ಚಾಮರಾಜನಗರ: ಚಾಮರಾಜನಗರ ಲೋಕಸಭಾ ಕ್ಷೇತ್ರವನ್ನು ವಶಪಡಿಸಿಕೊಳ್ಳಲು ಕಾರ್ಯತಂತ್ರ ರೂಪಿಸಿರುವ ಕಾಂಗ್ರೆಸ್ ‘ಆಪರೇಷನ್ ಹಸ್ತ’ ನಡೆಸುತ್ತಿದ್ದರೆ, ಇದಕ್ಕೆ ಬಿಜೆಪಿ ಸಹಜ ಸ್ವೀಕಾರ ಮತ್ತು ತಣ್ಣಗಿರುವ ನಿರ್ಧಾರದ ಪ್ರತಿತಂತ್ರಕ್ಕೆ ಮೊರೆ ಹೋಗಿದೆ.
ಕ್ಷೇತ್ರದ ಪ್ರಮುಖರು ಅದರಲ್ಲೂ ಸಂಸದ ವಿ.ಶ್ರೀನಿವಾಸಪ್ರಸಾದ್ ಸಂಬಂಧಿಕರು, ಬೆಂಬಲಿಗರು ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತಿದ್ದಾರೆ. ‘ಪಕ್ಷಾಂತರ ಚುನಾವಣೆ ಸಂದರ್ಭದ ಸಹಜ ಪ್ರಕ್ರಿಯೆ’ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಎಸ್.ನಿರಂಜನ್‌ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆಪರೇಷನ್ ಹಸ್ತದ ಬಿಸಿ ತಾಗುತ್ತಿದ್ದರೂ ಬಿಜೆಪಿ ಇದನ್ನು ತಣ್ಣಗೆ ಸ್ವೀಕಾರ ಮಾಡುವುದರ ಹಿಂದೆಯೂ ಸಂದೇಶ ಮತ್ತು ಎಚ್ಚರಿಕೆಯ ನಡೆ ಅಡಗಿದೆ.
ಏನಿದು ಸಂದೇಶ?: ಕಾಂಗ್ರೆಸ್ ಆಪರೇಷನ್ ಹಸ್ತ ನಡೆಸಿ ತನ್ನ ‘ಇಮೇಜ್’ ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ ಬಿಜೆಪಿ ‘ನೋ ಡ್ಯಾಮೇಜ್’ ಸಂದೇಶ ರವಾನೆ ಮಾಡಲು ಪ್ರಯತ್ನಿಸುತ್ತಿದೆ. ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ಸಹೋದರ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎ.ಆರ್.ಬಾಲರಾಜು ವಿಧಾನಸಭೆ ಚುನಾವಣೆ ಬಳಿಕ ಇಂದಲ್ಲ ನಾಳೆ ಬಿಜೆಪಿ ತೊರೆಯಬಹುದೆಂದು ಊಹೆ ಮಾಡಲಾಗುತ್ತಿತ್ತು. ಆದರೆ ವಿ.ಶ್ರೀನಿವಾಸಪ್ರಸಾದ್ ಅವರ ಸಂಬಂಧಿಕರು, ಬೆಂಬಲಿಗರು ಕಾಂಗ್ರೆಸ್ ಕಡೆ ಹೆಜ್ಜೆ ಹಾಕುವುದನ್ನು ನಿರೀಕ್ಷೆ ಮಾಡಿರಲಿಲ್ಲ. ಈ ಅನಿರೀಕ್ಷಿತ ಬೆಳವಣಿಗೆಯಿಂದ ಪಕ್ಷದ ಇಮೇಜ್‌ಗೆ ಡ್ಯಾಮೇಜ್ ಆಗುವುದರಲ್ಲಿ ಅನುಮಾನವಿಲ್ಲ. ಇದು ಲೋಕಸಭಾ ಚುನಾವಣೆ ಮೇಲೆ ಪರಿಣಾಮ ಬೀರದೆ ಇರುವ ರೀತಿ ನೋಡಿಕೊಳ್ಳಲು ಪಕ್ಷಾಂತರವನ್ನು ಸಹಜ ಪ್ರಕ್ರಿಯೆ ಎನ್ನುವಂತೆ ಬಿಜೆಪಿ ನೋಡುತ್ತಿದೆ.
