ಜಿಲ್ಲೆ

ಕಳವಳಕಾರಿ ಬಿಕ್ಕಟ್ಟಾದ ಸಾಮೂಹಿಕ ಆತ್ಮಹತ್ಯೆ

ಕಿರಣ್ ಮಾದರಹಳ್ಳಿ

ಚಾಮರಾಜನಗರ: ಹಿಂದುಳಿದ ಜಿಲ್ಲೆ ಎಂದೇ ಕರೆಸಿಕೊಳ್ಳುವ ಚಾಮರಾಜನಗರದಲ್ಲಿ ಸಾಮೂಹಿಕ ಆತ್ಮಹತ್ಯೆ ಪ್ರಕರಣಗಳು ಮರುಕಳಿಸುವ ಮೂಲಕ ಕಳವಳಕಾರಿ ಬಿಕ್ಕಟ್ಟು ಸೃಷ್ಟಿಯಾಗಿದೆ. ಮಕ್ಕಳ ಕೊರಳಿಗೆ ನೇಣು ಬಿಗಿದು ಸಾಯಿಸಿ, ಬಳಿಕ ತಾವೂ ಸಾಯುತ್ತಿರುವ ಹೆತ್ತವರ ಮಾನಸಿಕ ಸ್ಥಿತಿ ದಿಗ್ಭ್ರಮೆ ಮೂಡಿಸುತ್ತಿದೆ.

ಕೋವಿಡ್ ಸಂದರ್ಭದಲ್ಲಿ ಸೋಂಕು ತಗುಲಿದ್ದಕ್ಕೆ ಅಸ್ಪೃಶ್ಯ ಭಾವನೆಯಿಂದ ಮನನೊಂದು ಎಚ್.ಮೂಕಹಳ್ಳಿಯ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡರು. ಮಹದೇವಪ್ಪ(47), ಮಂಗಳಮ್ಮ(40) ಜತೆಗೆ ಮಕ್ಕಳಾದ ಜ್ಯೋತಿ(14), ಶ್ರುತಿಗೂ(12) ನೇಣು ಹಾಕಿ ಸಾವನ್ನಪ್ಪಿದ್ದರು. ಇತ್ತೀಚೆಗಷ್ಟೇ ತಾಲೂಕಿನ ಬೇಡರಪುರದಲ್ಲಿ ಆಸ್ತಿ ವಿವಾದಕ್ಕೆ ಬೇಸತ್ತು ಮಹದೇವಸ್ವಾಮಿ(48), ಸವಿತಾ(40) ಮತ್ತು ಸಿಂಚನಾ(13) ಆತ್ಮಹತ್ಯೆ ಮಾಡಿಕೊಂಡರು. ಮೊದಲು ಸವಿತಾ ನೇಣು ಹಾಕಿಕೊಂಡಿದ್ದರು. ಇದನ್ನು ನೋಡಿದ ಮಹದೇವಸ್ವಾಮಿ ತನ್ನ ಎರಡನೇ ಮಗಳು ಸಿಂಚನಾಗೆ ನೇಣು ಹಾಕಿ, ಬಳಿಕ ತಾನೂ ಕೊರಳಿಗೆ ಹಗ್ಗ ಬಿಗಿದುಕೊಂಡು ಮೃತಪಟ್ಟರು. ಇವರ ಮೊದಲ ಮಗಳು ಸಹನಾ ಈಗ ತಂದೆ, ತಾಯಿ, ತಂಗಿಯನ್ನು ಕಳೆದುಕೊಂಡು ಅನಾಥಯಾತನೆ ಅನುಭವಿಸುತ್ತಿದ್ದಾಳೆ. ಪಿಯುಸಿ ಓದುತ್ತಿರುವ ಸಹನಾ ಅಜ್ಜಿ, ತಾತನ ಆಶ್ರಯದಲ್ಲಿ ಇದ್ದಾಳೆ.

ಈ ಎರಡು ಸಾಮೂಹಿಕ ಆತ್ಮಹತ್ಯೆಗಳು ಮಾತ್ರ ದಿಗಿಲು ಹುಟ್ಟು ಹಾಕಿಲ್ಲ. ಜಿಲ್ಲೆಯಲ್ಲಿ ಕಳೆದ 6 ತಿಂಗಳಲ್ಲಿ 55 ಆತ್ಮಹತ್ಯೆಗಳು ನಡೆದಿವೆ. ಜಿಲ್ಲಾ ಪೊಲೀಸ್ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, 2023ರ ಜನವರಿಯಿಂದ ಈವರೆಗೆ 28 ಜನ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 27 ಜನ ವಿಷ ಕುಡಿದು ಸಾವನ್ನಪ್ಪಿದ್ದಾರೆ. ಕಳೆದ ವರ್ಷ 51 ಜನ ನೇಣು, 58 ಜನ ವಿಷಯ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದರು.

