ಜಿಲ್ಲೆ

ಪತ್ರಿಕಾ ವಿತರಕರ ಅಭಿವೃದ್ಧಿಗೂ ಆದ್ಯತೆ ನೀಡಿ

ಕಿರಣ್ ಮಾದರಹಳ್ಳಿ

ಚಾಮರಾಜನಗರ: ಗ್ಯಾರಂಟಿ ಯೋಜನೆಗಳ ಮೂಲಕ ಬಡವರು, ಮಧ್ಯಮ ವರ್ಗದವರ ವಿಶ್ವಾಸ ಗಳಿಸಿರುವ ರಾಜ್ಯ ಸರ್ಕಾರ ಶ್ರಮ ಜೀವಿಗಳಾದ ಪತ್ರಿಕಾ ವಿತರಕರ ಅಭಿವೃದ್ಧಿಗೂ ಪ್ರಯತ್ನಿಸಬೇಕಿದೆ.

ಸೆ.4 ಪತ್ರಿಕಾ ವಿತರಕರ ದಿನ. ಚಳಿ, ಮಳೆ ಲೆಕ್ಕಿಸದೆ ಅವಿರತವಾಗಿ ದುಡಿಯುತ್ತಿರುವ ಈ ಕಾಯಕ ಜೀವಿಗಳನ್ನು ನೆನೆಯುವ ದಿನವಾಗಿದೆ. ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವ ಮೂಲಕ ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ಸೌಲಭ್ಯ ದೊರಕಿಸುವ ಕಾರ್ಯ ನಡೆಸಿದೆ. ಇದೇ ರೀತಿ ಪತ್ರಿಕಾ ವಿತರಕರಿಗೂ ಸೌಲಭ್ಯಗಳನ್ನು ನೀಡಿದರೆ ದುಡಿಮೆಯನ್ನೇ ನಂಬಿ ಬದುಕುತ್ತಿರುವ ಪತ್ರಿಕಾ ವಿತಕರಿಗೂ ಅನುಕೂಲ ಕಲ್ಪಿಸಬೇಕಾಗಿದೆ. ಮುಂಜಾನೆಯೇ ಎದ್ದು ಮನೆ ಮನೆಗೆ ಪತ್ರಿಕೆ ಹಂಚುತ್ತಿರುವ ವಿತರಕರಿಗೆ ಜೀವನ ಭದ್ರತೆ ಇಲ್ಲ. ಇವರಿಗೆ ಆರೋಗ್ಯ ವಿಮೆ, ಮಕ್ಕಳ ಶಿಕ್ಷಣಕ್ಕಾಗಿ ಸಾಲಸೌಲಭ್ಯ, ಉಚಿತ ನಿವೇಶನ, ಗೃಹ ನಿರ್ಮಾಣಕ್ಕೆ ಸಾಲ ಇನ್ನಿತರ ಸೌಲಭ್ಯಗಳನ್ನು ಕೊಟ್ಟರೆ ಮುನ್ನೆಲೆಗೆ ಬರುತ್ತಾರೆ. ಆರ್ಥಿಕವಾಗಿ ಇನ್ನಷ್ಟು ಸಬಲರಾಗುತ್ತಾರೆ. ಈ ನಿಟ್ಟಿನಲ್ಲಿ ಪತ್ರಿಕಾ ವಿತರಕರ ಅಭಿಪ್ರಾಯಗಳು, ಒತ್ತಾಯಗಳನ್ನು ‘ಲೌಡ್ ಸ್ಪೀಕರ್’ನಲ್ಲಿ ಸಂಗ್ರಹಿಸಲಾಗಿದೆ.

ಕಾಯಕವೇ ಕೈಲಾಸ
ಎಲ್ಲ ಉದ್ಯೋಗ, ವ್ಯಾಪಾರಗಳು ಅದರದೇ ಆದ ಮೌಲ್ಯಗಳನ್ನು ಹೊಂದಿವೆ. ಮಾಜಿ ರಾಷ್ಟ್ರಪತಿ ದಿ.ಎಪಿಜೆ ಅಬ್ದುಲ್ ಕಲಾಂ ಬಾಲ್ಯದಲ್ಲಿ ಪತ್ರಿಕೆ ಹಾಕುತ್ತಿದ್ದರು. ಜ್ಞಾನಾರ್ಜನೆಯನ್ನು ವೃದ್ಧಿಸುವ ಪತ್ರಿಕೆಗಳನ್ನು ಮನೆ ಮನೆಗೆ ಹಂಚುವುದು ಕೆಳ ಮಟ್ಟದ ಕೆಲಸವಲ್ಲ. ಇತ್ತೀಚಿನ ದಿನಗಳಲ್ಲಿ ಪತ್ರಿಕೆ ಹಾಕಲು ಹುಡುಗರ ಕೊರತೆ ಎಲ್ಲ ಏಜೆಂಟ್‌ಗಳನ್ನೂ ಕಾಡುತ್ತಿದೆ. ಪತ್ರಿಕೆ ಹಾಕುವ ಕೆಲಸಕ್ಕೆ ಬರುವ ಹುಡುಗರು ಸಮಾಜದ ಪರಿಚಯ, ಶಿಸ್ತು, ತಾಳ್ಮೆಯಂತಹ ಜೀವನ ಪಾಠಗಳನ್ನು ಕಲಿಯಬಹುದು. ನನಗೆ ನನ್ನ ಕಾಯಕವೇ ಕೈಲಾಸ.

ಎಸ್.ಮಲ್ಲೇಶ್, ಪತ್ರಿಕಾ ವಿತರಕ, ಕೊಳ್ಳೇಗಾಲ

ಸರ್ಕಾರದಿಂದ ಸೌಲಭ್ಯ ಕಲ್ಪಿಸಿ
ಪತ್ರಿಕೆ ಹಾಕುವವರಿಗೆ ವಿತರಕರ ದಿನಾಚರಣೆಯ ಶುಭಾಶಯಗಳು. ಪತ್ರಿಕೆ ಹಂಚುವವರು ಮಳೆ, ಚಳಿ, ಬಿಸಿಲು ಎನ್ನದೆ ಕೆಲಸ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರದಿಂದ ಪತ್ರಿಕಾ ವಿತರಕರಿಗೆ ಸೌಲಭ್ಯಗಳು ಸಿಗುತ್ತಿಲ್ಲ. ಇದರ ಬಗ್ಗೆ ಸೂಕ್ತ ಮಾಹಿತಿಯೂ ಲಭ್ಯವಿಲ್ಲ. ಚಾ.ನಗರದಲ್ಲಿ ನಾವು ಈಗ ಸಂಘಟನೆ ಮಾಡಿ ವಿತರಕರನ್ನು ಒಗ್ಗೂಡಿಸಿದ್ದೇವೆ. ಸರ್ಕಾರದ ಸೌಲಭ್ಯಗಳನ್ನು ಪಡೆಯವತ್ತ ಮುನ್ನಡೆಯುತ್ತಿದ್ದೇವೆ. ಆದರೆ, ಪತ್ರಿಕಾ ವಿತರಕರು ಸಂಘಟಿತರಾಗದೆ ಇರುವ ಕಡೆಗಳಲ್ಲಿ ಸರ್ಕಾರದ ಸೌಲಭ್ಯಗಳ ಬಗ್ಗೆ ಏನೂ ತಿಳಿಯುವುದಿಲ್ಲ.

