oppo_2 
ಜಿಲ್ಲೆ

ಶೌಚಗೃಹ ಸ್ಲಾೃಬ್ ಕುಸಿತ

ಎ.ಎಸ್.ಮಣಿಕಂಠ

ಹನೂರು: ಪಟ್ಟಣ ಪಂಚಾಯಿತಿ ವತಿಯಿಂದ ಖಾಸಗಿ ಬಸ್ ನಿಲ್ದಾಣದ ಬಳಿ ನಿರ್ಮಿಸಿರುವ ಸಾರ್ವಜನಿಕರ ಶೌಚಗೃಹದ ಮುಂಭಾಗದಲ್ಲಿ ಶುಕ್ರವಾರ ರಾತ್ರಿ ಡೆಕ್ ಸ್ಲ್ಯಾಬ್ ಕುಸಿದ ಪರಿಣಾಮ ಶೌಚಗೃಹಕ್ಕೆ ಬೀಗ ಹಾಕಲಾಗಿದೆ. ಇದರಿಂದ ಸಾರ್ವಜನಿಕರು ಶೌಚಕ್ಕಾಗಿ ಪರದಾಡುವಂತಾಗಿದೆ.

ಶೌಚಗೃಹದ ಬೃಹತ್ ಗುಂಡಿಯಲ್ಲಿದ್ದ ಮಲ, ಮೂತ್ರ ತೆರವುಗೊಳಿಸಲು ರಾತ್ರಿ 11 ಗಂಟೆಯಲ್ಲಿ ಪಪಂ ನೌಕರರು ಶೌಚಗೃಹಕ್ಕೆ ಹೋಗುವ ಸ್ಥಳದಲ್ಲಿ ಸಕ್ಕಿಂಗ್ ಯಂತ್ರವನ್ನು ನಿಲ್ಲಿಸಿ ತ್ಯಾಜ್ಯ ತೆಗೆಯುತ್ತಿದ್ದರು. ಈ ವೇಳೆ ಸಕ್ಕಿಂಗ್ ಯಂತ್ರ ನಿಂತಿದ್ದ ಸ್ಥಳದಲ್ಲಿ ಡೆಕ್ ಸ್ಲ್ಯಾಬ್ ಕುಸಿದಿದ್ದು, ಅದರೊಳಗೆ ಸಕ್ಕಿಂಗ್ ಯಂತ್ರವೂ ಸಿಲುಕಿತು. ಶನಿವಾರ ಬೆಳಗ್ಗೆ ಕ್ರೇನ್ ಮೂಲಕ ಸೆಕ್ಕಿಂಗ್ ಯಂತ್ರವನ್ನು ಮೇಲೆತ್ತಲಾಯಿತು. ಆದರೆ, ಸ್ಲ್ಯಾಬ್ ಬಾಯ್ತೆರೆದ ಪರಿಣಾಮ ಶೌಚಗೃಹವನ್ನು ಬಂದ್ ಮಾಡಲಾಗಿದೆ. ಇದರಿಂದ ಸಾರ್ವಜನಿಕರು ಅದರಲ್ಲೂ ಮಹಿಳೆಯರು ಶೌಚಕ್ಕಾಗಿ ತುಂಬಾ ತೊಂದರೆ ಅನುಭವಿಸಿದರೆ, ಕೆಲ ಪುರುಷರು ಶೌಚಗೃಹ ಆಸುಪಾಸಿನ ಮೂತ್ರ ವಿಸರ್ಜಿಸುತ್ತಿದ್ದಾರೆ. ಇದರಿಂದ ಬಸ್ ನಿಲ್ದಾಣದ ಆಸುಪಾಸು ಅನೈರ್ಮಲ್ಯಕ್ಕೆ ಎಡೆಮಾಡಿ ಕೊಟ್ಟಿದೆ.

ಡೆಕ್‌ಸ್ಲ್ಯಾಬ್ ಕುಸಿದಿರುವುದರಿಂದ ಸಾರ್ವಜನಿಕರು ಶೌಚಗೃಹಕ್ಕೆ ತೆರಳದಂತೆ ಸೂಚನಾ ಫಲಕವನ್ನು ಅಳವಡಿಸಬೇಕಿತ್ತು. ಆದರೆ ಚುನಾವಣೆ ನೀತಿ ಸಂಹಿತೆ ಜಾರಿ ಇರುವುದರಿಂದ ಪಪಂ ವತಿಯಿಂದ ತೆರೆವುಗೊಳಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಕಾಂಗ್ರೆಸ್ ನಾಯಕರನ್ನು ಒಳಗೊಂಡ ಫ್ಲೇಕ್ಸ್ ಅನ್ನು ಸಾರ್ವಜನಿಕರು ಶೌಚಗೃಹಕ್ಕೆ ತೆರಳದಂತೆ ಅಡ್ಡ ಇರಿಸಲಾಗಿತ್ತು. ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದರೂ ರಾಜಕೀಯ ನಾಯಕರ ಫ್ಲೆಕ್ಸ್ ಅನ್ನು ಸಾರ್ವಜನಿಕರ ಸ್ಥಳದಲ್ಲಿ ಇಟ್ಟಿರುವ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಯಿತು. ಇದರಿಂದ ಎಚ್ಚೆತ್ತ ಪಪಂ ಅಧಿಕಾರಿಗಳು ಅಲ್ಲಿ ಅಳವಡಿಸಿದ್ದ ಫ್ಲೆಕ್ಸ್‌ಗಳನ್ನು ತೆರೆವುಗೊಳಿಸಿದರು.

ಕುಸಿದಿರುವ ಶೌಚಗೃಹದ ಗುಂಡಿಯಲ್ಲಿ ತ್ಯಾಜ್ಯವನ್ನು ತೆರೆವುಗೊಳಿಸಿ ಶೀಘ್ರ ಡೆಕ್ ಸ್ಲ್ಯಾಬ್ ನಿರ್ಮಿಸಲು ಕ್ರಮವಹಿಸಲಾಗುವುದು. ಶೌಚಗೃಹದ ಅಡ್ಡಲಾಗಿ ಇರಿಸಲಾಗಿದ್ದ ರಾಜಕೀಯ ನಾಯಕರ ಫ್ಲೆಕ್ಸ್‌ಗಳನ್ನು ತೆರೆವುಗೊಳಿಸಲಾಗಿದೆ.
ಶ್ರೀಧರ್, ಮುಖ್ಯಾಧಿಕಾರಿ ಹನೂರು ಪಪಂ