ಜಿಲ್ಲೆ

ಮಾಜಿ ಸಂಸದ ವಿ.ಶ್ರೀನಿವಾಸ್ ಅಳಿಯ ಕಾಂಗ್ರೆಸ್‌ನತ್ತಾ!

ಎ.ಎಸ್.ಮಣಿಕಂಠ

ಚಾಮರಾಜನಗರ: ಪ್ರಬಲ ದಲಿತ ನಾಯಕ, ಮಾಜಿ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ತಂಗಿಯ ಮಗ ಧೀರಜ್ ಪ್ರಸಾದ್ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಶನಿವಾರ ಕಾಂಗ್ರೆಸ್ ಸೇರುವ ಮೂಲಕ ಮೈಸೂರು ಮತ್ತು ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಪ್ರಸಾದ್ ಬೆಂಬಲಿಗರು ಕಾಂಗ್ರೆಸ್‌ನತ್ತಾ ಮುಖಮಾಡಲಿದ್ದಾರೆಯೇ ಎಂಬ ಮಾತುಗಳು ಜೋರಾಗಿದೆ.

ಮೈಸೂರು ಮತ್ತು ಚಾಮರಾಜನಗರ ಲೋಕಸಭಾ ಕ್ಷೇತ್ರಗಳನ್ನು ಶತಾಯಗತಾಯ ಗೆದ್ದೇ ಗೆಲ್ಲಬೇಕು ಎಂದು ಪಣತೊಟ್ಟಿರುವಂತೆ ನಡೆದುಕೊಳ್ಳುತ್ತಿರುವ ಕಾಂಗ್ರೆಸ್ ನಾಯಕರು ನಿತ್ಯವೂ ರಣತಂತ್ರವನ್ನು ಎಣೆಯುತ್ತಿದ್ದಾರೆ. ಒಂದು ಕಡೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಮಣಿಸುವ ದೃಷ್ಟಿಯಲ್ಲಿ ಬಿಜೆಪಿ, ಜೆಡಿಎಸ್ ಒಂದಾಗಿ ಕೆಲಸ ಮಾಡಿತ್ತಿದ್ದಾರೆ. ಆದರೆ ಈ ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮುಖಂಡರನ್ನು ಕಾಂಗ್ರೆಸ್ ಪಕ್ಷಕ್ಕೆ ಸೆಳೆಯುವ ಪ್ರಯತ್ನಗಳನ್ನು ಕಾಂಗ್ರೆಸ್ ಮುಖಂಡರು ನಿರಂತರವಾಗಿ ಮಾಡುತ್ತಿದ್ದಾರೆ. ಈ ಪ್ರಯತ್ನವಾಗಿ ಮಾಜಿ ಸಂಸದ ವಿ.ಶ್ರೀನಿವಾಸ್ ಅವರ ತಂಗಿಯ ಮಗ ಧೀರಜ್ ಪ್ರಸಾದ್ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ.

ಈ ಹಿಂದೆ ಧೀರಜ್ ಪ್ರಸಾದ್ ಅವರು ಬಿಜೆಪಿಯ ಯುವಮೋರ್ಚಾ ರಾಜ್ಯ ಉಪಾಧ್ಯಕ್ಷರಾಗಿದ್ದರು. ಇತ್ತೀಚೆಗೆ ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ, ಸಚಿವ ಕೆ.ವೆಂಕಟೇಶ್, ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ, ಮೈಸೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಎಂ.ಲಕ್ಷ್ಮಣ್ ಹಾಗೂ ಹಲವಾರು ಕಾಂಗ್ರೆಸ್ ಮುಖಂಡರು ವಿ.ಶ್ರೀನಿವಾಸ್ ಪ್ರಸಾದ್ ಅವರ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದರು. ಚಾಮರಾಜನಗರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ ಅವರು ಕೂಡ ಭೇಟಿ ಮಾಡಿ ಪ್ರಸಾದ್ ಆಶೀರ್ವಾದ ಪಡೆದುಕೊಂಡಿದ್ದರು. ಇದರ ಬೆನ್ನಲ್ಲೇ ಪ್ರಸಾದ್ ತಂಗಿ ಮಗ ಕಾಂಗ್ರೆಸ್ ಸೇರ್ಪಡೆಗೊಂಡಿರುವುದು ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಮೈಸೂರು ಮತ್ತು ಚಾ.ನಗರ ಲೋಕಸಭಾ ಕ್ಷೇತ್ರದಲ್ಲಿ ಶ್ರೀನಿವಾಸ್ ಪ್ರಸಾದ್ ಅವರ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದು, ಅವರೆಲ್ಲರೂ ನಿಧಾನವಾಗಿ ಕಾಂಗ್ರೆಸ್‌ನತ್ತಾ ಮುಖ ಮಾಡುತ್ತಾರಾ ಎಂಬ ಮಾತುಗಳು ಸಾರ್ವಜನಿಕ ವಲದಲ್ಲಿ ಕೇಳಿಬರುತ್ತಿದೆ.