ಜಿಲ್ಲೆ

ಸಮೃದ್ಧ ಪ್ರಕೃತಿ, ಕಲೆ, ಸಂಸ್ಕೃತಿಯ ಜಿಲ್ಲೆ ಚಾಮರಾಜನಗರ

reportermys

ಕೊಳ್ಳೇಗಾಲ: ಇಡೀ ರಾಜ್ಯದಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿ, ಸಮೃದ್ಧ ಪ್ರಕೃತಿ ಸಂಪತ್ತನ್ನು ಹೊಂದಿರುವ ಏಕೈಕ ಜಿಲ್ಲೆ ಎಂದರೆ ಚಾಮರಾಜನಗರ ಎಂದು ಶ್ರೀ ಮಲೆ ಮಹದೇಶ್ವರ ಬೆಟ್ಟದ ಸಾಲೂರು ಬ್ರಹನ್ಮಠದ ಪೀಠಾಧಿಪತಿ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.


ಪಟ್ಟಣದ ವಿಶ್ವಚೇತನ ಸಮೂಹ ವಿದ್ಯಾ ಸಂಸ್ಥೆಯ ಆವರಣದಲ್ಲಿ ಇತ್ತೀಚೆಗೆ ಎಚ್.ಕೆ. ಟ್ರಸ್ಟ್ ಆಯೋಜಿಸಿದ್ದ ವಿಶ್ವ ಚೇತನೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, ಚಾಮರಾಜನಗರ ಮಲೆ ಮಹದೇಶ್ವರರು ನೆಲೆಯೂರಿದ ಧಾರ್ಮಿಕ ನೆಲೆಗಟ್ಟು ಹೊಂದಿರುವ ಜಿಲ್ಲೆ. ಸಾಧು-ಸಂತರು, ಪವಾಡ ಪುರುಷರ ತಪೋಭೂಮಿ. ಇಂತಹ ಜಿಲ್ಲೆಯಲ್ಲಿ ನಾವೆಲ್ಲರೂ ಜನ್ಮ ತಾಳಲು ಪುಣ್ಯ ಮಾಡಿದ್ದೆವು ಎಂದರು.
ಎರಡು ವರ್ಷಗಳ ಹಿಂದೆ ಬಂದಿದ್ದ ಕೋವಿಡ್‌ನಿಂದಾಗಿ ದೇಶವೇ ಸಂಕಷ್ಟಕ್ಕೆ ತುತ್ತಾಗಿತ್ತು. ಆದರೆ ದಿನಕಳೆದಂತೆ ಕರೊನಾ ಕರಿನೆರಳು ದೂರ ಸರಿದು ದೇಶ ಸಮೃದ್ಧವಾಗಿದೆ. ಇದಕ್ಕೆ ಕಾರಣ ದೇಶದ ಧಾರ್ಮಿಕ ನೆಲೆಗಟ್ಟು ಎಂದು ತಿಳಿಸಿದರು.


ಡಾ.ಬಿ.ಆರ್. ಅಂಬೇಡ್ಕರ್ ಅವರು ದೇಶಕ್ಕೆ ಉತ್ತಮ ಸಂವಿಧಾನ ನೀಡಿ ಎಲ್ಲರೂ ಸರಿಸಮನಾಗಿ ಜೀವಿಸುವ ಹಕ್ಕನ್ನು ನೀಡಿದ್ದಾರೆ. ಇಂತಹ ಮಹಾನ್ ವ್ಯಕ್ತಿ ಭಾರತ ದೇಶದಲ್ಲಿ ಜನ್ಮ ತಾಳಿದ್ದಾರೆ. ಇವರ ಆದರ್ಶಗಳನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ದಿ.ಕೃಷ್ಣಸ್ವಾಮಿ ಅವರು ಕೊಳ್ಳೇಗಾಲದಲ್ಲಿ ಶಿಕ್ಷಣ ಸಂಸ್ಥೆ ಕಟ್ಟಿ ಬಡಮಕ್ಕಳ ಶೈಕ್ಷಣಿಕ ಪ್ರಗತಿಗೆ ಶ್ರಮಿಸಿದ್ದಾರೆ. ಇವರ ದಾರಿಯಲ್ಲೇ ಅವರ ಮಗ ಮಹಾನಂದ ಅವರೂ ಸಮಾಜಮುಖಿ ಕೆಲಸ ಮಾಡುತ್ತಿದ್ದಾರೆ. ಅವರ ಸೇವೆ ಮುಂದುವರಿಯಲಿ ಎಂದು ಹಾರೈಸಿದರು.


ಗೌರವ ಸಮರ್ಪಣೆ: ಕನ್ನಡ ರಾಜೋತ್ಸವ ಪ್ರಶಸ್ತಿ ಪುರಸ್ಕೃತ ಸೋಲಿಗರ ಮಾದಮ್ಮ ಅವರಿಗೆ ವಿಶ್ವಚೇತನೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಬಳಿಕ ಶಾಲಾ-ಕಾಲೇಜು ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಎಎಸ್ಪಿ ಕೆ.ಎಸ್. ಸುಂದರರಾಜು, ಡಿವೈಎಸ್ಪಿ ನಾಗರಾಜು ಮಾತನಾಡಿದರು. ನಗರಸಭೆ ಅಧ್ಯಕ್ಷೆ ಸಿ.ಎನ್. ರೇಖಾ, ಎಚ್.ಕೆ. ಟ್ರಸ್ಟ್ ಕಾರ್ಯದರ್ಶಿ ಪ್ರೇಮಲತಾ ಕೃಷ್ಣಸ್ವಾಮಿ, ಚಲನಚಿತ್ರ ನಿರ್ದೇಶಕ ಮಹೇಶ್‌ಬಾಬು, ಚಲನಚಿತ್ರ ನಟ ನಾಗಭೂಷಣ್, ಸಂಗೀತ ನಿರ್ದೇಶಕ ವಾಸುಕಿ ವೈಭವ್, ಸಂಯೋಜಕ ಜಗದೀಶ್. ಬೆಂಗಳೂರು ಸಿಐಡಿ ಡಿವೈಎಸ್ಪಿ ಮಹಾನಂದ ಕೃಷ್ಣಸ್ವಾಮಿ, ಪಟ್ಟಣ ಪೊಲೀಸ್ ಠಾಣೆಯ ಪಿಎಸ್‌ಐ ಚೇತನ್, ಆಟೋ ಮೋಟಾರ್ಸ್ ಅಧ್ಯಕ್ಷ ವೆಂಕಟೇಶ್ ಗೌಡ, ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಲೋಕೇಶ್, ರೋಟರಿ ಮಿಡ್ ಟೌನ್ ಅಧ್ಯಕ್ಷ ವಿನಯ್ ಮತ್ತಿತರರಿದ್ದರು.