ಚಾಮರಾಜನಗರ: ಕಾಂಗ್ರೆಸ್‌ನವರು ಅಧಿಕಾರದ ಅಮಲಿನಲ್ಲಿದ್ದಾರೆ. ಚಾಮರಾಜನಗರ ಕ್ಷೇತ್ರದಲ್ಲಿ ಹಣ, ಹೆಂಡದ ಆಧಾರದಲ್ಲಿ ಅಭ್ಯರ್ಥಿ ಗೆಲ್ಲುತ್ತಾರೆಂಬ ಭ್ರಮೆಯಲ್ಲಿದ್ದಾರೆ. ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಎಸ್.ಬಾಲರಾಜ್ ದಾಖಲೆ ಅಂತರದಲ್ಲಿ ಜಯಗಳಿಸುತ್ತಾರೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ನಗರದ ಜಿಲ್ಲಾಡಳಿತ ಭವನದಲ್ಲಿ ಅಭ್ಯರ್ಥಿ ಎಸ್.ಬಾಲರಾಜ್ ನಾಮಪತ್ರ ಸಲ್ಲಿಕೆ ಬಳಿಕ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ಬಾಲರಾಜ್‌ಗಿಂತಲೂ ಸಜ್ಜನ ರಾಜಕಾರಣಿ ಈ ಕ್ಷೇತ್ರದಲ್ಲಿ ಸಿಗುವುದಿಲ್ಲ. ಕಾಂಗ್ರೆಸ್‌ನವರು ಗೆಲ್ಲುವ ಭ್ರಮೆಯಲ್ಲಿ ಇದ್ದಾರೆ. ಕಾಂಗ್ರೆಸ್ ಮುಖಂಡರು ಹತಾಶರಾಗಿದ್ದಾರೆ ಎಂದರು.
ರಾಜ್ಯದ ಮತದಾರರು ದೇಶದ ಅಭಿವೃದ್ಧಿ ದೃಷ್ಟಿಯಿಂದ ನರೇಂದ್ರಮೋದಿ ಅವರಿಗೆ ಸರಿಸಾಟಿಯಾಗಿರುವ ಮತ್ತೊಬ್ಬ ಪ್ರಧಾನ ಮಂತ್ರಿ ಇಲ್ಲ. ರಾಜ್ಯದಲ್ಲಿ ಕಾಂಗ್ರೆಸ್‌ನ ಬಣ್ಣ ಬಣ್ಣದ ಮಾತುಗಳಿಗೆ ನಾವು ಮೋಸ ಹೋಗಿದ್ದೇವೆ. ಮತ್ತೊಮ್ಮೆ ಮೋದಿ ಪ್ರಧಾನಿ ಮಾಡಲು ಬಿಜೆಪಿ-ಜೆಡಿಎಸ್ ಮೈತ್ರಿ ಹೋರಾಟವನ್ನು ಬೆಂಬಲಿಸಬೇಕೆಂದು ಜನರು ಮಾತನಾಡುತ್ತಿದ್ದಾರೆ ಎಂದರು.
ನಾನು ಸಂಸದ ವಿ.ಶ್ರೀನಿವಾಸಪ್ರಸಾದ್ ಅವರನ್ನು ಭೇಟಿ ಮಾಡಿದ್ದೇನೆ. ಪ್ರಧಾನ ಮಂತ್ರಿ ನರೇಂದ್ರಮೋದಿ ಮೇಲೆ ಅವರಿಗೆ ಅಪಾರ ಗೌರವವಿದೆ. ಅವರು ನಿವೃತ್ತಿ ನಂತರ ಯಾವುದೇ ಪಕ್ಷದಲ್ಲಿ ಗುರುತಿಸಿಕೊಳ್ಳಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಮಾಜಿ ಶಾಸಕ ಹರ್ಷವರ್ಧನ್ ನಮ್ಮೊಂದಿಗೆ ಇದ್ದಾರೆ. ಕಾಂಗ್ರೆಸ್‌ನವರು ಗಾಬರಿ, ಗೊಂದಲದಲ್ಲಿದ್ದಾರೆ. ಚುನಾವಣೆ ಮುಗಿದ ಮೇಲೆ ಸಿದ್ದರಾಮಯ್ಯ ಅವರನ್ನು ಕೆಳಗೆ ಇಳಿಸಬೇಕೆಂದು ಡಿ.ಕೆ.ಶಿವಕುಮಾರ್ ಕಾಯುತ್ತಿದ್ದಾರೆ. ಕಾಂಗ್ರೆಸ್‌ನಲ್ಲಿ ಎಷ್ಟು ಸೀಟು ಬಂದರೆ ಮುಖ್ಯಮಂತ್ರಿ ಇಳಿಸಬೇಕೆಂಬ ಚರ್ಚೆ ನಡೆಯುತ್ತಿದೆ ಎಂದು ಹೇಳಿದರು.
ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಜಿಲ್ಲೆಗೆ ಭೀಕರ ಬರಗಾಲದ ಸಂದರ್ಭದಲ್ಲೂ ಕೂಡ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಜಾರಿಗೆ ತಂದರು. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ದೇ ಕಾಂಗ್ರೆಸ್. ಅವರ ಬಗ್ಗೆ ಮಾತನಾಡಲು ಈ ಪಕ್ಷಕ್ಕೆ ನೈತಿಕತೆ ಇಲ್ಲ. ಮುಂದಿನ ದಿನಗಳಲ್ಲಿ ಕ್ಷೇತ್ರ ಅಭಿವೃದ್ಧಿಯಾಗಬೇಕಾದರೆ ಬಾಲರಾಜ್ ಅವರನ್ನು ಗೆಲ್ಲಿಸಿ ಎಂದು ತಿಳಿಸಿದರು.
ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಮಾತನಾಡಿ, ಕಾಂಗ್ರೆಸ್ ರೈತರ ಪರವಾಗಿಲ್ಲ. ರಾಜ್ಯದಲ್ಲಿ ಬರಗಾಲ ಬಂದಿದೆ. ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ ಕಾಂಗ್ರೆಸ್ ಸರ್ಕಾರ 5 ಗ್ಯಾರಂಟಿ ಮಾತ್ರ ಕೊಟ್ಟಿದೆ. ಚಾಮರಾಜನಗರ ಜಿಲ್ಲೆಯಲ್ಲಿ ಎಸ್.ಬಾಲರಾಜ್ ಹಿರಿಯ ನಾಯಕರಾದ ರಾಜಶೇಖರಮೂರ್ತಿ, ಆರ್.ಧ್ರುವನಾರಾಯಣ ಜತೆಗೆ ಇದ್ದವರು. ಯುವಕ, ವಿದ್ಯಾವಂತ, ಬಡವ, ಸಜ್ಜನ ರಾಜಕಾರಣಿ, ಕಲಾವಿದ ಎಂದರು.
28 ಲೋಕಸಭಾ ಕ್ಷೇತ್ರಗಳನ್ನು ಗೆಲ್ಲಿಸಿಕೊಡಿ. ನಾನು ಮತ್ತು ದೇವೇಗೌಡ ಅವರು ಮೋದಿ ಅವರ ಬಳಿ ಹೋಗಿ ರಾಜ್ಯಕ್ಕೆ ಬರುವ ನೀರಾವರಿ ಯೋಜನೆಗಳನ್ನು ತರುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ ಎಂದು ಹೇಳಿದರು. ಮಾಜಿ ಮುಖ್ಯಮಂತ್ರಿ ಸದಾನಂದಗೌಡ, ಕೇಂದ್ರ ಸಚಿವ ನಾರಾಯಣಸ್ವಾಮಿ, ಅರವಿಂದ ಲಿಂಬಾವಳಿ, ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್, ಶಾಸಕರಾದ ಎಂ.ಆರ್.ಮಂಜುನಾಥ್, ಜಿ.ಟಿ.ಹರೀಶ್, ಮಾಜಿ ಶಾಸಕರಾದ ಎ.ರಾಮದಾಸ್, ಹರ್ಷವರ್ಧನ್, ಪ್ರೊ.ಮಲ್ಲಿಕಾರ್ಜುನಪ್ಪ, ಅಶ್ವಿನ್ ಕುಮಾರ್, ಜಿಲ್ಲಾಧ್ಯಕ್ಷ ಸಿ.ಎಸ್.ನಿರಂಜನ್‌ಕುಮಾರ್, ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ ಮತ್ತು ಇತರರು ಇದ್ದರು.