ಇದಕ್ಕೆ ಪೂರಕವಾದ ಅಂಶವೊಂದನ್ನು ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗ ತಿಳಿಸಿದೆ. ಆಸ್ಪತ್ರೆಗೆ ಚಿಕಿತ್ಸೆ ಪಡೆಯಲು ಬರುವ ಶೇ.100ರಷ್ಟು ಜನರಲ್ಲಿ ಶೇ.80ರಷ್ಟು ಜನರು ಮಾನಸಿಕ ಕಾಯಿಲೆಗಳಿಂದ ಬಳಲುತ್ತಿರುತ್ತಾರೆ. ಇವರಲ್ಲಿ ಶೇ.20ರಷ್ಟು ಜನರು ಮಾತ್ರ ಚಿಕಿತ್ಸೆ ಪಡೆದರೆ, ಉಳಿದವರು ಹಾಗೇ ಇದ್ದುಬಿಡುತ್ತಾರೆ. ತಮ್ಮ ಸಮಸ್ಯೆಯನ್ನು ಗುರುತಿಸಿ ವೈದ್ಯರ ಬಳಿ ಹೇಳಿಕೊಳ್ಳುವಲ್ಲಿ ವಿಲರಾಗುತ್ತಾರೆ.

ಆರ್ಥಿಕವಾಗಿ ಒತ್ತಡದಲ್ಲಿರುವವರು, ಜೀವನದಲ್ಲಿ ಜಿಗುಪ್ಸೆಗೊಂಡವರು, ಅನಾರೋಗ್ಯಪೀಡಿತರು, ಅವಮಾನಕ್ಕೆ ಒಳಗಾದವರು ಮತ್ತು ಅವಮಾನಕ್ಕೊಳಗಾಗುವ ಭಯ, ಖಿನ್ನತೆ ಇತರ ಕಾರಣಗಳಿಂದ ನಡೆಯುತ್ತಿರುವ ಆತಂಕಕಾರಿ ಆತ್ಮಹತ್ಯೆಗಳು ಸಮಾಜದಲ್ಲಿ ಸೃಷ್ಟಿಯಾಗಿರುವ ಬಿಕ್ಕಟ್ಟಿನ ಕಡೆಗೂ ಬೊಟ್ಟು ಮಾಡುತ್ತಿವೆ. ಜಿಲ್ಲೆಯ ಆರೋಗ್ಯ ವ್ಯವಸ್ಥೆ ಸುಧಾರಣೆ ಕಾಣುವ ಹಂತದಲ್ಲೇ ಇದೆ. ಅನಕ್ಷರಸ್ಥರು ಮಾನಸಿಕವಾಗಿ ಗಟ್ಟಿಯಾಗಿದ್ದಾರೆ. ಸುಶಿಕ್ಷಿತರೇ ದುರ್ಬಲ ಮನಸ್ಥಿತಿಯಿಂದ ಬಳಲುತ್ತಿದ್ದಾರೆ. ಕೈಗಾರಿಕೆ, ಪ್ರವಾಸೋದ್ಯಮಗಳು ಉದ್ಯೋಗ ಸೃಷ್ಟಿಯಲ್ಲಿ ಆಮೆ ನಡಿಗೆ ಅನುಸರಿಸಿವೆ. ನಿರುದ್ಯೋಗಿಗಳು ಆರ್ಥಿಕ ಒತ್ತಡಕ್ಕೆ ಸಿಲುಕಿದ್ದಾರೆ. ಉದ್ಯೋಗಸ್ಥರಿಗೆ ಸಿಗುವ ಸಂಬಳ ಬೆಲೆ ಏರಿಕೆಯ ಬಿಸಿಗೆ ಕರುಗುತ್ತಿದೆ. ಬಯಕೆಗಳ ಈಡೇರಿಕೆಗಾಗಿ ಸಾಲದ ಮೊರೆ ಹೋದವರು ಇಎಂಐ ಚಕ್ರವ್ಯೆಹಕ್ಕೆ ಸಿಲುಕಿದ್ದಾರೆ. ಜೀವನದ ಮೌಲ್ಯ ಅರಿಯದೆ ಕೌಟುಂಬಿಕ ಕಲಹಗಳು ನಡೆಯುತ್ತಿವೆ. ಅಕ್ರಮ ಸಂಬಂಧದ ಹಗ್ಗ ಹಾವಾಗುತ್ತಿದೆ. ದೈಹಿಕ ಆರೋಗ್ಯದ ಬಗ್ಗೆಯಷ್ಟೇ ಗಮನಹರಿಸಿ ಮಾನಸಿಕ ಆರೋಗ್ಯವನ್ನು ಕಡೆಗಣಿಸುತ್ತಿರುವವರಿಗೆ ಸಣ್ಣ ಸಮಸ್ಯೆಗಳೂ ದೊಡ್ಡ ಸವಾಲುಗಳಾಗಿ ಎದುರು ನಿಲ್ಲುತ್ತಿವೆ. ದುರ್ಬಲ ಮನಸ್ಥಿತಿಯವರು ಆತ್ಮಹತ್ಯೆಯ ದಾರಿ ಹಿಡಿಯುತ್ತಿದ್ದಾರೆ.

