ಚಾಮರಾಜನಗರ: ವಿಶ್ವ ರೈತಚೇತನ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ ಹೋರಾಟ ನಮಗೆಲ್ಲಾ ಆದರ್ಶವಾಗಿದೆ ಎಂದು ಕೆಆರ್‌ಐಡಿಎಲ್ ಅಧ್ಯಕ್ಷ ಎಂ.ರುದ್ರೇಶ್ ಹೇಳಿದರು.
ನಗರದ ಪ್ರಗತಿ ನಗರದಲ್ಲಿರುವ ರುದ್ರೇಶ್ ಅವರ ನೂತನ ಗೃಹದಲ್ಲಿ ಸೋಮವಾರ ಆಯೋಜಿಸಿದ್ದ ರೈತ ನಾಯಕ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ನಂಜುಂಡಸ್ವಾಮಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು. ಪ್ರೊ.ಎಂ.ಡಿ.ನಂಜುಂಡಸ್ವಾಮಿ ಜನ್ಮದಿನವಾಗಿರುವುದರಿಂದ ವಿಶೇಷವಾಗಿ ಚಾಮರಾಜನಗರದಲ್ಲಿ ಒಂದು ರಸ್ತೆಗೆ ಹೆಸರು ನಾಮಕರಣ ಮಾಡುತ್ತಿರುವುದು ತುಂಬಾ ಖುಷಿ ತರುವ ವಿಚಾರವಾಗಿದೆ ಎಂದರು.
ನಂಜುಂಡಸ್ವಾಮಿ ಅವರ ಮನೆಗೂ ನಮ್ಮ ಮನೆಗೂ 5 ಕಿಮೀ ಅಂತರ ಇತ್ತು. ಅವರ ಹೋರಾಟಕ್ಕೆ ಬರುವ ರೈತರನ್ನು ಯಾವಾಗಲೂ ನೋಡುತ್ತಿದ್ದೇವೆ. ಅವರ ಪ್ರೇರಣೆ, ಹೋರಾಟ ನಮಗೆಲ್ಲಾ ಆದರ್ಶವಾಗಿದೆ. ಮುಂದಿನ ದಿನಗಳಲ್ಲಿ ಅವರ ಹೆಸರು ಅಜರಾಮರವಾಗಿ ಬೆಳೆಯಲಿ. ಇಂತಹ ಮಹಾನ್ ವ್ಯಕ್ತಿಗಳ ನೆನಪಲ್ಲಿ ನಾವೆಲ್ಲರೂ ಹೋರಾಟ ಮಾಡೋಣ ಎಂದರು. ನಾವು ರೈತರ ಮಕ್ಕಳಾಗಿ ರೈತ ಪರವಾಗಿ ನಾವೆಲ್ಲ ನಂಜುಂಡಸ್ವಾಮಿ ಅವರಿಗೆ ಗೌರವ ಸಲ್ಲಿಸಿ ಇದೊಂದು ಕ್ಷೇತ್ರದಲ್ಲಿ ಅವರ ಸ್ಮರಣೆ ಮಾಡುವುದಕ್ಕೆ ನಮಗೆ ಒಂದು ಸಮಯ ಸಿಕ್ಕಿದೆ ಎಂದರು. ನಗರಸಭಾ ಮಾಜಿ ಸದಸ್ಯ ಬಸವರಾಜು, ಮುಖಂಡರಾದ ಮೂಡ್ಲುಪುರ ನಂದೀಶ್, ಶಿವರಾಜ್ ಸಿದ್ದಯ್ಯನಪುರ, ಮಂಜು, ಮೋಹನ್ ಇತರರು ಹಾಜರಿದ್ದರು.