ಜಿಲ್ಲೆ

ವೈಜ್ಞಾನಿಕ ಕೃಷಿ ಪದ್ಧತಿ ಅನುಸರಿಸಿ

ಕಿರಣ್ ಮಾದರಹಳ್ಳಿ

ಚಾಮರಾಜನಗರ: ಕೃಷಿಯಲ್ಲಿ ಸ್ಥಿರತೆ ತರುವ ಉದ್ದೇಶದಿಂದ ವೈಜ್ಞಾನಿಕ ಕೃಷಿ ಪದ್ಧತಿ ಅನುಸರಿಸಿ ಎಂದು ಕೃಷಿ ಮಹಾವಿದ್ಯಾಲಯ ವಿಶೇಷಾಧಿಕಾರಿ ಡಾ.ಸಿ.ದೊರೆಸ್ವಾಮಿ ಸಲಹೆ ನೀಡಿದರು.

ತಾಲೂಕಿನ ಹರದನಹಳ್ಳಿ ಫಾರ್ಮ್ ಬಳಿ ಇರುವ ಕೃಷಿ ವಿಜ್ಞಾನ ಕೇಂದ್ರದಲ್ಲಿ ಶುಕ್ರವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ವಾಣಿಜ್ಯ ಬೆಳೆಗಳಷ್ಟೇ ಅಲ್ಲದೆ, ಸಿರಿಧಾನ್ಯ ಬೆಳೆಗಳಿಗೆ ಒತ್ತು ನೀಡಿ ಬದಲಾಗುತ್ತಿರುವ ಹವಾಮಾನಕ್ಕೆ ಮತ್ತು ಕೃಷಿಯಲ್ಲಿ ಸ್ಥಿರತೆಗೆ ವೈಜ್ಞಾನಿಕ ಕೃಷಿ ಪದ್ಧತಿಗಳನ್ನು ಅನುಸರಿಸಬೇಕು. ಸಿರಿಧಾನ್ಯಗಳ ವಿವಿಧ ಮೌಲ್ಯವರ್ಧಿತ ಪದಾರ್ಥಗಳು ಔಷಧೀಯ ಗುಣಗಳನ್ನು ಒಳಗೊಂಡಿದ್ದು ಇವುಗಳನ್ನು ದಿನನಿತ್ಯದ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳಬೇಕಾಗಿದೆ ಎಂದು ತಿಳಿಸಿದರು.
ಬೆಂಗಳೂರು ಕೃ.ವಿ.ವಿ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ. ಎಚ್. ಜಯರಾಮಯ್ಯ ಮಾತನಾಡಿ, ಸರಿಯಾದ ಪ್ರಮಾಣದಲ್ಲಿ ರಾಸಾಯನಿಕ ಮತ್ತು ಸಾವಯವ ಪದ್ಧತಿಗಳ ಮೂಲಕ ಬೆಳೆಯಲ್ಲಿ ಸಮತೋಲನ ಕಾಪಾಡಿಕೊಳ್ಳಬೇಕಾಗಿದೆ ಹಾಗೂ ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕಾಗಿದೆ. ನೈಸರ್ಗಿಕ ಸಂಪನ್ಮೂಲಗಳ ಸದ್ಬಳಕೆ ಕಡೆ ಕೃಷಿಕರು ಹೆಚ್ಚಿನ ಗಮನ ಹರಿಸಬೇಕು. ಮಣ್ಣಿನ ಆರೋಗ್ಯದ ನಿರ್ವಹಣೆಗೆ ಒತ್ತು ನೀಡಬೇಕಿದೆ ಎಂದರು.

ಅರೆ ನೀರಾವರಿ ಭತ್ತದ ಪದ್ಧತಿಗಳನ್ನು ಬಳಕೆ ಮಾಡಿಕೊಳ್ಳಬೇಕು. ಈ ಮೂಲಕ ಕಡಿಮೆ ಜಮೀನಿನಲ್ಲಿ ಹೆಚ್ಚು ಆದಾಯ ಗಳಿಸಬಹುದಾಗಿದೆ. ಪೋಷಕಾಂಶಗಳ ನಿರ್ವಹಣೆ ಹಾಗೂ ಹವಾಮಾನ ವೈಪರೀತ್ಯದ ದುಷ್ಪರಿಣಾಮಗಳ ಬಗ್ಗೆ ರೈತರು ಸದಾ ಎಚ್ಚರಿಕೆಯಿಂದ ಇರಬೇಕು. ಬದಲಾದ ಹವಾಮಾನ ಸ್ಥಿತಿಗೆ ಸಿರಿಧಾನ್ಯಗಳು ಸೂಕ್ತವಾಗಿದ್ದು, ಮಣ್ಣು ಮತ್ತು ನೀರಿನ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ಕೊಡುವುದರಿಂದ ಖರ್ಚು ಕಡಿಮೆಯಾಗುತ್ತದೆ. ಕೃಷಿ ಅರಣ್ಯ ಪದ್ಧತಿ ಜತೆಗೆ ವೈಜ್ಞಾನಿಕ ಕೃಷಿ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ವಿವಿಧ ಸುಧಾರಿತ ಸಿರಿಧಾನ್ಯಗಳು ಮತ್ತು ಮೌಲ್ಯವರ್ಧಿತ ಉತ್ಪನ್ನಗಳ ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಕೃಷಿ ಅಧಿಕಾರಿ ಗೋವಿಂದ ನಾಯಕ್ ಕೃಷಿ ಅಧಿಕಾರಿ ವಿ.ರೂಪಾ, ಹಿರಿಯ ವಿಜ್ಞಾನಿ ಡಾ.ಜಿ.ಎಸ್.ಯೋಗೇಶ್, ಪ್ರಾಧ್ಯಾಪಕಿ ಡಾ.ಟಿ.ಎಸ್. ಸುಕನ್ಯಾ, ಬೇಸಾಯಶಾಸ್ತ್ರದ ವಿಜ್ಞಾನಿ ಡಾ.ಎಂ.ಕೆ.ಶ್ರುತಿ, ಕೇಂದ್ರದ ವಿಜ್ಞಾನಿಗಳಾದ ಡಾ.ಜಿ.ಸೋಮು, ಡಾ.ಜೆ.ದೀಪಾ, ಎನ್.ಎಸ್.ಸುಪ್ರಿಯಾ, ಎಚ್.ಪಿ.ರಜತ್ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.