ಮಾಜಿ ಸಚಿವ ಕೋಟೆ ಎಂ.ಶಿವಣ್ಣ ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಇವರಿಗೆ ಅವಕಾಶ ಕೈ ತಪ್ಪಿದಾಗ ಬಿಜೆಪಿ ಬಿಟ್ಟು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮುಖದಲ್ಲಿ ‘ಕೈ’ ಸೇರ್ಪಡೆಯಾದರು. ಈ ಸಂದರ್ಭದಲ್ಲೂ ಪಕ್ಷಾಂತರವನ್ನು ಸಹಜ ಪ್ರಕ್ರಿಯೆ ಎನ್ನುವಂತೆ ಬಿಜೆಪಿ ನೋಡಿತ್ತು. ಆದರೆ ಕಾಂಗ್ರೆಸ್ ಆಪರೇಷನ್ ಹಸ್ತದ ಮೂಲಕ ಪಕ್ಷಾಂತರದ ವಿಚಾರವನ್ನು ಮುನ್ನಲೆಗೆ ತರುತ್ತಿದೆ.
ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಬರೋರ‌್ಯಾರು?
ಬಿಜೆಪಿ ಬಿಟ್ಟು ಕಾಂಗ್ರೆಸ್‌ಗೆ ಹೋಗುತ್ತಿರುವವರಂತೆಯೇ, ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಬರುವವರೂ ಇದ್ದಾರೆ ಎಂದು ಜಿಲ್ಲಾಧ್ಯಕ್ಷ ಸಿ.ಎಸ್.ನಿರಂಜನ್‌ಕುಮಾರ್ ತಿಳಿಸಿದ್ದಾರೆ.
ರಾಜ್ಯದಲ್ಲಿ ಆಡಳಿತದಲ್ಲಿರುವ ಪಕ್ಷವನ್ನು ಬಿಟ್ಟು ಬರಲು ಹಿಂದೇಟು ಹಾಕುವವರೇ ಹೆಚ್ಚು. ಅಧಿಕಾರದಲ್ಲಿರುವ ಪಕ್ಷಗಳನ್ನು ಸೇರುವ ನಾಯಕರ ಸಂಖ್ಯೆಯೂ ಅಧಿಕವಿದೆ. ಹೀಗಿದ್ದಾಗ ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಬರುವ ನಾಯಕರು ಯಾರು? ಎಂಬ ಪ್ರಶ್ನೆ ಎದುರಾಗುತ್ತದೆ. ಈ ಬಗ್ಗೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೃಷಭೇಂದ್ರಪ್ಪ ‘ವಿಜಯವಾಣಿ’ಯೊಂದಿಗೆ ಮಾತನಾಡಿದ್ದಾರೆ. ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರುವ ಮುಖಂಡರ ವಿರುದ್ಧ ಅದೇ ಪಕ್ಷದಲ್ಲಿ ಅಸಮಾಧಾನ ವ್ಯಕ್ತಪಡಿಸುವವರಿಗೆ ಮುಂದಿನ ದಿನಗಳಲ್ಲಿ ಬಿಜೆಪಿ ಗಾಳ ಹಾಕಲಿದೆ ಎಂದು ತಿಳಿದುಬಂದಿದೆ.
ಇದಕ್ಕೆ ಪೂರಕವಾಗಿ ಪಕ್ಷಾಂತರವೂ ನಡೆಯುತ್ತಿದೆ. ಮೈಸೂರು-ಕೊಡಗು ಮತ್ತು ಚಾಮರಾಜನಗರ ಲೋಕಸಭಾ ಕ್ಷೇತ್ರಗಳನ್ನು ಗೆಲ್ಲಲು ರಣವ್ಯೆಹ ರಚಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ನೇರವಾಗಿ ಬಿಜೆಪಿ ನಾಯಕರನ್ನು ಸಂಪರ್ಕಿಸುತ್ತಿದ್ದಾರೆ ಎನ್ನಲಾಗಿದೆ. ಸಿದ್ದರಾಮಯ್ಯ ಆಹ್ವಾನಕ್ಕೆ ಒಪ್ಪಿ ಪಕ್ಷ ಸೇರುತ್ತಿರುವವರು ಸ್ಥಳೀಯವಾಗಿ ಮತ್ತು ಮೂಲ ಕಾಂಗ್ರೆಸ್‌ನವರ ವಿಶ್ವಾಸವನ್ನೂ ಗಳಿಸಬೇಕು. ಈ ಸಂದರ್ಭದಲ್ಲಿ ಬೇಸರಗೊಳ್ಳುವವರನ್ನು ಬಿಜೆಪಿ ಸೆಳೆಯುವ ತಂತ್ರವೇನಾದರೂ ಮುಂದಿನ ದಿನಗಳಲ್ಲಿ ನಡೆಯುವುದೇ ಎಂದು ಕಾದು ನೋಡಬೇಕಿದೆ.
