ಚಾಮರಾಜನಗರ : ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಗುರುವಾರ 9 ಅಭ್ಯರ್ಥಿಗಳಿಂದ 10 ನಾಮಪತ್ರಗಳು ಸಲ್ಲಿಕೆಯಾಗಿವೆ.
ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ 2024ರ ಸಾರ್ವತ್ರಿಕ ಚುನಾವಣೆಗೆ ಬಹುಜನ ಸಮಾಜ ಪಾರ್ಟಿಯಿಂದ ಎಂ.ಕೃಷ್ಣಮೂರ್ತಿ, ಡಾ. ಅಂಬೇಡ್ಕರ್ ಪೀಪಲ್ಸ್ ಪಾರ್ಟಿಯಿಂದ ಸಿ.ಎಂ. ಕೃಷ್ಣ, ಕರ್ನಾಟಕ ಪ್ರಜಾ ಪಾರ್ಟಿ (ರೈತ ಪರ್ವ)ಯಿಂದ ಪ್ರಸನ್ನ ಕುಮಾರ್. ಬಿ ಹಾಗೂ ಪಕ್ಷೇತರ ಅಭ್ಯರ್ಥಿಗಳಾಗಿ ಸುಭಾಷ್ ಚಂದ್ರ, ಕೆ.ನಟರಾಜು, ನಿಂಗರಾಜು. ಜಿ.ಸಿ.ರಾಜು, ಜೆ.ನಿಂಗರಾಜು ಎಂಬುವವರು ತಲಾ ಒಂದು ನಾಮಪತ್ರ ಸಲ್ಲಿಸಿದ್ದಾರೆ. ಸಮಾಜವಾದಿ ಜನತಾ ಪಾರ್ಟಿ (ಕರ್ನಾಟಕ)ಯಿಂದ ಚಾಮದಾಸಯ್ಯ ಅವರು ಎರಡು ನಾಮಪತ್ರಗಳನ್ನು ಸಲ್ಲಿಸಿದ್ದಾರೆ. ಈ ಮೂಲಕ ಒಟ್ಟಾರೆ 25 ಅಭ್ಯರ್ಥಿಗಳಿಂದ 36 ನಾಮಪತ್ರಗಳು ಸಲ್ಲಿಕೆಯಾಗಿವೆ. ಏ.5 ರಿಂದ ನಾಮಪತ್ರ ಪರೀಶೀಲನೆ ನಡೆಯಲಿದ್ದು, ಏ.8 ರಂದು ಉಮೇದುವಾರಿಕೆ ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿದೆ.