ಜಿಲ್ಲೆ

ಜನತಾ ಕಾಲನಿಯಲ್ಲಿ ಆಶುಚಿತ್ವ ತಾಂಡವ

ಎ.ಎಸ್.ಮಣಿಕಂಠ

ಗುಂಡ್ಲುಪೇಟೆ: ಪುರಸಭೆಯ ನಿರ್ಲಕ್ಷ್ಯದಿಂದ ಬಡಾವಣೆಯು ಗಬ್ಬುನಾರುತ್ತಿದ್ದು, ಜನತೆ ಅನಾರೋಗ್ಯಕ್ಕೊಳಗಾಗುವಂತಾಗಿದೆ ಎಂದು ಪಟ್ಟಣದ ಜನತಾ ಕಾಲೋನಿಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪುರಸಭೆಯ 16ನೇ ವಾರ್ಡಿಗೆ ಸೇರಿದ ಜನತಾ ಕಾಲೋನಿಲ್ಲಿ 30 ವರ್ಷಗಳ ಹಿಂದೆ ನಿರ್ಮಿಸಿದ ಚರಂಡಿಗಳು ಸಂಪೂರ್ಣ ನಿರುಪಯುಕ್ತವಾಗಿವೆ. ಚರಂಡಿ ನಿರ್ಮಿಸಲು ಬಳಸಿದ್ದ ಕಲ್ಲುಗಳು ಕುಸಿದು ಕೊಳಚೆ ನೀರು ಮಡುಗಟ್ಟಿ ನಿಲ್ಲುತ್ತಿದೆ. ಪೌರಕಾರ್ಮಿಕರು ಈ ಬಡಾವಣೆಯಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳದ ಪರಿಣಾಮ ಪ್ಲಾಸ್ಟಿಕ್ ಮುಂತಾದ ಕಸ ಚರಂಡಿಗೆ ಸೇರುತ್ತಿದೆ. ಅಲ್ಲದೆ ಇತ್ತೀಚೆಗೆ ಮನೆಗಳಿಗೆ ಜಲಜೀವನ್ ಮಿಷನ್ ಯೋಜನೆಯಲ್ಲಿ ಕುಡಿಯುವ ನೀರು ಸಂಪರ್ಕ ಕಲ್ಪಿಸುವ ಪೈಪ್‌ಲೈನ್ ಅಳವಡಿಸುವ ಸಂದರ್ಭದಲ್ಲಿ ಚರಂಡಿಗಳಿಗೆ ಮಣ್ಣು ತುಂಬಿಕೊಂಡಿದೆ. ಇದರಿಂದ ಮನೆಗಳಿಂದ ಹೊರಬಿಟ್ಟ ನೀರು ಚರಂಡಿಯಲ್ಲಿಯೇ ನಿಂತು ಗಬ್ಬುನಾರುತ್ತಿದೆ. ಈ ಬಡಾವಣೆಯಲ್ಲಿ ಹಾದುಹೋಗಿರುವ ಯುಜಿಡಿಗಳ ಕೊಳಚೆ ನೀರು ಚರಂಡಿಗೆ ಸೇರುತ್ತಿದೆ. ಇದರಿಂದ ಇಡೀ ಬಡಾವಣೆಯಲ್ಲಿ ಅಶುಚಿತ್ವ ತಾಂಡವವಾಡುತ್ತಿದೆ.

ಮಡುಗಟ್ಟಿದ ಕೊಳಚೆ ನೀರಿನಲ್ಲಿ ಹೊರಳಾಡುವ ಹಂದಿಗಳು ಕಾಲೋನಿಯಲ್ಲಿ ಸಂಚರಿಸುವುದರಿಂದ ನಿವಾಸಿಗಳು ಸಾಂಕ್ರಾಮಿಕ ರೋಗಕ್ಕೆ ತುತ್ತಾಗುವ ಭೀತಿಯಲ್ಲಿಯೇ ಬದುಕುತ್ತಿದ್ದಾರೆ. ಮಡುಗಟ್ಟಿದ ಕೊಳಚೆ ನೀರಿನಲ್ಲಿ ಸೊಳ್ಳೆಗಳು ತಮ್ಮ ಸಂತಾನ ವೃದ್ದಿಸಿಕೊಳ್ಳುತ್ತಿದ್ದು ಬಡಾವಣೆಯ ಜನತೆಯ ರೋಗರುಜಿನಗಳಿಗೆ ಕಾರಣವಾಗುತ್ತಿದೆ. ಆದ್ದರಿಂದ ಇನ್ನಾದರೂ ಪುರಸಭೆಯವರು ಕಾಲೋನಿಗೆ ಅಗತ್ಯವಾದ ಮೂಲಸೌಕರ್ಯಗಳನ್ನು ಕಲ್ಪಿಸಲು ಮುಂದಾಗಬೇಕು ಎಂದು ನಿವಾಸಿಗಳು ಒತ್ತಾಯಿಸಿದ್ದಾರೆ.

ನಿವಾಸಿಗಳು ಅಧಿಕಾರಿಗಳನ್ನು ಒತ್ತಾಯಿಸಿದರೆ ಮಾತ್ರ ತಿಂಗಳಿಗೊಮ್ಮೆ ಕಸ ಎತ್ತಿಸುತ್ತಿದ್ದಾರೆ. ಆದರೆ ಚರಂಡಿಗಳನ್ನು ರಾಜಕಾಲುವೆಗೆ ಸಂಪರ್ಕಿಸದ ಪರಿಣಾಮ ತಗ್ಗು ಪ್ರದೇಶಗಳಲ್ಲಿ ಕೊಳಚೆನೀರು ಮಡುಗಟ್ಟಿ ನಿಲ್ಲುತ್ತಿದ್ದು, ಕೊಳಚೆ ಪ್ರದೇಶವಾಗಿ ಬದಲಾಗುತ್ತಿದೆ. ದುರ್ವಾಸನೆ ಹಾಗೂ ಸೊಳ್ಳೆಗಳ ಕಾಟದಿಂದ ಬದುಕುವುದು ಪ್ರಯಾಸವಾಗಿದೆ. ಬಡಾವಣೆಯ ಒಂದು ಮನೆಯ ಮೂವರು ಡೆಂಘೆ ಜ್ವರಕ್ಕೆ ತುತ್ತಾಗಿದ್ದಾರೆ. ಇದು ಇಡೀ ಪಟ್ಟಣಕ್ಕೆ ವ್ಯಾಪಿಸುವ ಮೊದಲು ಬಡಾವಣೆಯಲ್ಲಿ ಸ್ವಚ್ಛತೆ ಕೈಗೊಳ್ಳಲಿ.-ಕೋಮಲ, ತಾಪಂ ಮಾಜಿ ಸದಸ್ಯೆ, ಜನತಾ ಕಾಲೋನಿ ನಿವಾಸಿ ಬಡಾವಣೆಯ ನಿವಾಸಿಗಳು ಕಸ ಹಾಗೂ ತ್ಯಾಜ್ಯಗಳನ್ನು ಚರಂಡಿಗೆ ಸುರಿಯುತ್ತಿದ್ದಾರೆ. ಎಕ್ಸ್‌ಪ್ರೆಸ್ ಕುಡಿಯುವ ನೀರು ಪೈಪ್‌ಲೈನ್ ಕಾಮಗಾರಿ ಸಂದರ್ಭದಲ್ಲಿ ಚರಂಡಿಗಳಿಗೆ ಮಣ್ಣು ತುಂಬಿಕೊಂಡಿದೆ. ಈ ಬಗ್ಗೆ ಜನರಿಗೆ ಜಾಗೃತಿ ಮೂಡಿಸಿ ಚರಂಡಿಗಳ ಹೂಳೆತ್ತಿಸಲಾಗುವುದು. ಪ್ರತಿ ವಾರ್ಡಿಗೆ ಒಬ್ಬ ಪೌರ ಕಾರ್ಮಿಕರನ್ನು ಉಸ್ತುವಾರಿಯಾಗಿ ನಿಯೋಜಿಸಿ ಶುಚಿತ್ವ ನಿರ್ವಹಣೆಗೆ ಕ್ರಮಕೈಗೊಳ್ಳಲಾಗುವುದು.-ವಸಂತಕುಮಾರಿ, ಪುರಸಭೆ ಮುಖ್ಯಾಧಿಕಾರಿ.