ಚಾಮರಾಜನಗರ: ವಿದ್ಯಾರ್ಥಿ ಜೀವನ ಉತ್ತಮವಾಗಿ ರೂಪಿಸುವಲ್ಲಿ ಶಿಕ್ಷಕರ ಪಾತ್ರ ದೊಡ್ಡದು. ಶಿಕ್ಷಕ ವಿದ್ಯಾರ್ಥಿ ಬದುಕಿನ ದಾರಿದೀಪ ಎಂದು ಶ್ರೀರಾಮಚಂದ್ರ ವಿದ್ಯಾಸಂಸ್ಥೆ ಅಧ್ಯಕ್ಷ ಎಂ.ಎಸ್.ಮಾದಯ್ಯ ಬಣ್ಣಿಸಿದರು.
ನಗರದ ಶ್ರೀರಾಮಚಂದ್ರ ವಿದ್ಯಾಸಂಸ್ಥೆಯಲ್ಲಿ ಮಂಗಳವಾರ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದ ಅಭಿವೃದ್ಧಿಗೆ ಶಿಕ್ಷಣ ಬಹಳ ಮುಖ್ಯ. ಪ್ರತಿಯೊಬ್ಬರೂ ಶಿಕ್ಷಣ ಪಡೆಯಬೇಕು ಎಂಬುದು ಅಂಬೇಡ್ಕರ್ ಆಶಯವಾಗಿತ್ತು. ಡಾ.ಎಸ್.ರಾಧಾಕೃಷ್ಣನ್ ಕೂಡ ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಿದ್ದರು. ಹೀಗಾಗಿ ಅವರ ಜನ್ಮದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದು ಹೇಳಿದರು.
ಸಂಸ್ಥೆಯ ಕಾರ್ಯದರ್ಶಿ ಎಂ.ರುದ್ರಮೂರ್ತಿ ಮಾತನಾಡಿ, ಶಿಕ್ಷಣದ ಮಹತ್ವ ತಿಳಿಸಿದ್ದ ಸಾವಿತ್ರಿಬಾಯಿ ಫುಲೆ ನಮ್ಮ ದೇಶದ ಮೊದಲ ಶಿಕ್ಷಕಿ. ವಿದ್ಯೆ ಪ್ರತಿಯೊಬ್ಬರ ಹಕ್ಕು ಎಂದು ಪ್ರತಿಪಾದಿಸಿದ್ದರು. ಶಿಕ್ಷಣದಿಂದ ವಂಚಿತರಾದವರಿಗೆ ಶಿಕ್ಷಣ ನೀಡಿದ ಮೊದಲ ಮಹಿಳಾ ಶಿಕ್ಷಕಿ ಎಂದು ಹೇಳಿದರು.
ಸಂಸ್ಥೆಯ ಸದಸ್ಯ ಬಿ.ಮಹದೇವಯ್ಯ, ಶ್ರೀ ರಾಮಚಂದ್ರ ಪ್ರೌಢಶಾಲೆ ಮುಖ್ಯಶಿಕ್ಷಕಿ ರತ್ನಮ್ಮ, ದೈಹಿಕ ಶಿಕ್ಷಣ ಶಿಕ್ಷಕ ರಂಗಸ್ವಾಮಿ, ಶಿಕ್ಷಕರಾದ ವೀರಣ್ಣ, ನಾಗರಾಜು, ಮಹೇಶ್, ಯಶ್‌ಪಾಲ್ ಮತ್ತು ಮಂಜುಳಾ, ಪರಶಿವಮೂರ್ತಿ ಇತರರು ಭಾಗವಹಿಸಿದ್ದರು.