ಎನ್.ಅಕ್ಷಯ್, ಪ್ರಧಾನ ಕಾರ್ಯದರ್ಶಿ, ಪತ್ರಿಕಾ ವಿತರಕರ ಸಂಘ, ಚಾಮರಾಜನಗರ

ವಿಮೆ ಸೌಲಭ್ಯ ಅಗತ್ಯ
ನಿತ್ಯ ಮುಂಜಾನೆ ಪತ್ರಿಕೆ ವಿತರಣೆ ಕಾರ್ಯದಲ್ಲಿ ತೊಡಗುವ ವಿತರಕರಿಗೆ ಅಪಘಾತ ಸೇರಿದಂತೆ ಅನಾರೋಗ್ಯಕ್ಕೆ ತುತ್ತಾದರೆ ವಿಮಾ ಸೌಲಭ್ಯ ನೀಡಬೇಕು. ಜೀವನ ಭದ್ರತೆ, ಸೌಲಭ್ಯ ಒದಗಿಸಬೇಕು. ಎಲ್ಲ ಯೋಜನೆ ಹಾಗೂ ಅಗತ್ಯ ಸಾಲಸೌಲಭ್ಯ, ವೈದ್ಯಕೀಯ, ಪಿಂಚಣಿ ಹಾಗೂ ನಮ್ಮಂತಹ ಕಾರ್ಮಿಕರು ಉನ್ನತ ಶಿಕ್ಷಣಕ್ಕೆ ಪೂರಕವಾದ ಸಹಕಾರ ಒದಗಿಸಿಕೊಡಲು ಅಗತ್ಯ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಮುಂದಾಗಬೇಕು.

ಆರ್.ಎನ್.ನವೀನ್‌ಕುಮಾರ್, ಕಾರ್ಯದರ್ಶಿ, ಪತ್ರಿಕಾ ವಿತರಕರ ಸಂಘ, ಚಾಮರಾಜನಗರ

ಕಾಯಕಕ್ಕೆ ಕೌಟುಂಬಿಕ ಹಿನ್ನೆಲೆ
ನಾನು ಮಾಡುತ್ತಿರುವ ಪತ್ರಿಕೆ ವಿತರಣೆಯ ಕಾಯಕಕ್ಕೆ ಕೌಟುಂಬಿಕ ಹಿನ್ನೆಲೆ ಇದೆ. ನನ್ನ ಮಾವ, ಪತಿ, ಮೈದುನ ಎಲ್ಲರೂ ಪತ್ರಿಕೆ ವಿತರಣೆ ಮಾಡುತ್ತಿದ್ದಾರೆ. ನಾನು ಗುಂಡ್ಲುಪೇಟೆ ಬಸ್ ನಿಲ್ದಾಣದಲ್ಲಿ ಪತ್ರಿಕೆಗಳನ್ನು ಮಾರಾಟ ಮಾಡುತ್ತಿದ್ದೇನೆ. ಈ ವೃತ್ತಿ ನನಗೆ ತೃಪ್ತಿ ತಂದಿದೆ.

ನಿರ್ಮಲಾ, ಗುಂಡ್ಲಪೇಟೆ

ಗೌರವಧನ ನೀಡಲಿ
ಪತ್ರಿಕೆ ಹಂಚುವವರು ಶ್ರಮಜೀವಿಗಳು. ನಮಗೆ ಜೀವವಿಮೆ ಮಾಡಿಕೊಡುವುದರ ಜತೆಗೆ, ರಾಜ್ಯ ಸರ್ಕಾರದಿಂದ ಗೌರವಧನ ನೀಡಬೇಕು. ಆಂಗ್ಲ ಭಾಷೆಯ ವ್ಯಾಮೋಹದಿಂದ ನಗರ ಪ್ರದೇಶಗಳಲ್ಲಿ ಮಾತೃಭಾಷೆಗೆ ಜಾಗವಿಲ್ಲದಂತಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಮಾತ್ರ ಕನ್ನಡ ಉಳಿದಿದೆ. ಇದಕ್ಕೆ ಪರೋಕ್ಷವಾಗಿ ಕನ್ನಡ ಪತ್ರಿಕೆ ವಿತರಕರೂ ಕಾರಣರಾಗಿದ್ದಾರೆ. ಹಾಗಾಗಿ ನಾವು ಕನ್ನಡದ ಕೆಲಸ ಮಾಡುತ್ತಿರುವವರು. ಭಾಷೆಗಾಗಿ ದುಡಿಯುತ್ತಿರುವವರನ್ನು ಸರ್ಕಾರ ಗಮನಿಸಬೇಕು.

