಗಿರುವ ಮತಗಟ್ಟೆಯಲ್ಲಿ ಚುನಾವಣಾ ಆಯೋಗ ನೀಡಿರುವ ಬೆಳಿಗ್ಗೆ 8 ಗಂಟೆಗೆ ಧ್ವಜಾರೋಹಣ ನಡೆಸಬೇಕು. ಪ್ರತಿ ಮತಗಟ್ಟೆಗಳಲ್ಲಿ ಕನಿಷ್ಠ ಮೂಲಸೌಕರ್ಯಗಳಾದ ಕುಡಿಯುವ ನೀರು, ಶೌಚಾಲಯ, ನೆರಳಿನ ವ್ಯವಸ್ಥೆ ಅಚ್ಚುಕಟ್ಟಾಗಿರುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಕಳೆದ 2019ರ ಲೋಕಸಭಾ ಚುನಾವಣೆಯಲ್ಲಿ ಕಡಿಮೆ ಮತದಾನವಾಗಿರುವ ಮತಗಟ್ಟೆಗಳುನ್ನು ಗುರುತಿಸಲಾಗಿದ್ದು, ಆಯಾ ಮತಗಟ್ಟೆಮಟ್ಟದ ಅಧಿಕಾರಿಗಳು ಪ್ರತಿ ಮನೆಮನೆಗಳಿಗೆ ಖುದ್ದು ಭೇಟಿ ನೀಡಿ ಮತದಾರರ ಚೀಟಿಯನ್ನು ವಿತರಿಸುವ ಕಾರ್ಯವನ್ನು ಚುರುಕುಗೊಳಿಸಬೇಕು. ಕಡ್ಡಾಯವಾಗಿ ಹಾಗೂ ತಪ್ಪದೆ ಮತದಾನ ಮಾಡುವಂತೆ ಜನಜಾಗೃತಿ ಮೂಡಿಸಬೇಕು ಎಂದರು.
ಜಿಲ್ಲಾ ಸ್ವೀಪ್ ನೋಡಲ್ ಅಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಪಿ. ಲಕ್ಷ್ಮೀ ಮಾತನಾಡಿ, ಈ ಬಾರಿ ಮತದಾನದ ಪ್ರಮಾಣವನ್ನು ಹೆಚ್ಚಿಸಲು ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದ್ದು, ಎಲ್ಲಾ ಮತಗಟ್ಟೆಗಳಲ್ಲಿ ಚಿತ್ರಕಲೆ, ರಂಗೋಲಿ ಬಿಡಿಸಬೇಕು. ಮಹಿಳೆಯರನ್ನು ಸೆಳೆಯಲು ಸಖಿ ಮತಗಟ್ಟೆ, ಅರಣ್ಯದ ಅರಿವು ಮೂಡಿಸುವ ಹಸಿರು ಮತಗಟ್ಟೆ, ರೈತರಿಗಾಗಿ ಅನ್ನದಾತರ ಮತಗಟ್ಟೆ, ವಿಶೇಷಚೇತನರಿಗಾಗಿ ಪಿ.ಡಬ್ಲೂ.ಡಿ ಮತಗಟ್ಟೆ, ರಾಮಸಮುದ್ರದಲ್ಲಿ ಜಾನಪದ ಕಲೆಗಳ ಮತಗಟ್ಟೆ ಮತ್ತು ಬುಡಕಟ್ಟು ಜನರು ಹೆಚ್ಚಾಗಿ ವಾಸಿಸುವ ಸ್ಥಳಗಳಲ್ಲಿ ಬುಡಕಟ್ಟು ಜನರ ಆಹಾರ ಪದ್ದತಿ, ಉಡುಗೆ ತೊಡುಗೆ, ಅವರು ಬಳಸುವ ಪರಿಕರಗಳನ್ನಿಟ್ಟು ವಿಶೇಷ ಮತಗಟ್ಟೆಗಳ ಅಂದವನ್ನು ಹೆಚ್ಚಿಸಿ ಮತದಾರರನ್ನು ಸೆಳೆಯಲು ಕಾರ್ಯಚಟುವಟಿಕೆಗಳನ್ನು ಅಚ್ಚುಕಟ್ಟಾಗಿ ಆಯೋಜಿಸುವಂತೆ ತಿಳಿಸಿದರು.
ವಿವಿಧ ಜಿಲ್ಲಾಮಟ್ಟದ ಅಧಿಕಾರಿಗಳು, ಮತಗಟ್ಟೆಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.