ಸಿಎಂ ಭೇಟಿ ಸಂದರ್ಭದಲ್ಲಿ ‘ಪಕ್ಷಾಂತರ ಪರ್ವ’:
ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ ಪರ ಪ್ರಚಾರ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ಷೇತ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪಕ್ಷಾಂತರ ಪರ್ವ ನಡೆಯಲಿದೆ.
ಏ.3ರಂದು ಸುನೀಲ್‌ಬೋಸ್ ನಾಮಪತ್ರ ಸಲ್ಲಿಕೆಗೆ ಸಿಎಂ ಸಿದ್ದರಾಮಯ್ಯ ಚಾಮರಾಜನಗರಕ್ಕೆ ಆಗಮಿಸಲಿದ್ದಾರೆ. ಬಳಿಕ ಏ.12ರಂದು ಹನೂರು ಮತ್ತು ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಚಾರಕ್ಕಾಗಿ ಕೊಳ್ಳೇಗಾಲದಲ್ಲಿ ಮಧ್ಯಾಹ್ನ 12 ಗಂಟೆಗೆ ಸಮಾರಂಭ ನಡೆಯಲಿದೆ. ಮಧ್ಯಾಹ್ನ 3 ಗಂಟೆಗೆ ನಂಜನಗೂಡು ಹಾಗೂ ಗುಂಡ್ಲುಪೇಟೆ ಕ್ಷೇತ್ರಗಳಲ್ಲಿ ಪ್ರಚಾರಕ್ಕಾಗಿ ಗುಂಡ್ಲುಪೇಟೆಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಸಂದರ್ಭದಲ್ಲಿ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರುವವರು ಪಕ್ಷದ ಬಾವುಟ ಹಿಡಿಯಲಿದ್ದಾರೆ ಎನ್ನಲಾಗುತ್ತಿದೆ.
ಬಿಜೆಪಿ ಅಭ್ಯರ್ಥಿ ಎಸ್.ಬಾಲರಾಜ್ ನಾಮಪತ್ರ ಸಲ್ಲಿಕೆಗೆ ಸಂಸದ ವಿ.ಶ್ರೀನಿವಾಸಪ್ರಸಾದ್ ಅವರನ್ನು ಕರೆತರಲು ರಾಜ್ಯನಾಯಕರು ಪ್ರಯತ್ನಿಸುತ್ತಿದ್ದಾರೆ. ಚುನಾವಣೆ ಹತ್ತಿರದಲ್ಲಿ ಪಕ್ಷಾಂತರ ಸಹಜ. ಕಾಂಗ್ರೆಸ್‌ನಿಂದಲೂ ನಮ್ಮ ಪಕ್ಷಕ್ಕೆ ಕೆಲವರು ಬರಲಿದ್ದಾರೆ.ಣೀಶ್, ಚಾಮರಾಜಗರ ಲೋಕಸಭಾ ಬಿಜೆಪಿ ಚುನಾವಣೆ ಪ್ರಭಾರಿ ನಮ್ಮ ಪಕ್ಷದಲ್ಲಿ ಟಿಕೆಟ್ ವಂಚಿತರ ಅಸಮಾಧಾನವಿಲ್ಲ. ನಮ್ಮಲ್ಲಿ ಯಾರೂ ಪಕ್ಷ ಬಿಟ್ಟು ಹೋಗುತ್ತೇನೆ ಎನ್ನುವವರಿಲ್ಲ. ಬಿಜೆಪಿಯಿಂದ ಯಾರೇ ಬಂದರೂ ಎಲ್ಲರಿಗೂ ತಿಳಿಸಿ, ಚರ್ಚೆ ಮಾಡಿಯೇ ಪಕ್ಷ ಸೇರ್ಪಡೆ ಮಾಡಿಕೊಳ್ಳುವುದರಿಂದ ಅಸಮಾಧಾನ ಸೃಷ್ಟಿಯಾಗಲು ಸಾಧ್ಯವಿಲ್ಲ.ಪಿ.ಮರಿಸ್ವಾಮಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷಮತ್ತು ಕಾಡಾ ಅಧ್ಯಕ್ಷ