ಎಂ.ಆರ್.ಮಂಜುನಾಥ್ ಭಾಗಿ: ಹನೂರು ಜೆಡಿಎಸ್ ಶಾಸಕ ಎಂ.ಆರ್.ಮಂಜುನಾಥ್ ಅಭ್ಯರ್ಥಿ ಎಸ್.ಬಾಲರಾಜ್ ನಾಮಪತ್ರ ಸಲ್ಲಿಕೆ ವೇಳೆ ಭಾಗವಹಿಸಿದರು. ಪಕ್ಷದ ಮುಖಂಡರಾದ ಬಿ.ಪುಟ್ಟಸ್ವಾಮಿ ಇದ್ದರು. ಜೆಡಿಎಸ್ ಕಾರ್ಯಕರ್ತರು ಸಹ ಭಾಗವಹಿಸಿದ್ದರು. ಚಾಮರಾಜನಗರದ ಮುಖಂಡ ಆಲೂರು ಮಲ್ಲು ಗೈರಾಗಿದ್ದರು. ಈ ಕುರಿತು ‘ವಿಜಯವಾಣಿ’ಯೊಂದಿಗೆ ಆಲೂರು ಮಲ್ಲು ಮಾತನಾಡಿ, ನನ್ನನ್ನು ಯಾರೂ ಆಹ್ವಾನಿಸಿಲ್ಲ. ಈ ಹಿನ್ನೆಲೆಯಲ್ಲಿ ಆಗಮಿಸಲಿಲ್ಲ ಎಂದರು.
ಎಸ್.ಬಾಲರಾಜ್‌ಗೆ ಬಿವೈವಿ ಸಾಥ್: ನಗರದ ಜಿಲ್ಲಾಡಳಿತ ಭವನದಲ್ಲಿ ಅಭ್ಯರ್ಥಿ ಎಸ್.ಬಾಲರಾಜ್ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಶಿಲ್ಪಾನಾಗ್‌ಗೆ ನಾಮಪತ್ರ ಸಲ್ಲಿಸಿದರು. ಈ ವೇಳೆ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಶಾಸಕರಾದ ಜಿ.ಟಿ.ದೇವೇಗೌಡ, ಎಂ.ಆರ್.ಮಂಜುನಾಥ್, ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್, ಜಿಲ್ಲಾಧ್ಯಕ್ಷ ನಿರಂಜನ್‌ಕುಮಾರ್, ಮಾಜಿ ಶಾಸಕ ಅಶ್ವಿನ್‌ಕುಮಾರ್ ಮತ್ತು ಮೈಸೂರು ಗ್ರಾಮಾಂತರ ಅಧ್ಯಕ್ಷ ಮಹದೇವಸ್ವಾಮಿ. ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ ಇತರರು ಹಾಜರಿದ್ದರು.
ತೆರೆದ ವಾಹನದಲ್ಲಿ ರೋಡ್ ಶೋ:
ನಗರದ ಶ್ರೀಭುವನೇಶ್ವರಿ ವೃತ್ತದಿಂದ ಜಿಲ್ಲಾಡಳಿತ ಭವನದವರೆಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಅಭ್ಯರ್ಥಿ ಎಸ್.ಬಾಲರಾಜ್ ಮತ್ತು ಇತರರು ರೋಡ್ ಶೋ ನಡೆಸಿದರು. ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿ ವಾಹನ ಸಲ್ಲಿಸಿ ಪ್ರಮುಖ ನಾಯಕರು ಭಾಷಣ ಮಾಡಿದರು. ಈ ವೇಳೆ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು. ರೋಡ್ ಶೋನಲ್ಲಿ ಬಿಜೆಪಿ ಮುಖಂಡರು ಪಕ್ಷದ ಬಾವುಟ ಹಾರಿಸಿ ಜೈಕಾರ ಕೂಗಿದರು. ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಿದ್ದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವರುಣ ವಿಧಾನಸಭಾ ಕ್ಷೇತ್ರವನ್ನು ಚಾಮರಾಜನಗರ ಲೋಕಸಭಾ ಕ್ಷೇತ್ರ ಒಳಗೊಂಡಿದೆ. ಹಾಗಾಗಿಯೇ ಅವರು ನಿಮ್ಮ ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿಯಬೇಕಾ ಬೇಡವಾ ಎಂದಿದ್ದಾರೆ. ಈ ಚುನಾವಣೆ ಮೇಲೆ ಇದೆಲ್ಲ ನಿಂತಿದೆ ಎಂದು ಹೇಳಿದ್ದಾರೆ. ಚುನಾವಣೆಯಲ್ಲಿ ಕಳೆದ 20 ವರ್ಷಗಳಿಂದ ಅಧಿಕಾರವಿಲ್ಲದಿದ್ದರೂ ಜನರ ಜತೆಗೆ ಇರುವ ವ್ಯಕ್ತಿ ಎಸ್.ಬಾಲರಾಜ್ ಗೆಲ್ಲಲಿದ್ದಾರೆ.ಎಸ್.ಎ.ರಾಮದಾಸ್, ಮಾಜಿ ಶಾಸಕ