ಎಲ್.ವಿಷ್ಣುಕುಮಾರ್, ಅಂಬಳೆ, ಯಳಂದೂರು

ಬಸ್‌ಪಾಸ್ ನೀಡಿ
ರಾಜ್ಯ ಸರ್ಕಾರ ಪತ್ರಿಕಾ ವಿತರಕರ ಶ್ರೇಯಸ್ಸಿಗೆ ಹೊಸದಾಗಿ ಯೋಜನೆ ರೂಪಿಸಬೇಕು. ಇದಕ್ಕಾಗಿ ವಿತರಕರ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸಬೇಕು. ಕಾಂಗ್ರೆಸ್ ಸರ್ಕಾರ ೋಷಣೆ ಮಾಡಿರುವ ಶಕ್ತಿ ಯೋಜನೆಯ ಮೂಲಕ ಮಹಿಳೆಯರು ಉಚಿತ ಸಾರಿಗೆ ಪ್ರಯಾಣ ಮಾಡುತ್ತಿದ್ದಾರೆ. ಇದೇ ರೀತಿ ಪತ್ರಿಕೆ ವಿತರಕರಿಗೂ ಉಚಿತ ಪ್ರಯಾಣದ ಸೌಲಭ್ಯವನ್ನು ಒದಗಿಸಬೇಕು. ಇದರಿಂದ ಹಳ್ಳಿ ಪ್ರದೇಶಗಳಲ್ಲಿ ಪತ್ರಿಕೆ ಹಂಚಲು ನೆರವಾಗುತ್ತದೆ.

ಬೀರೇಶ್ ಗಾಣಿಗ, ಗುಂಡ್ಲುಪೇಟೆ

ಕಲ್ಯಾಣ ಮಂಡಳಿ ಸ್ಥಾಪನೆ
ಪತ್ರಿಕಾ ವಿತರಕರಿಗೆ ರಾಜ್ಯ ಸರ್ಕಾರದಿಂದ ಗುರುತಿನ ಚೀಟಿ ವಿತರಣೆ ಮಾಡಬೇಕು. ಕಾರ್ಮಿಕ ಇಲಾಖೆಯಲ್ಲಿ ನೋಂದಣಿ ಮಾಡಿಸಿ ಸೌಲಭ್ಯಗಳನ್ನು ಕೊಡಿಸಿದರೆ ಉತ್ತಮ. ಅಸಂಘಟಿತ ಕಾರ್ಮಿಕರ ವಲಯಕ್ಕೆ ಸೇರಿರುವ ಪತ್ರಿಕಾ ವಿತರಕರಿಗೂ ಕಲ್ಯಾಣ ಮಂಡಳಿ ಸ್ಥಾಪನೆ ಮಾಡಬೇಕು. ಇಲ್ಲದಿದ್ದರೆ ಕಟ್ಟಡ ಕಾರ್ಮಿಕರ ಶ್ರೇಯೋಭಿವೃದ್ಧಿಗಾಗಿ ರೂಪಿಸಿರುವ ಮಂಡಳಿಯಲ್ಲೇ ನೋಂದಣಿ ಮಾಡಿಕೊಳ್ಳಲು ಅನುಕೂಲ ಕಲ್ಪಿಸಿಕೊಡಬೇಕು.

ಮಾದೇಶ್, ರಾಮಾಪುರ, ಹನೂರು

ಶಿಕ್ಷಣಕ್ಕೆ ಪ್ರೋತ್ಸಾಹ
ಬಡವರು, ಮಧ್ಯಮ ವರ್ಗದವರು ಪತ್ರಿಕಾ ವಿತರಕ ವೃತ್ತಿಯಲ್ಲಿ ತೊಡಗಿಕೊಂಡಿದ್ದಾರೆ. ಇದು ಕೆಲವರಿಗೆ ಪ್ರವೃತ್ತಿಯಾದರೆ, ಮತ್ತೆ ಕೆಲವರಿಗೆ ಪ್ರಧಾನ ಉದ್ಯೋಗವೇ ಆಗಿಬಿಟ್ಟಿದೆ. ಈ ಹಿನ್ನೆಲೆಯಲ್ಲಿ ಪತ್ರಿಕಾ ವಿತರಕರಿಗೆ ಆರೋಗ್ಯ ವಿಮೆ ಮಾಡಿಸಿಕೊಡಿ. ವಿತರಕರ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿ. ಉನ್ನತ ಶಿಕ್ಷಣಕ್ಕೆ ಸಾಲ ಸೌಲಭ್ಯವನ್ನು ಒದಗಿಸಿಕೊಡಬೇಕು. ಈ ಸೌಲಭ್ಯವನ್ನು ಪತ್ರಿಕಾ ವಿತರಕರ ಮಕ್ಕಳಿಗಾಗಿಯೇ ಪ್ರತ್ಯೇಕವಾಗಿ ನೀಡಬೇಕು.

