ಚಾಮರಾಜನಗರ: ಆಷಾಢ ಮಾಸದಲ್ಲಿ ಜರುಗುವ ಶ್ರೀಚಾಮರಾಜೇಶ್ವರ ಬ್ರಹ್ಮ ರಥೋತ್ಸವದ ಅಂಗವಾಗಿ ರಥಕ್ಕೆ ಕಳಶ ಸ್ಥಾಪನಾ ಕಾರ್ಯ ನೆರವೇರಿಸಲಾಯಿತು.
ನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದ ಆವರಣದಲ್ಲಿ ಜು.3 ರಂದು ನಡೆಯಲಿರುವ ವಿಶೇಷ ರಥೋತ್ಸವದ ಅಂಗವಾಗಿ ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಗುತ್ತಿದ್ದು, ಗುರುವಾರ ಬೆಳಗ್ಗೆ 10.30ರ ವೇಳೆಯಲ್ಲಿ ದೇವರ ಉತ್ಸವ ಮಾಡುವುದರ ಮೂಲಕ ಕಳಶವನ್ನು ಮೆರವಣಿಗೆ ಮಾಡಿ, ರಥದಲ್ಲಿ ಸ್ಥಾಪನೆ ಮಾಡುವ ಕಾರ್ಯ ನೆರವೇರಿಸಲಾಯಿತು. ಈ ಮೂಲಕ ಶ್ರೀಚಾಮರಾಜೇಶ್ವರಸ್ವಾಮಿಯ ರಥಕ್ಕೆ ಬಣ್ಣಬಣ್ಣದ ಬಾವುಟ ಕಟ್ಟುವ ಕಾರ್ಯಕ್ಕೂ ಚಾಲನೆ ನೀಡಲಾಯಿತು.
ದೇವಸ್ಥಾನದಲ್ಲಿ ರಾತ್ರಿಯ ವೇಳೆಯೂ ಅಮ್ಮನವರ ಉತ್ಸವ ಹಾಗೂ ರಥದ ಬೀದಿಯಲ್ಲಿ ಬಲಿ ಪ್ರಧಾನ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ದೇವಸ್ಥಾನದ ಆಗಮಿಕರಾದ ದರ್ಶನ್, ನಾಗರಾಜ ದೀಕ್ಷಿತ್, ಅನಿಲ್ ಕುಮಾರ್ ದೀಕ್ಷಿತ್, ರಾಮಕೃಷ್ಣ, ಮಹೇಶ್ ಭಕ್ತಾದಿಗಳು ಹಾಗೂ ಉತ್ಸವ ಸಮಿತಿಯವರು ಭಾಗವಹಿಸಿದ್ದರು.