ಮನಸ್ಸು ಬದಲಿಸಿದವರು 145 ಜನ:
ಮಾನಸಿಕ ಆರೋಗ್ಯ ಸಮಸ್ಯೆ ಅನುಭವಿಸುತ್ತಿರುವ 145 ಜನರು ಟೆಲಿ ಮನಸ್ ಮೂಲಕ ಮನಸ್ಸು ಬದಲಾಯಿಸಿಕೊಂಡಿದ್ದಾರೆ. ಜಿಲ್ಲೆಯ 145 ಜನರು ರಾಷ್ಟ್ರೀಯ ಟೆಲಿ ಮಾನಸಿಕ ಆರೋಗ್ಯ ಕಾರ್ಯಕ್ರಮದ ಟೆಲಿ ಮನಸ್ ಶುಲ್ಕ ರಹಿತ ದೂರವಾಣಿ: 14416ಗೆ ಕರೆ ಮಾಡಿ ವೈದ್ಯರೊಂದಿಗೆ ಮಾತನಾಡಿ ಮನಸ್ಸಿನ ದುಗುಡಗಳನ್ನು ಕಡಿಮೆ ಮಾಡಿಕೊಂಡಿದ್ದಾರೆ. ವ್ಯಥೆಯಲ್ಲಿ ಇರುವವರು, ಪರೀಕ್ಷೆ ಒತ್ತಡ, ಕೌಟುಂಬಿ ಸಮಸ್ಯೆ, ಆತ್ಮಹತ್ಯೆ ಆಲೋಚನೆ, ಕುಡಿತದ ಚಟ, ಆರ್ಥಿಕ ಒತ್ತಡ ಇತರ ಮಾನಸಿಕ ತೊಂದರೆಗಳು ಇರುವವರಿಗೆ ಸಲಹೆಗಳು ಸಿಕ್ಕಿವೆ.

25 ಸಾವಿರಕ್ಕೆ ಒಬ್ಬ ಸೈಕ್ಯಾಟ್ರಿಸ್ಟ್:
25 ಸಾವಿರಕ್ಕೆ ಒಬ್ಬ ಸೈಕ್ಯಾಟ್ರಿಸ್ಟ್ ಇರಬೇಕು. ಜಿಲ್ಲಾಸ್ಪತ್ರೆಯಲ್ಲಿ ಒಬ್ಬರು ಮನೋರೋಗ ತಜ್ಞ ವೈದ್ಯರಿದ್ದಾರೆ. ರಾಷ್ಟ್ರೀಯ ಮಾನಸಿಕ ಆರೋಗ್ಯ ಕಾರ್ಯಕ್ರಮದ ಮನೋಚೈತನ್ಯ ಕ್ಲಿನಿಕ್‌ನಲ್ಲಿ ಕಳೆದ ಮೂರು ತಿಂಗಳ ಹಿಂದಷ್ಟೇ ಒಬ್ಬರು ವೈದ್ಯರು ಬಂದಿದ್ದಾರೆ.
ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗದ ತಂಡ ಜಿಲ್ಲಾಸ್ಪತ್ರೆಯಲ್ಲಿ ಪ್ರತಿದಿನ, ಕೊಳ್ಳೇಗಾಲ ಆಸ್ಪತ್ರೆಯಲ್ಲಿ ಮೊದಲ ಮತ್ತು ಮೂರನೇ ಮಂಗಳವಾರ, ಯಳಂದೂರಿನಲ್ಲಿ ಎರಡು ಮತ್ತು ನಾಲ್ಕನೇ ಶುಕ್ರವಾರ, ಗುಂಡ್ಲುಪೇಟೆ ಆಸ್ಪತ್ರೆಯಲ್ಲಿ ಮೊದಲ ಮತ್ತು ಮೂರನೇ ಶುಕ್ರವಾರ, ಹನೂರು ಆಸ್ಪತ್ರೆಯಲ್ಲಿ ಎರಡು ಮತ್ತು ನಾಲ್ಕನೇ ಶುಕ್ರವಾರ ಚಿಕಿತ್ಸೆ ನೀಡುತ್ತಿದೆ.

ಜನರಿಗೆ ಮಾನಸಿಕ ಆರೋಗ್ಯದ ತೊಂದರೆ ಕಂಡುಬಂದರೆ ತಕ್ಷಣ ವೈದ್ಯರನ್ನು ಭೇಟಿ ಮಾಡಬೇಕು, ನಿರ್ಲಕ್ಷ್ಯ ಮಾಡಬಾರದು. ದುಡುಕು ನಿರ್ಧಾರಗಳನ್ನು ತೆಗೆದುಕೊಳ್ಳುವ ಬದಲು ತಾಳ್ಮೆಯಿಂದ ಇರಬೇಕು. ಧ್ಯಾನ, ಯೋಗ ಮಾನಸಿಕ ಆರೋಗ್ಯಕ್ಕೆ ಸಹಕಾರಿ. ಡಾ.ಚಂದ್ರಶೇಖರ್, ಜಿಲ್ಲಾ ಮಾನಸಿಕ ಆರೋಗ್ಯ ಅಧಿಕಾರಿ, ಚಾಮರಾಜನಗರ