ಇರ್ಫಾನ್, ಯಳಂದೂರು

ಓದಿನ ಅನುಭವ ನೀಡದು
ಇತ್ತೀಚಿನ ದಿನಗಳಲ್ಲಿ ಮೊಬೈಲ್ ಬಳಕೆ ಪತ್ರಿಕೆ ಮೇಲೆ ಪರಿಣಾಮ ಬೀರುತ್ತಿದೆ. ಮೊಬೈಲ್‌ನಲ್ಲೇ ಎಲ್ಲ ಮಾಹಿತಿ ಸಿಗುತ್ತಿರುವುದರಿಂದ ಓದುಗರು ಪತ್ರಿಕೆಗಳತ್ತ ನಿರಾಸಕ್ತಿ ಬೆಳೆಸಿಕೊಳ್ಳುತ್ತಿದ್ದಾರೆ. ಹದಿಹರೆಯದವರು ಮೊಬೈಲ್ ವ್ಯಸನಿಗಳಾಗಿರುವ ಈ ದಿನಗಳಲ್ಲಿ ಪಾಲಕರು ದಿನನಿತ್ಯದ ಸುದ್ದಿಗಳನ್ನು ತಿಳಿದುಕೊಳ್ಳಲು ಮಕ್ಕಳಿಗೆ ಪತ್ರಿಕೆ ಓದುವ ಹವ್ಯಾಸವನ್ನು ಬೆಳೆಸಬೇಕು.

ಸಿದ್ದಪ್ಪ, ಮರಿಯಾಲ, ಚಾಮರಾಜನಗರ

ಆದಾಯ ತುಂಬ ಕಡಿಮೆ
ಪತ್ರಿಕಾ ವಿತರಕರ ಆದಾಯ ತುಂಬ ಕಡಿಮೆ. ಮನೆ ಮನೆಗೆ ಪತ್ರಿಕೆ ಹಂಚುವುದಕ್ಕೆ ಹೆಚ್ಚು ಸಮಯ ಹಿಡಿಯುತ್ತದೆ. ಶ್ರಮದಾಯಕ ಕೆಲಸವನ್ನು ಮಾಡುತ್ತಿರುವುದನ್ನು ಓದುಗರು ಅರ್ಥ ಮಾಡಿಕೊಂಡು ತಿಂಗಳಲ್ಲಿ ನಿಗದಿತ ದಿನದಂದು ಬಿಲ್ ಪಾವತಿ ಮಾಡಬೇಕು. ಪತ್ರಿಕಾ ವಿತರಕರಲ್ಲಿ ಹುಡುಗರಿಗೆ ಸೈಕಲ್, ಹಿರಿಯರಿಗೆ ಬೈಕ್ ಕೊಡುವಂತಾಗಬೇಕು. ನಮ್ಮ ಮಕ್ಕಳ ಆರೋಗ್ಯ, ಶಿಕ್ಷಣಕ್ಕೆ ಸೌಲಭ್ಯವನ್ನು ಒದಗಿಸಿಕೊಡಬೇಕು.
ಎಸ್.ಶೇಖರಪ್ಪ, ಉಪಾಧ್ಯಕ್ಷ, ಪತ್ರಿಕಾ ವಿತರಕರ ಸಂಘ, ಚಾಮರಾಜನಗರ